ಶುಕ್ರವಾರ, ನವೆಂಬರ್ 22, 2019
20 °C

ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘಕ್ಕೆ ಹೊಸ ಅಧ್ಯಕ್ಷ

Published:
Updated:
Prajavani

ಚಾಮರಾಜನಗರ: ಸರ್ಕಾರಿ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘದ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಡಿ.ಎಂ.ರಾಠೋಡ ಅವರು ಆಯ್ಕೆಯಾಗಿದ್ದಾರೆ. 

‘ಆಗಸ್ಟ್‌ 18ರಂದು ನಡೆದಿದ್ದ ಕಾರ್ಯಕಾರಿಣಿಯಲ್ಲಿ ಎಲ್ಲಾ ಜಿಲ್ಲಾ ಘಟಕಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಪರಿಷತ್ತಿನ ಸದಸ್ಯರು ಒಮ್ಮತದಿಂದ ರಾಠೋಡ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ತೀರ್ಮಾನಿಸಿದ್ದರು. ನಗರದಲ್ಲಿ ಶನಿವಾರ (ಸೆ.14) ನಡೆದ ಸಂಘದ ಶೈಕ್ಷಣಿಕ ಸಮ್ಮೇಳನದಲ್ಲಿ ಹೊಸ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ ಅವರು ಅಧಿಕಾರ ಸ್ವೀಕರಿಸಿದ್ದಾರೆ’ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

"2011–12ನೇ ಸಾಲಿನಲ್ಲಿ ನಮ್ಮ ಸಂಘವನ್ನು ರಚಿಸಲಾಗಿತ್ತು. ಅಂದಿನಿಂದ ಇಲ್ಲಿವರೆಗೆ ಎ.ರಾಜಗೋಪಾಲಾಚಾರ್ ಅವರು ಅಧ್ಯಕ್ಷರಾಗಿದ್ದರು. ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು ಎಂಬ ಅಭಿಪ್ರಾಯ ಸದಸ್ಯರು ವ್ಯಕ್ತಪಡಿಸಿದ್ದರು. ಹಾಗಾಗಿ, ಬಾಗಲಕೋಟೆ ಜಿಲ್ಲೆಯವರಾದ ಡಿ.ಎಂ.ರಾಠೋಡ ಅವರನ್ನು ಆಯ್ಕೆ ಮಾಡಲಾಗಿದೆ’ ಎಂದು ಹೇಳಿದರು. 

ದಾವಣಗೆರೆಯಲ್ಲಿ ಸಮ್ಮೇಳನ: ಡಿ.ಎಂ.ರಾಠೋಡ ಅವರು ಮಾತನಾಡಿ, ‘ಶನಿವಾರ ಮೊದಲ ಕಾರ್ಯಕಾರಿಣಿ ನಡೆಸಲಾಗಿದೆ. ಮುಂದಿನ ವರ್ಷ ದಾವಣಗೆರೆಯಲ್ಲಿ ಶೈಕ್ಷಣಿಕ ಸಮ್ಮೇಳನ ಮತ್ತು ಹಿಂದಿ ದಿವಸ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ’ ಎಂದರು.

ಸಂಘಟನಾ ಕಾರ್ಯದರ್ಶಿ ಖಾಜಾಸಾಹೇಬ್‌ ಕರಡಿ, ಸಹ ಕಾರ್ಯದರ್ಶಿ ಕೆ.ಮೊಹಮ್ಮದ್‌ ರಿಜ್ವಾನ್‌ ಉಲ್ಲಾ ಮತ್ತು ಸಂಘದ ಬಾಗಲಕೋಟೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅವಿನಾಶ್‌ ಹಿರೇಮಠ ಇದ್ದರು.

ಪ್ರತಿಕ್ರಿಯಿಸಿ (+)