ಸೋಮವಾರ, ನವೆಂಬರ್ 18, 2019
23 °C

ಗರ್ಭಿಣಿಯರಲ್ಲಿ ಆಟೋಇಮ್ಯೂನ್‌ ಕಾಯಿಲೆ ನಿರ್ವಹಣೆ ಹೇಗೆ?

Published:
Updated:
Prajavani

ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ವೈರಸ್‌ಗಳು ಮತ್ತು ಬ್ಯಾಕ್ಟೀರಿಯಾ ಸೋಂಕಿನಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಆರೋಗ್ಯಕರ ರೋಗನಿರೋಧಕ ಶಕ್ತಿಯನ್ನು ಹೊಂದುವುದು ಬಹಳ ಮುಖ್ಯ. ಈ ರೋಗ ನಿರೋಧಕ ಶಕ್ತಿ ಕುಂದಿದಾಗ, ಸೋಂಕಿನಿಂದ ರಕ್ಷಿಸಲು ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಪ್ರತಿ ದಾಳಿಗೆ ಸಿದ್ಧವಾಗುತ್ತದೆ. ಅದು ತನ್ನದೇ ಆದ ಅಂಗಾಂಶಗಳ ಮೇಲೆ ದಾಳಿ ಮಾಡಿದಾಗ ಉರಿಯೂತ ಮತ್ತು ಇತರ ಗಂಭೀರ ಸ್ಥಿತಿಗಳಿಂದ ಆಟೋಇಮ್ಯೂನ್ (ಸ್ವಯಂ ನಿರೋಧಕ) ಕಾಯಿಲೆಗಳು ಶುರುವಾಗುತ್ತವೆ. ಆಟೋಇಮ್ಯೂನ್ ಕಾಯಿಲೆಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದಕ್ಕೆ ಹಲವಾರು ಕಾರಣಗಳಿರಬಹುದು. ಆದರೆ ಅಂತಹ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಶೇ 75ರಷ್ಟು ಮಹಿಳೆಯರು ಎಂದು ಅಧ್ಯಯನಗಳು ತೋರಿಸಿವೆ.

ಈ ರೀತಿಯ ಕಾಯಿಲೆಗಳಲ್ಲಿ ಹಲವು ಬಗೆಗಳಿದ್ದರೂ ಮುಖ್ಯವಾಗಿ ಎರಡು ವಿಧಗಳಲ್ಲಿ ವಿಭಾಗಿಸಬಹುದು.

* ಟೈಪ್ 1 ಮಧುಮೇಹ, ಕ್ರೋನ್ಸ್ ಅಥವಾ ಕರುಳಿನ ಉರಿಯೂತದ ಕಾಯಿಲೆ. ಇವು ಒಂದು ಅಂಗ ಅಥವಾ ಅಂಗಾಂಶದ ಮೇಲೆ ಪರಿಣಾಮ ಬೀರುವಂತಹ ಕಾಯಿಲೆಗಳು.

ರುಮಟಾಯ್ಡ್‌ ಸಂಧಿವಾತ, ಮಲ್ಟಿಪಲ್ ಸ್ಕ್ಲೆರೋಸಿಸ್, ವ್ಯವಸ್ಥಿತ ಲೂಪಸ್ ಎರಿಥೆಮಾಟೋಸಸ್ (ಎಸ್‌ಎಲ್‌ಇ) ಮುಂತಾದವು. ಇವು ಇಡೀ ದೇಹದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವ ರೋಗಗಳು.

ಆಟೋಇಮ್ಯೂನ್ ಕಾಯಿಲೆಗಳ ಕೆಲವು ಲಕ್ಷಣಗಳೆಂದರೆ ಕೀಲುಗಳಲ್ಲಿ ನೋವು, ಬಿಗಿತ, ಅತಿಯಾದ ದಣಿವು, ತಲೆನೋವು. ಆದರೆ ಈ ರೋಗ ಲಕ್ಷಣಗಳು ಕಂಡುಬಂದರೆ ನೀವು ಆಟೋಇಮ್ಯೂನ್‌ ಕಾಯಿಲೆಗಳಿಗೆ ಗುರಿಯಾಗಿದ್ದೀರಿ ಎಂದಲ್ಲ. ಆರಂಭಿಕ ಹಂತದಲ್ಲಿ ಆಟೋಇಮ್ಯೂನ್ ಕಾಯಿಲೆಯನ್ನು ಪತ್ತೆ ಹಚ್ಚುವುದು ಕಷ್ಟವೇ. ಇದನ್ನು ಬೇರೆ ಬೇರೆ ವೈದ್ಯಕೀಯ ವಿಧಾನಗಳಿಂದ ಪತ್ತೆ ಮಾಡಬೇಕಾಗುತ್ತದೆ. ರಕ್ತ ಪರೀಕ್ಷೆಗಳು ಅದನ್ನು ದೃಢೀಕರಿಸುವ ಒಂದು ವಿಧಾನವಷ್ಟೆ.

ಗರ್ಭಾವಸ್ಥೆಯಲ್ಲಿ ಉಲ್ಬಣ

ಮಹಿಳೆಯರಲ್ಲಿ ಅವರಲ್ಲೂ ಗರ್ಭಿಣಿಯರಲ್ಲಿ ಆಟೋಇಮ್ಯೂನ್‌ ಕಾಯಿಲೆಗಳು ಅಲ್ಪಾವಧಿಯ ಮತ್ತು ದೀರ್ಘಕಾಲೀನ ಪರಿಣಾಮಗಳನ್ನು ಉಂಟು ಮಾಡಬಹುದು. ಗರ್ಭಧಾರಣೆಯು ಇಂತಹ ಕಾಯಿಲೆಗಳ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಆಟೋಇಮ್ಯೂನ್‌ ಕಾಯಿಲೆ ಹೊಂದಿರುವ ಮಹಿಳೆಯರು ಗರ್ಭಿಣಿಯಾದಾಗ, ಗರ್ಭಧಾರಣೆಯು ರುಮಟಾಯ್ಡ್ ಸಂಧಿವಾತದಂತಹ ಕಾಯಿಲೆ ಹೆಚ್ಚಾಗಲು ಕಾರಣವಾಗಬಹುದು. ಕೆಲವು ಆಟೋಇಮ್ಯೂನ್‌ ರೋಗಗಳು ಇನ್ನಷ್ಟು ಉಲ್ಬಣಗೊಳ್ಳಬಹುದು ಅಥವಾ ಯಾವುದೇ ಗಂಭೀರ ಪರಿಣಾಮ ಬೀರದೇ ಹೋಗಬಹುದು. ಇದಕ್ಕೆ ಕಾರಣಗಳೂ ಇವೆ. ಭ್ರೂಣವು ಅನುವಂಶೀಯವಾಗಿ ಗರ್ಭಿಣಿಯಿಂದ ಹೇಗೆ ಭಿನ್ನವಾಗಿದೆ ಎಂಬುದರ ಮೇಲೆ ಇದು ಅವಲಂಬಿತವಾಗಿದೆ. ಆಟೋಇಮ್ಯೂನ್‌ ಪ್ರತಿಕ್ರಿಯೆಯಲ್ಲಿ ಹಾರ್ಮೋನ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ಗರ್ಭಾ
ವಸ್ಥೆಯಲ್ಲಿ ಮತ್ತು ಋತುಬಂಧದ ಸಮಯದಲ್ಲಿ ಆಗುವಂತಹ ಹಾರ್ಮೋನ್‌ಗಳ ಬದಲಾವಣೆಗಳು ಸಹ ಆಟೋಇಮ್ಯೂನ್‌ ಕಾಯಿಲೆಗಳು ಉಲ್ಬಣಗೊಳ್ಳಲು ಪ್ರಚೋದನೆ ನೀಡಬಹುದು.

ರೋಗ ನಿರೋಧಕ ಶಕ್ತಿ ಮತ್ತು ಸಂತಾನೋತ್ಪತ್ತಿ ನಡುವೆ ಪರಸ್ಪರ ಸಂಬಂಧವಿದೆ. ಗರ್ಭಿಣಿ ಮತ್ತು ಭ್ರೂಣದ ನಡುವೆ ಪ್ಲಾಸೆಂಟಾ ಕೋಶಗಳ ವರ್ಗಾವಣೆಯಿಂದಾಗಿ ಆಟೋಇಮ್ಯೂನ್ ಅಸ್ವಸ್ಥತೆಗಳು ಸಂಭವಿಸಬಹುದು. ಭ್ರೂಣವು ತಾಯಿಯಿಂದ ಕೋಶಗಳನ್ನು ಪಡೆದರೆ, ಭ್ರೂಣದ ಕೆಲವು ಕೋಶಗಳು ತಾಯಿಯ ದೇಹದಲ್ಲಿ ದಶಕಗಳವರೆಗೂ ಇರಬಹುದು. ಶಿಶು ಹದಿಹರೆಯದ ಹಂತದಲ್ಲಿ ತಾಯಿಯ ಅನುವಂಶೀಯ ಗುಣಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಕಡಿಮೆ ತೂಕದೊಂದಿಗೆ ಅವಧಿಗೆ ಮುನ್ನವೇ ಜನಿಸುವ ಮಗು ಕೆಲವು ಅಪಾಯಕಾರಿ ಆ್ಯಂಟಿಬಾಡಿಗಳಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳೊಂದಿಗೆ ಜನಿಸಬಹುದು.

ಗರ್ಭಾವಸ್ಥೆಯಲ್ಲಿ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಆಟೋಇಮ್ಯೂನ್‌ ಕಾಯಿಲೆಗಳೆಂದರೆ ರುಮಾಟಿಕ್ ಕಾಯಿಲೆಗಳು, ಥೈರಾಯ್ಡ್ ಮತ್ತು ಟೈಪ್ 1 ಮಧುಮೇಹ. ಗರ್ಭಾವಸ್ಥೆಯ ಪ್ರತಿ ತ್ರೈಮಾಸಿಕದಲ್ಲಿ ಥೈರಾಯ್ಡ್ ಸಮಸ್ಯೆಗಳನ್ನು ಸಾಮಾನ್ಯವಾಗಿ ಗುರುತಿಸಬಹುದು ಮತ್ತು ಸರಿಯಾಗಿ ನಿರ್ವಹಣೆ ಮಾಡಬಹುದು. ಕೆಲವು ಸಂದರ್ಭಗಳಲ್ಲಿ, ಆಟೋಇಮ್ಯೂನ್‌ ಕಾಯಿಲೆಗಳಿಂದಾಗಿ ಗರ್ಭಧಾರಣೆಯನ್ನೇ ಮುಂದೂಡಬೇಕಾಗಬಹುದು, ಏಕೆಂದರೆ ಇದು ತಾಯಿಯ ಅಂಗಾಂಗಗಳಿಗೆ ತೀವ್ರ ಹಾನಿಯನ್ನುಂಟು ಮಾಡಬಹುದು ಮತ್ತು ಅನಿಯಂತ್ರಿತ ರಕ್ತದೊತ್ತಡದಂತಹ ಸಮಸ್ಯೆಗಳು ಜೀವಕ್ಕೇ ಅಪಾಯವಾಗಬಹುದು, ಮೂತ್ರಪಿಂಡಗಳಿಗೆ ಹಾನಿ ಅಥವಾ ತೀವ್ರ ಹೃದಯ ಕಾಯಿಲೆಗಳಿಗೆ ಕಾರಣವಾಗಬಹುದು; ಆದರೆ ಇದು ಬಹಳ ಅಪರೂಪ. ಅಲ್ಲದೆ, ಒಂದಕ್ಕಿಂತ ಹೆಚ್ಚು ಬಾರಿ ಗರ್ಭಿಣಿಯಾದರೆ ಇದು ತೀವ್ರ ಅಪಾಯಕ್ಕೆ ಕೂಡ ದೂಡಬಹುದು.

ಪ್ರಸವದ ನಂತರವೂ ಎಚ್ಚರಿಕೆ ಅಗತ್ಯ

ಪ್ರಸವದ ನಂತರವೂ ಹಲವು ಸಮಸ್ಯೆಗಳು ತಲೆದೋರಬಹುದು. ಸ್ತನ್ಯಪಾನ ಮತ್ತು ಚೇತರಿಕೆ ಕಷ್ಟವಾಗಬಹುದು. ಏಕೆಂದರೆ ಈ ಕಾಯಿಲೆಗಳಿಗೆ ಔಷಧ ಸೇವನೆ ಮುಂದುವರಿಸಬೇಕಾಗುತ್ತದೆ ಅಥವಾ ಬದಲಾವಣೆ ಮಾಡಬೇಕಾಗುತ್ತದೆ. ಒಂದು ಆಟೋಇಮ್ಯೂನ್ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಇನ್ನೊಂದು ಆಟೋಇಮ್ಯೂನ್‌ ಕಾಯಿಲೆ ಬರಬಹುದಾದ ಅಪಾಯವೂ ಇದೆ.

ಆಟೋಇಮ್ಯೂನ್ ಕಾಯಿಲೆಗಳಿಂದ ಬಳಲುತ್ತಿರುವ ಮಹಿಳೆಯರು ಗರ್ಭ ಧರಿಸುವ ಮುನ್ನ ವೈದ್ಯರೊಂದಿಗೆ ಹಾಗೂ ಪ್ರಸೂತಿ ತಜ್ಞರೊಂದಿಗೆ ಸಮಾಲೋಚನೆ ನಡೆಸಬೇಕಾಗುತ್ತದೆ. ಔಷಧಗಳನ್ನು ಕೂಡ ವೈದ್ಯರನ್ನು ಕೇಳಿ ಸೇವಿಸಬೇಕಾಗುತ್ತದೆ. ಹೆಚ್ಚಿನ ಔಷಧಗಳು ಗರ್ಭಧಾರಣೆ ಹಾಗೂ ಭ್ರೂಣದ ಮೇಲೆ ಪರಿಣಾಮ ಬೀರುವುದರಿಂದ ಈ ಮುನ್ನೆಚ್ಚರಿಕೆ ಅಗತ್ಯ. ಮಧುಮೇಹಕ್ಕೆ ಮಾತ್ರೆಯ ಬದಲು ಇನ್ಸುಲಿನ್‌ ಚುಚ್ಚುಮದ್ದು ತೆಗೆದುಕೊಳ್ಳಬೇಕಾಗುತ್ತದೆ.

ಮಧುಮೇಹ, ರುಮಟಾಯ್ಡ್‌ ಸಂಧಿವಾತದಂತಹ ಆಟೋಇಮ್ಯೂನ್‌ (ಸ್ವಯಂ ನಿರೋಧಕ) ಕಾಯಿಲೆಯಿರುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಗರ್ಭ ಧರಿಸುವ ಮುನ್ನವೇ ವೈದ್ಯರ ಬಳಿ ಸಮಾಲೋಚಿಸಿ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ.

ಲೇಖಕಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು,
ಅಪೊಲೊ ಕ್ರೆಡೆಲ್

ಪ್ರತಿಕ್ರಿಯಿಸಿ (+)