ಸೋಮವಾರ, ಜೂನ್ 21, 2021
27 °C
ರಾಜಕಾರಣದಲ್ಲಿ ಸ್ತ್ರೀಯರ ಆಮೆ ನಡಿಗೆ

ಮಹಿಳಾ ಮೀಸಲು ಮಸೂದೆ ಎಂಬ ಮರೀಚಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಿ ಕೆಲ ದಿನಗಳಾಗಿವೆಯಷ್ಟೆ. ಮಹಿಳಾ ಮೀಸಲು ಮಸೂದೆಯ ಬಗ್ಗೆ ಮತ್ತೆ ಚರ್ಚೆ ಆರಂಭವಾಗಿದೆ.

ಮಹಿಳೆಯರ ಅಭಿವೃದ್ಧಿ ಬಗ್ಗೆ ನಿಮ್ಮ ವಚನಬದ್ಧತೆಯನ್ನು ಪ‍್ರದರ್ಶಿಸಿ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಯವರು ಅಧಿವೇಶನದ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಮಹಿಳಾ ಮೀಸಲು ಮಸೂದೆ, ತ್ರಿವಳಿ ತಲಾಖ್ ಮತ್ತು ನಿಖಾ ಹಲಾಲ ವಿಷಯಕ್ಕೆ ಸಂಬಂಧಿಸಿ ಪ್ರತಿಪಕ್ಷಗಳನ್ನು ಒಂದುಗೂಡಿಸಿ ಎಂದು ರಾಹುಲ್ ಗಾಂಧಿಯವರಿಗೆ ಸೂಚಿಸಿದ್ದಾರೆ.

ಇದರೊಂದಿಗೆ, ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳೆಯರಿಗೆ ಶೇಕಡಾ 33ರ ಮೀಸಲಾತಿ ಕಲ್ಪಿಸುವ ಮಸೂದೆ ಈ ಬಾರಿಯಾದರೂ ಲೋಕಸಭೆಯಲ್ಲಿ ಮಂಡನೆಯಾದೀತೇ? ಅದಕ್ಕೆ ಅನುಮೋದನೆ ದೊರೆತೀತೇ ಎಂಬ ಕುತೂಹಲ ಮೂಡಿದೆ.

ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ರಾಷ್ಟ್ರ ರಾಜಕಾರಣದಲ್ಲಿ ಮಹಿಳೆಯರ ಪ್ರತಿನಿಧಿಸುವಿಕೆ ಹೇಳಿಕೊಳ್ಳುವಂತಹ ಪ್ರಗತಿ ಕಂಡಿಲ್ಲ ಎಂಬುದನ್ನು ಅಂಕಿಅಂಶಗಳು ದೃಢಪಡಿಸಿವೆ. ಪ್ರಸ್ತುತ ಲೋಕಸಭೆಯ ಒಟ್ಟು 543 ಸಂಸದರ ಪೈಕಿ ಮಹಿಳೆಯರಿರುವುದು ಕೇವಲ 62. ಅಂದರೆ, ಶೇ11ರಷ್ಟು ಮಾತ್ರ. ದೇಶದ ಒಟ್ಟು ಜನಸಂಖ್ಯೆಯ ಪೈಕಿ ಮಹಿಳೆಯರ ಪ್ರಮಾಣ ಶೇ49 ಎನ್ನುತ್ತದೆ ಚುನಾವಣಾ ಆಯೋಗ.

ಮಹಿಳಾ ಪ್ರಾತಿನಿಧ್ಯ

1951ರಲ್ಲಿ ರಚನೆಯಾದ ಮೊದಲ ಲೋಕಸಭೆಯಲ್ಲಿದ್ದ ಮಹಿಳಾ ಸಂಸದರ ಸಂಖ್ಯೆ 22. ಪ್ರಸಕ್ತ ಲೋಕಸಭೆಯಲ್ಲಿರುವ ಮಹಿಳಾ ಪ್ರತಿನಿಧಿಗಳ ಸಂಖ್ಯೆ 62. ಅಂದರೆ, ಸುದೀರ್ಘ ಅವಧಿಯಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಕೇವಲ ಮೂರು ಪಟ್ಟು ಹೆಚ್ಚಳವಾಗಿದೆ.‌ 1951ರಲ್ಲಿ ಲೋಕಸಭೆಯಲ್ಲಿ ಶೇ5ರಷ್ಟಿದ್ದ ಮಹಿಳಾ ಪ್ರಾತಿನಿಧ್ಯ ಈಗ ಶೇ11ರಷ್ಟಾಗಿದೆ. 1991ರಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ5ರಷ್ಟು ಹೆಚ್ಚಾಗಿದ್ದರೆ, ಈ ಹಿಂದಿನ ಲೋಕಸಭೆಯಲ್ಲಿ ಶೇ7ರಷ್ಟು ಹೆಚ್ಚಾಗಿತ್ತು.

ಹೆಚ್ಚಿದ ಮಹಿಳಾ ಸ್ಪರ್ಧಿಗಳ ಸಂಖ್ಯೆ

ಇತ್ತೀಚಿನ ಅಂಕಿಅಂಶಗಳ ಪ್ರಕಾರ, 1957ರಿಂದ 2015ರ ನಡುವಣ ಅವಧಿಯಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ ಮಹಿಳೆಯರ ಸಂಖ್ಯೆ 45ರಿಂದ 668ಕ್ಕೆ ಹೆಚ್ಚಳವಾಗಿದೆ. ಅಂದರೆ, ಸುಮಾರು 15 ಪಟ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಪುರುಷ ಸ್ಪರ್ಧಿಗಳ ಸಂಖ್ಯೆ 1,474ರಿಂದ 7,583ಕ್ಕೆ ಅಂದರೆ, ಐದು ಪಟ್ಟು ಏರಿಕೆಯಾಗಿದೆ.

ಮಹಿಳೆಯರಿಗೇ ಹೆಚ್ಚು ಯಶಸ್ಸು

ಚುನಾವಣೆಯಲ್ಲಿ ಸ್ಪರ್ಧಿಸಿ ಯಶಸ್ವಿಯಾಗಿರುವ ಪ್ರಮಾಣ ಪುರುಷರಿಗಿಂತಲೂ ಮಹಿಳೆಯರದ್ದೇ ಹೆಚ್ಚಿದೆ. ಆಯಾ ವಿಭಾಗದಲ್ಲಿನ ಒಟ್ಟು ಸ್ಪರ್ಧಿಗಳ ವಿರುದ್ಧ ಜಯ ಗಳಿಸಿದವರ ಸಂಖ್ಯೆಯ ಆಧಾರದಲ್ಲಿ ಇದನ್ನು ಲೆಕ್ಕ ಹಾಕಲಾಗಿದೆ. 1971ರಲ್ಲಿ ಪುರುಷ ಸ್ಪರ್ಧಿಗಳ ಯಶಸ್ಸಿನ ಪ್ರಮಾಣ ಶೇ18ರಷ್ಟಿದ್ದರೆ, ಮಹಿಳೆಯರದ್ದು ಶೇ34ರಷ್ಟಿತ್ತು. ಪ್ರಸಕ್ತ ಲೋಕಸಭೆಯಲ್ಲಿ ಪುರುಷರ ಯಶಸ್ಸಿನ ಪ್ರಮಾಣ ಶೇ6.4ರಷ್ಟಿದ್ದರೆ, ಮಹಿಳೆಯರದ್ದು ಶೇ9.3. ಇದು ಮಹಿಳೆಯರಿಗೆ ಟಿಕೆಟ್‌ ನೀಡಿ ಕಣಕ್ಕಿಳಿಸಿದರೆ ಅವರು ಗೆಲ್ಲುವ ಸಾಧ್ಯತೆ ಹೆಚ್ಚು ಎಂಬುದನ್ನು ತೋರಿಸಿಕೊಟ್ಟಿದೆ ಎಂದು ‘ಫ್ಯಾಕ್ಟ್‌ಲಿ ಡಾಟ್ ಇನ್’ ಜಾಲತಾಣ ಅಭಿಪ್ರಾಯಪಟ್ಟಿದೆ.


ಸಾಂದರ್ಭಿಕ ಚಿತ್ರ

ಮಹಿಳಾ ಮೀಸಲು ಮಸೂದೆ: ನಡೆದು ಬಂದ ಹಾದಿ

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ ಕಲ್ಪಿಸಿಕೊಡುವುದಕ್ಕೆ ಸಂಬಂಧಿಸಿದ ಈ ಮಸೂದೆ ಮೊದಲ ಬಾರಿ ಮಂಡನೆಯಾದದ್ದು 1996ರಲ್ಲಿ. ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರು ಪ್ರಧಾನ ಮಂತ್ರಿಗಳಾಗಿದ್ದಾಗ ಮಹಿಳಾ ಮೀಸಲು ಮಸೂದೆ ಮಂಡಿಸಲಾಗಿತ್ತು. ನಂತರ ಅದನ್ನು ಜಂಟಿ ಸಂಸದೀಯ ಸಮಿತಿಯ ಪರಾಮರ್ಶೆಗೆ ಒಪ್ಪಿಸಲಾಗಿತ್ತು. ಅಷ್ಟರಲ್ಲಿ ಲೋಕಸಭೆ ವಿಸರ್ಜನೆಯಾಗುವುದರೊಂದಿಗೆ ಮಸೂದೆ ಮೂಲೆಗುಂಪಾಯಿತು. 1999ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ನೇತೃತ್ವದ ಸರ್ಕಾರ ಮತ್ತೆ ಮಸೂದೆ ಮಂಡಿಸಿತು. ಆಗಲೂ ಅನುಮೋದನೆ ಪಡೆಯುವುದು ಸಾಧ್ಯವಾಗಲಿಲ್ಲ. 2008ರಲ್ಲಿ ಯುಪಿಎ ಸರ್ಕಾರ ಮಸೂದೆಗೆ ಅನುಮೋದನೆ ಪಡೆಯಲು ನಡೆಸಿದ ಪ್ರಯತ್ನವೂ ವಿಫಲವಾಗಿತ್ತು.

ಕೊನೆಗೂ ರಾಜ್ಯಸಭೆಯಲ್ಲಿ ಅನುಮೋದನೆ ಪಡೆದಿದ್ದ ಯುಪಿಎ

2010ರ ಮಾರ್ಚ್ 9ರಂದು ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯಸಭೆಯಲ್ಲಿ ಬಿಜೆಪಿ ಹಾಗೂ ಎಡ ಪಕ್ಷಗಳ ಸಹಮತದೊಂದಿಗೆ ಮಹಿಳಾ ಮೀಸಲು ಮಸೂದೆಗೆ ಅನುಮೋದನೆ ಪಡೆದು ಹೊಸ ಇತಿಹಾಸವನ್ನೇ ನಿರ್ಮಿಸಿತು. ಆದರೂ ಲೋಕಸಭೆಯಲ್ಲಿ ಅನುಮೋದನೆ ಪಡೆಯುವುದು ಸಾಧ್ಯವಾಗಲಿಲ್ಲ. ಹೀಗಾಗಿ ಮಸೂದೆ ಮತ್ತೆ ನನೆಗುದಿಗೆ ಬಿದ್ದಿತು.

ಮಸೂದೆಯಲ್ಲೇನಿದೆ?
* ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ
* ಮೀಸಲು ಸ್ಥಾನಗಳನ್ನು ಸಂಸತ್ ಸೂಚಿಸಿದ ಪ್ರಾಧಿಕಾರವೊಂದು ನಿರ್ಧರಿಸಬೇಕು
* ಮಹಿಳೆಯರಿಗೆ ಮೀಸಲಿರಿಸಿದ ಸ್ಥಾನಗಳಲ್ಲಿ ಮೂರನೇ ಒಂದನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗಾಗಿ ಮೀಸಲಿಡಬೇಕು
* ಮೀಸಲಿರಿಸಿದ ಸ್ಥಾನಗಳನ್ನು ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಯ ವಿವಿಧ ಕ್ಷೇತ್ರಗಳಿಗೆ ರೊಟೇಶನ್ ಆಧಾರದಲ್ಲಿ ಹಂಚಿಕೆ ಮಾಡಬೇಕು
* ಕಾನೂನಾಗಿ ರೂಪುಗೊಂಡ 15 ವರ್ಷಗಳ ಬಳಿಕ ಮೀಸಲು ಮಸೂದೆ ಅಸ್ತಿತ್ವ ಕಳೆದುಕೊಳ್ಳಬೇಕು

ಮಸೂದೆಗೆ ಇರುವ ವಿರೋಧಗಳು

ಮಹಿಳಾ ಮೀಸಲು ಮಸೂದೆಯಿಂದ ಪ್ರಜಾಪ್ರಭುತ್ವದಲ್ಲಿ ಸ್ತ್ರೀಯರ ಪ್ರಾತಿನಿಧ್ಯ ಹೆಚ್ಚಿಸಬಹುದು ಎಂಬುದು ಮಸೂದೆಯ ಪರವಾದ ಪ್ರಮುಖ ಅಂಶ. ಅದೇ ರೀತಿ, ಮಸೂದೆಯ ವಿರುದ್ಧವಾದ ಹಲವು ಅಂಶಗಳೂ ಇವೆ. ಮಸೂದೆ ಬಗ್ಗೆ ಆಕ್ಷೇಪಿಸುವವರು ಮಂಡಿಸುವ ವಾದ ಹೀಗಿದೆ:

* ನಿರ್ದಿಷ್ಟ ಕ್ಷೇತ್ರವೊಂದನ್ನು ಮಹಿಳೆಯರಿಗೆಂದು ಮೀಸಲಿರಿಸಿದಲ್ಲಿ ಆ ಕ್ಷೇತ್ರದಲ್ಲಿ ಪುರುಷರು ಸ್ಪರ್ಧೆಯಿಂದ ದೂರವುಳಿಯುವುದು ಅನಿವಾರ್ಯವಾಗುತ್ತದೆ. ಇದು ಒಬ್ಬರ ಪ್ರಜಾಸತ್ತಾತ್ಮಕ ಹಕ್ಕನ್ನು ಲಿಂಗದ ಆಧಾರದಲ್ಲಿ ನಿರಾಕರಿಸಿದಂತೆ
* ಮತದಾರ ಆಯ್ಕೆಯನ್ನು ಸೀಮಿತಗೊಳಿಸುತ್ತದೆ. ಪುರುಷ ಅಭ್ಯರ್ಥಿಗೆ ಮತನಾದ ಮಾಡಬೇಕು ಎಂದುಕೊಂಡಿರುವ ಮತದಾರನ ಆಯ್ಕೆಯ ಹಕ್ಕನ್ನು ಕಸಿದಂತಾಗಲಿದೆ
* 543 ಲೋಕಸಭಾ ಕ್ಷೇತ್ರಗಳಲ್ಲಿ 131 ಸ್ಥಾನಗಳನ್ನು ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳವರಿಗಾಗಿ ಮೀಸಲಿಡಲಾಗಿದೆ. ಹೀಗಾಗಿ ಇನ್ನೂ ಶೇಕಡಾ 33ರಷ್ಟು ಮೀಸಲಾತಿ ನೀಡುವುದು ಜನರ ಆಶಯಕ್ಕೆ ವಿರುದ್ಧವಾಗಿದ್ದರೂ ಇರಬಹುದು
* ಸಂಸತ್‌ನಲ್ಲಿ ಕಡಿಮೆ ಸಂಖ್ಯೆಯ ಮಹಿಳಾ ಪ್ರತಿನಿಧಿಗಳಿರುವುದಕ್ಕೆ ಕಾರಣವೇನು ಎಂಬುದು ಮಸೂದೆಯಲ್ಲಿ ಅಡಕವಾಗಿಲ್ಲ. ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವಂತೆ ಮಹಿಳೆಯರಿಗೆ ಪ್ರೋತ್ಸಾಹ ನೀಡುವುದು, ರಾಜಕೀಯ ಪಕ್ಷಗಳ ಕಾರ್ಯಕಾರಿ ಸಮಿತಿಗಳಲ್ಲಿ ಅವರನ್ನು ಆಂತರಿಕ ಸದಸ್ಯೆಯರನ್ನಾಗಿ ನೇಮಕ ಮಾಡಿಕೊಳ್ಳುವ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವ ಮೂಲಕ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬಹುದು
* 15 ವರ್ಷಗಳ ನಂತರ ಮಸೂದೆ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಪ್ರಸ್ತಾವಿತ ಕಾನೂನಿನಲ್ಲಿದೆ. ಆದರೆ, ಹಿಂದಿನ ಮತ್ತು ಈಗಿನ ರಾಜಕಾರಣವನ್ನು ಗಮನಿಸಿದರೆ ಒಮ್ಮ ಅಸ್ತಿತ್ವಕ್ಕೆ ಬಂದ ಮೀಸಲಾತಿಯನ್ನು ಯಾವುದೇ ಆಡಳಿತ ಪಕ್ಷವೂ ಹಿಂತೆಗೆಯುವ ಧೈರ್ಯ ತೋರುವುದಿಲ್ಲ.

ಪರ, ವಿರೋಧದ ಸುತ್ತ


ಸಾಂದರ್ಭಿಕ ಚಿತ್ರ

ರಾಜ್ಯಸಭೆಯಲ್ಲಿ ಮಸೂದೆಗೆ ಅನುಮೋದನೆ ಪಡೆದಿದ್ದ ಯುಪಿಎ (II) ಸರ್ಕಾರ ಲೋಕಸಭೆಯಲ್ಲಿಯೂ ಅದನ್ನು ಮಂಡಿಸಲು ಮುಂದಾಗಿತ್ತು. ಆದರೆ, ಪ್ರಾದೇಶಿಕ ಪಕ್ಷಗಳಾದ ರಾಷ್ಟ್ರೀಯ ಜನತಾ ದಳ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ತೃಣಮೂಲ ಕಾಂಗ್ರೆಸ್‌ ವಿರೋಧ ವ್ಯಕ್ತಪಡಿಸಿದ್ದವು. ವಿಶೇಷವೆಂದರೆ, ಆಗ ವಿರೋಧ ವ್ಯಕ್ತಪಡಿಸಿದ್ದ ಪಕ್ಷಗಳೆಲ್ಲ ಈಗ ಕಾಂಗ್ರೆಸ್‌ ಮಿತ್ರಪಕ್ಷಗಳಾಗಿವೆ.

ಇನ್ನು ಬಿಜೆಪಿ ಮಹಿಳಾ ಮೀಸಲು ಮಸೂದೆ ಬಗ್ಗೆ ಚುನಾವಣಾ ಪ್ರಣಾಳಿಕೆಯಲ್ಲೇ ಉಲ್ಲೇಖಿಸಿದ್ದರೂ ಈವರೆಗೆ ಅನುಮೋದನೆ ಪಡೆಯಲು ಯಶಸ್ವಿಯಾಗಿಲ್ಲ. ಪ್ರತಿಪಕ್ಷಗಳ ಅಸಹಕಾರವೇ ಅನುಮೋದನೆ ಪಡೆಯಲು ತೊಡಕಾಗಿ ಪರಿಣಮಿಸಿದೆ ಎಂಬುದು ಬಿಜೆಪಿಯ ಆರೋಪ. ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಮಸೂದೆಗಳ ಅನುಮೋದನೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಪ್ರತಿಪಕ್ಷಗಳನ್ನು ಒಗ್ಗೂಡಿಸಿ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿಯವರಿಗೇ ಬಿಜೆಪಿ ತಿರುಗೇಟು ನೀಡಿದೆ. ಹೀಗಾಗಿ ಪ್ರಸಕ್ತ ಅಧಿವೇಶನ ಕುತೂಹಲ ಮೂಡಿಸಿದೆ.

ಮಹಿಳಾ ಪ್ರಾತಿನಿಧ್ಯದಲ್ಲಿ ಭಾರತ ಹಿಂದೆ

ವಿಶ್ವಸಂಸ್ಥೆಯಲ್ಲಿ ಕಳೆದ ವರ್ಷ ನಡೆದಿದ್ದ ಮಹಿಳೆಯರ ಸ್ಥಾನಮಾನ ಕುರಿತ ಚರ್ಚೆ ವೇಳೆ ಅಂತರ್–ಸಂಸದೀಯ ಒಕ್ಕೂಟ (ಐಪಿಯು) ‘ರಾಜಕೀಯದಲ್ಲಿ ಮಹಿಳೆಯರು’ ಎಂಬ ಮಾಹಿತಿಯನ್ನು ಪ್ರಸ್ತುತಪಡಿಸಿತ್ತು. ಇದರ ಪ್ರಕಾರ, ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯ (2017ರ ಜನವರಿ ವರೆಗಿನ ಲೆಕ್ಕಾಚಾರದ ಪ್ರಕಾರ) ವಿಚಾರದಲ್ಲಿ ಭಾರತವು 193 ದೇಶಗಳ ಪಟ್ಟಿಯಲ್ಲಿ 148ನೇ ಸ್ಥಾನ ಪಡೆದಿದೆ. ಸಚಿವ ಸ್ಥಾನದಲ್ಲಿ ಮಹಿಳೆಯರ ಪ್ರಾತಿನಿಧ್ಯ (2017ರ ಜನವರಿ ವರೆಗಿನ ಲೆಕ್ಕಾಚಾರದ ಪ್ರಕಾರ) ವಿಚಾರದಲ್ಲಿ ಭಾರತವು 186 ದೇಶಗಳ ಪೈಕಿ 88ನೇ ಸ್ಥಾನದಲ್ಲಿದೆ.
***
ಮಾಹಿತಿ: ವಿವಿಧ ಮೂಲಗಳಿಂದ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು