ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾಳ: ಹಲವು ವರ್ಗಗಳ ಒಬಿಸಿ ಸ್ಥಾನ ರದ್ದು- ಕಲ್ಕತ್ತ ಹೈಕೋರ್ಟ್‌ ತೀರ್ಪು

ಕಲ್ಕತ್ತ ಹೈಕೋರ್ಟ್‌ ತೀರ್ಪು * ಈಗಾಗಲೇ ಪ್ರಯೋಜನ ಪಡೆಯುತ್ತಿರುವವರಿಗೆ ತೊಂದರೆಯಿಲ್ಲ
Published 22 ಮೇ 2024, 15:39 IST
Last Updated 22 ಮೇ 2024, 15:39 IST
ಅಕ್ಷರ ಗಾತ್ರ

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಹಲವು ವರ್ಗಗಳಿಗೆ ನೀಡಲಾಗಿದ್ದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸ್ಥಾನಮಾನವನ್ನು ಕಲ್ಕತ್ತ ಹೈಕೋರ್ಟ್‌ ಬುಧವಾರ ರದ್ದುಗೊಳಿಸಿದೆ.

ರಾಜ್ಯದಲ್ಲಿನ ಸೇವಾ ಮತ್ತು ಹುದ್ದೆಗಳ ಭರ್ತಿ ಸಂಬಂಧ ರಾಜ್ಯ ಸರ್ಕಾರ 2012ರಲ್ಲಿ ಕಾಯ್ದೆ ರೂಪಿಸಿ ಹಲವು ವರ್ಗಗಳನ್ನು ಒಬಿಸಿ ವ್ಯಾಪ್ತಿಗೆ ತಂದು ಮೀಸಲಾತಿ ಜಾರಿಗೊಳಿಸಿತ್ತು. ಅದನ್ನು ಹೈಕೋರ್ಟ್‌ ಕಾನೂನು ಬಾಹಿರ ಎಂದು ಹೇಳಿದೆ.

‌ಆದರೆ, ಈಗಾಗಲೇ ಸೇವೆಯಲ್ಲಿರುವ ಅಥವಾ ಮೀಸಲಾತಿಯ ಪ್ರಯೋಜನ ಪಡೆದಿರುವ ಅಥವಾ ರಾಜ್ಯದ ಯಾವುದೇ ನೇಮಕಾತಿ ಪ್ರಕ್ರಿಯೆಯಲ್ಲಿ ಯಶಸ್ವಿಯಾಗಿರುವವರಿಗೆ ಈ ತೀರ್ಪು ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. 2012ರ ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ನೀಡಿದೆ.

‘ಈ ತೀರ್ಪು ರಾಜ್ಯದ ಗಣನೀಯ ಸಂಖ್ಯೆಯ ಜನರ ಮೇಲೆ ಪರಿಣಾಮ ಬೀರುತ್ತದೆ’ ಎಂದು ಈ ಪ್ರಕರಣದಲ್ಲಿ ಭಾಗಿಯಾಗಿರುವ ವಕೀಲರೊಬ್ಬರು ಹೇಳಿದ್ದಾರೆ.

ಪಶ್ಚಿಮ ಬಂಗಾಳ ಹಿಂದುಳಿದ ವರ್ಗಗಳು (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳನ್ನು ಹೊರತುಪಡಿಸಿ) (ಸೇವೆಗಳು ಮತ್ತು ಹುದ್ದೆಗಳಲ್ಲಿ ಖಾಲಿ ಹುದ್ದೆಗಳ ಮೀಸಲಾತಿ) ಕಾಯ್ದೆ–2012ರ ಅಡಿಯಲ್ಲಿ ಹಲವಾರು ವರ್ಗಗಳಿಗೆ ಮೀಸಲಾತಿಗಾಗಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸ್ಥಾನಮಾನ ನೀಡಲಾಗಿತ್ತು. ಅದನ್ನು ಹೈಕೋರ್ಟ್‌ ರದ್ದುಪಡಿಸಿದೆ.

ನ್ಯಾಯಮೂರ್ತಿಗಳಾದ ತಪಬ್ರತ ಚಕ್ರವರ್ತಿ, ರಾಜಶೇಖರ್‌ ಮಂಥಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಕುರಿತು ತೀರ್ಪು ನೀಡಿದೆ. 2010ಕ್ಕೂ ಮೊದಲು 66 ಒಬಿಸಿ ವರ್ಗಗಳನ್ನು ವರ್ಗೀಕರಿಸಿರುವ ರಾಜ್ಯ ಸರ್ಕಾರದ ಕಾರ್ಯನಿರ್ವಾಹಕ ಆದೇಶಗಳನ್ನು ಅರ್ಜಿಗಳಲ್ಲಿ ಪ್ರಶ್ನಿಸದ ಕಾರಣ, ಆ ವಿಷಯದಲ್ಲಿ ಮಧ್ಯ ಪ್ರವೇಶಿಸಿಲ್ಲ ಎಂದು ಕೋರ್ಟ್‌ ಸ್ಪಷ್ಟಪಡಿಸಿದೆ.

2010ರ ಮಾರ್ಚ್‌ 5ರಿಂದ 2012ರ ಮೇ 11ರವರೆಗೆ 42 ವರ್ಗಗಳನ್ನು ಒಬಿಸಿ ಎಂದು ವರ್ಗೀಕರಿಸುವ ರಾಜ್ಯದ ಕಾರ್ಯಕಾರಿ ಆದೇಶಗಳನ್ನು ರದ್ದುಗೊಳಿಸಲಾಗಿದೆ ಎಂದು ಪೀಠ ತಿಳಿಸಿದೆ.

ತೀರ್ಪನ್ನು ಒಪ್ಪಲ್ಲ: ಮಮತಾ

ಖರ್ದಾ (ಪಶ್ಚಿಮ ಬಂಗಾಳ) (ಪಿಟಿಐ): ‘ರಾಜ್ಯದ ಹಲವಾರು ವರ್ಗಗಳ ಒಬಿಸಿ ಸ್ಥಾನಮಾನವನ್ನು ರದ್ದುಗೊಳಿಸಿದ ಕಲ್ಕತ್ತ ಹೈಕೋರ್ಟ್‌ನ ತೀರ್ಪನ್ನು ನಾವು ಒಪ್ಪಿಕೊಳ್ಳುವುದಿಲ್ಲ’ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಪ್ರತಿಪಾದಿಸಿದರು. ಖರ್ದಾನಲ್ಲಿ ನಡೆದ ಚುನಾವಣಾ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ಸಂವಿಧಾನದ ಚೌಕಟ್ಟಿನಲ್ಲಿಯೇ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯಲಾಗಿದೆ. ಹೀಗಾಗಿ ರಾಜ್ಯದಲ್ಲಿ ಒಬಿಸಿ ಮೀಸಲಾತಿ ಮುಂದುವರಿಯುತ್ತದೆ’ ಎಂದು ಹೇಳಿದರು.  ‘ಮನೆ ಮನೆ ಸಮೀಕ್ಷೆ ನಡೆಸಿದ ಬಳಿಕ ನಾವು ಈ ಕುರಿತ ಮಸೂದೆ ರಚಿಸಿದ್ದೇವು. ಬಳಿಕ ಅದಕ್ಕೆ ಸಂಪುಟ ಮತ್ತು ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ’ ಎಂದು ಅವರು ವಿವರಿಸಿದರು. ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ತಮ್ಮ ವಿರುದ್ಧ ಸಾಕಷ್ಟು ಸಂಚು ರೂಪಿಸಿದೆ ಎಂದು ಆರೋಪಿಸಿದ ಅವರು ಕೇಸರಿ ಪಕ್ಷವು ಇಂತಹ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳಲು ಸಾಧ್ಯ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT