‘ಒತ್ತುವರಿ’ ಉರುಳಿಗೆ ಉಸಿರುಗಟ್ಟಿದ ಕೆರೆ

7
ಹುಳಿಮಾವು ಕೆರೆ: ಕೊಳಚೆ ನೀರಿನಿಂದ ಮಲೀನ

‘ಒತ್ತುವರಿ’ ಉರುಳಿಗೆ ಉಸಿರುಗಟ್ಟಿದ ಕೆರೆ

Published:
Updated:
Deccan Herald

ಬೆಂಗಳೂರು: ಅರ್ಧ ಶತಮಾನದ ಹಿಂದೆ ಹುಳಿಮಾವು ಕೆರೆ ಜನರಿಗೆ ಆಸರೆಯಾಗಿತ್ತು. ಜಾನುವಾರುಗಳ ದಾಹವನ್ನೂ ನೀಗಿಸುತ್ತಿತ್ತು. ಕ್ರಮೇಣ ಆ ಕೆರೆಯ ಕೊರಳಿಗೆ ಬಿದ್ದ ‘ಒತ್ತುವರಿ’ಯ ಉರುಳು, ದಿನದಿಂದ ದಿನಕ್ಕೆ ಬಿಗಿಯಾಗುತ್ತ ಬಂತು. ಈ ನೋವಿನ ಮಧ್ಯೆಯೇ ಕಸದ ರಾಶಿಯೂ ಒಡಲಿಗೆ ಬಿದ್ದಿದ್ದರಿಂದ ಕೆರೆ ಬಡಕಲಾಗಿ ನಿಂತಿದೆ. 

ಅಚ್ಚರಿ ಎಂದರೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಈ ಕೆರೆಯ ಪಶ್ಚಿಮ ಭಾಗದ ಪಾತ್ರವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಿಸಿದೆ. ಅಷ್ಟೇ ಅಲ್ಲದೆ, ರಸ್ತೆಯನ್ನು ಸಹ ನಿರ್ಮಿಸಿದೆ. 

ವಾಲ್‌ಮಾರ್ಕ್‌ ಸಂಸ್ಥೆಯವರು ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಬಹುಮಹಡಿ ಕಟ್ಟಡವನ್ನು ಕಟ್ಟಿದ್ದಾರೆ ಎನ್ನುವ ಆರೋಪವಿದ್ದು, ಕೋಳಿವಾಡ ನೇತೃತ್ವದ ‘ಕೆರೆ ಒತ್ತುವರಿ ಅಧ್ಯಯನ ಸದನ ಸಮಿತಿ’ ವರದಿಯಲ್ಲೂ ಅದರ ಉಲ್ಲೇಖವಿದೆ. ಹಿಂದೆ ಜಿಲ್ಲಾಧಿಕಾರಿ ನೇತೃತ್ವದ ತಂಡ ಭೇಟಿ ನೀಡಿ ಒತ್ತುವರಿ ತೆರವುಗೊಳಿಸುವಂತೆ ಸಂಸ್ಥೆಗೆ ನಿರ್ದೇಶನ ನೀಡಿತ್ತು. ಆದರೆ, ಕಟ್ಟಡ ಮಾತ್ರ ಹಾಗೇ ಇದೆ.

ಕಳೆ ಹಾಗೂ ತ್ಯಾಜ್ಯದ ಸಮಸ್ಯೆಯೂ ಕೆರೆಯನ್ನು ಬಾಧಿಸುತ್ತಿದೆ. ಕೆರೆಯ ಅಂಗಳದ ಅರ್ಧಭಾಗದಲ್ಲಿ ಕಳೆ ಗಿಡ ಹಾಗೂ ಪಾಚಿ ಬೆಳೆದು ನಿಂತಿದೆ. ಕಟ್ಟಡದ ಅವಶೇಷ ಹಾಗೂ ಗೃಹೋತ್ಪತ್ತಿ ತ್ಯಾಜ್ಯವನ್ನು ಎಲ್ಲರೂ ಮಲಗಿದ ಮೇಲೆ ಕೆಲವು ದುಷ್ಕರ್ಮಿಗಳು ವಾಹನಗಳಲ್ಲಿ ತಂದು ಕೆರೆಯ ಅಂಚಿನಲ್ಲಿ ಸುರಿಯುತ್ತಾರೆ. 

ಕೆರೆ ಸುತ್ತಮುತ್ತ ವಾಸಿಸುತ್ತಿರುವ ನಿವಾಸಿಗಳು ತ್ಯಾಜ್ಯದ ಮರೆಯಲ್ಲಿ ಬಹಿರ್ದೆಸೆ ಮಾಡುತ್ತಾರೆ. ಅಲ್ಲದೆ ಸುತ್ತಲಿನ ಚರಂಡಿ ನೀರು ಹಾಗೂ ಗೊಟ್ಟಿಗೆರೆ ಗ್ರಾಮದ ವಸತಿ ಸಂಕೀರ್ಣಗಳ ಕೊಳಚೆ ನೀರು ಸಹ ಈ ಕೆರೆಯನ್ನೇ ಸೇರುತ್ತಿರುವುದರಿಂದ ಕಲುಷಿತಗೊಳ್ಳುತ್ತಿದೆ. ಇಲ್ಲಿ ಕೊಳಚೆ ನೀರನ್ನು ಶುದ್ಧೀಕರಿಸುವ ಘಟಕ ಸಹ ಇಲ್ಲ! 

ಡೆಂಟಲ್‌ ಕಾಲೇಜಿಗೆ ತೆರಳುವ ರಸ್ತೆ ಬದಿಯ ಕೆರೆಯ ಅಂಚಿನಲ್ಲಿ ದೇವಸ್ಥಾನ ಇದೆ. ಅಲ್ಲಿ ಪಾಲಿಕೆಯವರು ಕಸ ಸಂಗ್ರಹಿಸಲು ತೊಟ್ಟಿ ಇಟ್ಟಿದ್ದಾರೆ. ಕೆರೆ ಪ್ರದೇಶದಲ್ಲಿ ಕಸ ಸುರಿದವರಿಗೆ ₹1000 ದಂಡ ಎನ್ನುವ ಎಚ್ಚರಿಕೆಯ ಫಲಕ ಹಾಕಿದ್ದಾರೆ. ಆದರೆ ತೊಟ್ಟಿ ತುಂಬಿದರೂ ಅಲ್ಲಿನ ಕಸವನ್ನು ತೆಗೆದುಕೊಂಡು ಹೋಗುವುದಿಲ್ಲ. ಹೀಗಾಗಿ ತೊಟ್ಟಿ ತುಂಬಿದ ಬಳಿಕ ಕೆರೆಯಂಚಿನಲ್ಲೇ ಕಸದ ಗುಡ್ಡೆ ನಿರ್ಮಾಣವಾಗಿ ಗಾಳಿ ಬಿಟ್ಟಾಗ ಅದು ಜಾರಿ ಕೆರೆಯನ್ನು ಕಲುಷಿತಗೊಳಿಸುತ್ತಿದೆ ಎನ್ನುತ್ತಾರೆ ಸ್ಥಳೀಯರು.


ಕೆರೆಯ ಅಂಚಿನಲ್ಲಿ ತ್ಯಾಜ್ಯ ಸುರಿದಿರುವುದು

 *
ವಾರ್ಡ್‌ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ₹24 ಕೋಟಿಗೆ ಬೇಡಿಕೆ ಇಟ್ಟಿದ್ದೇನೆ. ನಗರಾಭಿವೃದ್ಧಿ ಸಚಿವರು ಹಣ ಬಿಡುಗಡೆಗೆ ಸಮ್ಮತಿಸಿದ್ದಾರೆ.
-ಭಾಗ್ಯಲಕ್ಷ್ಮೀ ಮುರುಳಿ, ಕಾರ್ಪೊರೇಟರ್‌

*
‘ನಾವು ಚಿಕ್ಕವರಿದ್ದಾಗ ಕೆರೆ ವಿಶಾಲವಾಗಿತ್ತು. ಇಲ್ಲಿಗೆ ಎಮ್ಮೆ ಮೇಯಿಸಲು ಬಂದಾಗ ಕೆರೆಯ ನೀರನ್ನೇ ಕುಡಿಯುತ್ತಿದ್ದೆವು. ಆದರೆ ಈಗ ಕೈತೊಳೆಯಲಾಗದಷ್ಟು ಕಲುಷಿತವಾಗಿದೆ. ಕೆಲವೊಮ್ಮೆ ಕೆರೆಯಲ್ಲಿಯ ವಿಷಯುಕ್ತ ನೀರಿಗೆ ಮೀನುಗಳು ಸಹ ಬಲಿಯಾಗುತ್ತವೆ’.
–ಕೃಷ್ಣಪ್ಪ, ಹುಳಿಮಾವು ನಿವಾಸಿ

*
‘ಪ್ರತಿವರ್ಷ ಕೆರೆಗೆ ಹೆಚ್ಚು–ಹೆಚ್ಚು ಪಕ್ಷಿಗಳು ವಲಸೆ ಬರುತ್ತವೆ. ಆದರೆ, ಕೆರೆಗೆ ಕಸ ತಂದು ಸುರಿಯುತ್ತಿರುವ ಕಾರಣ ಅದು 
ಕಲುಷಿತಗೊಳ್ಳುತ್ತಿದೆ. ಅದ್ದರಿಂದ ಎಲ್ಲಿ ಪಕ್ಷಿಗಳು ಅವಾಸಸ್ಥಾನವನ್ನು ಬದಲಿಸಿ ಬಿಡುತ್ತವೆಯೋ ಎನ್ನುವ ಭಯವಿದೆ. ಕಸ ಸುರಿಯುವುದನ್ನು ತಡೆಯಲು ಕೆರೆ ಕಾವಲುಗಾರರನ್ನು ನೇಮಿಸಬೇಕು. ಕೆರೆಯಲ್ಲಿ ಉದ್ಯಾನ ನಿರ್ಮಾಣವಾದರೆ ಎಲ್ಲರಿಗೂ ಅನುಕೂಲವಾಗಲಿದೆ’.
–ರಜಿನಿ, ನ್ಯಾನಪ್ಪನಹಳ್ಳಿ ನಿವಾಸಿ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !