ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ವಿಶ್ವಕಪ್‌ನಲ್ಲಿ ಸ್ಪರ್ಧಾತ್ಮಕ ಆಟ: ಟಕರ್

ಐರ್ಲೆಂಡ್‌ ತಂಡಕ್ಕೆ ಕೆಎಂಎಫ್‌ ಪ್ರಾಯೋಜಕತ್ವ
Published 15 ಮೇ 2024, 17:54 IST
Last Updated 15 ಮೇ 2024, 17:54 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ): ‘ಪಾಕಿಸ್ತಾನ ವಿರುದ್ಧ ಈಚೆಗೆ ಸ್ಪರ್ಧಾತ್ಮಕ ಪ್ರದರ್ಶನ ನೀಡಿದ ಐರ್ಲೆಂಡ್‌ ಕ್ರಿಕೆಟ್‌ ತಂಡವು ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ (ಜೂನ್‌ 5) ವಿರುದ್ಧವೂ ಉತ್ತಮ ಆಟದ ವಿಶ್ವಾಸವನ್ನು ಹೊಂದಿದೆ’ ಎಂದು ಐರ್ಲೆಂಡ್‌ ತಂಡದ ಬ್ಯಾಟರ್‌ ಲೋರ್ಕನ್ ಟಕರ್ ಅಭಿಪ್ರಾಯಪಟ್ಟರು.

ಟಿ20 ಸರಣಿಯಲ್ಲಿ ಪಾಕ್‌ ವಿರುದ್ಧದ ಮೊದಲ ಪಂದ್ಯವನ್ನು ಆತಿಥೇಯ ಐರ್ಲೆಂಡ್‌ ಐದು ವಿಕೆಟ್‌ಗಳಿಂದ ಗೆದ್ದು, ಐತಿಹಾಸಿಕ ಸಾಧನೆ ಮಾಡಿತ್ತು. ಚುಟುಕು ಮಾದರಿಯಲ್ಲಿ ಪಾಕಿಸ್ತಾನದ ವಿರುದ್ಧ ಐರ್ಲೆಂಡ್‌ಗೆ ದಕ್ಕಿದ ಮೊದಲ ಜಯ ಅದಾಗಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಪಾಕಿಸ್ತಾನ 2–1ರಿಂದ ಗೆದ್ದುಕೊಂಡಿದೆ. ಎರಡನೇ ಮತ್ತು ಮೂರನೇ ಪಂದ್ಯದಲ್ಲಿ ಟಕರ್‌ ಕ್ರಮವಾಗಿ 51 ಮತ್ತು 73 ರನ್‌ ಗಳಿಸಿ ಮಿಂಚಿದ್ದರು.

‘ಪಾಕ್‌ ವಿರುದ್ಧದ ಮೊದಲ ಪಂದ್ಯದ ಗೆಲುವಿನಿಂದ ನಮ್ಮ ತಂಡದ ಆಟಗಾರರಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಅದರಲ್ಲೂ ಸರಣಿ ಗೆದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು’ ಎಂದು 27 ವರ್ಷದ ವಿಕೆಟ್ ಕೀಪರ್ ಆಗಿರುವ ಟಕರ್‌ ಹೇಳಿದರು.

ಅಮೆರಿಕ ಮತ್ತು ವೆಸ್ಟ್‌ಇಂಡೀಸ್‌ ಆತಿಥ್ಯದಲ್ಲಿ ಜೂನ್‌ನಲ್ಲಿ ನಡೆಯುವ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್‌ ತಂಡಗಳಿಗೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಪ್ರಾಯೋಜಕತ್ವ ನೀಡಿದ್ದು, ಈ ಪ್ರಯುಕ್ತ ಬುಧವಾರ ವರ್ಚುವಲ್‌ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

‘ಸೂಕ್ತ ಸಂದರ್ಭದಲ್ಲಿ ಕೆಎಂಎಫ್‌ ಪ್ರಾಯೋಜಕತ್ವ ನೀಡಿದ್ದು, ಅದರಿಂದ ನಮ್ಮ ತಂಡಕ್ಕೆ ಉತ್ತೇಜನ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವಕಪ್‌ ಟೂರ್ನಿಯಲ್ಲಿ ಐರ್ಲೆಂಡ್, ಭಾರತ, ಪಾಕಿಸ್ತಾನ, ಅಮೆರಿಕ ಮತ್ತು ಕೆನಡಾ ತಂಡಗಳು ಒಂದೇ ಗುಂಪಿನಲ್ಲಿವೆ.

‘ಸ್ವದೇಶಿ ಸರಣಿಯ ಸೋಲಿನ ಹೊರತಾಗಿಯೂ ಜೂನ್‌ 16ರಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತಂಡವು ಮೇಲುಗೈ ಸಾಧಿಸುವ ವಿಶ್ವಾಸವಿದೆ’ ಎಂದು ಅವರು ತಿಳಿಸಿದರು.

‘ನಾವು ಪವರ್ ಪ್ಲೇ ಅವಧಿಯನ್ನು ಸಮರ್ಥವಾಗಿ ಬಳಸಲು ಪ್ರಯತ್ನಿಸುತ್ತಿದ್ದೇವೆ. ಅದರಿಂದಾಗಿ ಇನಿಂಗ್ಸ್‌ನ ಮಧ್ಯದಲ್ಲಿ ತಂಡದ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಪಾಕಿಸ್ತಾನ ತಂಡದ ಬೌಲಿಂಗ್‌ ವಿಭಾಗ ಉತ್ತಮವಾಗಿದೆ. ಪಾಕ್‌ ವಿರುದ್ಧದ ಸರಣಿಯಿಂದ ಸಾಕಷ್ಟು ಪಾಠ ಕಲಿತಿದ್ದು, ವಿಶ್ವಕಪ್‌ ಟೂರ್ನಿಯ ಪೂರ್ವಸಿದ್ಧತೆಗೆ ಅನುಕೂಲವಾಯಿತು’ ಎಂದು ಅವರು ಹೇಳಿದರು.

‘ಉತ್ತಮವಾಗಿ ಆಡಿದರೆ ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ನಮಗಿದೆ. ಅದನ್ನು ಹಲವು ಬಾರಿ ತೋರಿಸಿದ್ದೇವೆ’ ಎಂದು ಅವರು ಹೇಳಿದರು.

‘ಐರ್ಲೆಂಡ್‌ ತಂಡದೊಂದಿಗೆ ಗುರುತಿಸಲು ಸಂತೋಷವಾಗುತ್ತಿದೆ. ನಂದಿನಿ ಉತ್ಪನ್ನಗಳು ಈಗ ದುಬೈನಲ್ಲಿ ಲಭ್ಯವಿದೆ. ಮುಂದೆ ಅಮೆರಿಕದಲ್ಲೂ ನಂದಿನಿ ಉತ್ಪನ್ನಗಳ ಮಾರಾಟದ ಗುರಿ ಹೊಂದಿದ್ದೇವೆ’ ಎಂದು ಕೆಎಂಎಫ್‌ ಆಡಳಿತ ನಿರ್ದೇಶಕ ಎಂ.ಕೆ. ಜಗದೀಶ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT