ಪತ್ತೆಯಾಗದ ಮಾಲೀಕ; ತಗ್ಗದ ದೂರುದಾರರ ಸರದಿ

ಬುಧವಾರ, ಜೂನ್ 26, 2019
29 °C
ಶಿವಾಜಿನಗರದ ಎ.ಎಸ್. ಕಲ್ಯಾಣ ಮಂಟಪದಲ್ಲಿ ದೂರು ಸ್ವೀಕಾರ l ಪೊಲೀಸ್ ಕಮಿಷನರ್ ಭೇಟಿಯಾದ ಹೂಡಿಕೆದಾರರು

ಪತ್ತೆಯಾಗದ ಮಾಲೀಕ; ತಗ್ಗದ ದೂರುದಾರರ ಸರದಿ

Published:
Updated:

ಬೆಂಗಳೂರು: ಶಿವಾಜಿನಗರದ ಲೇಡಿ ಕರ್ಜನ್ ರಸ್ತೆಯಲ್ಲಿ ಹೆಚ್ಚಿದ ಹೂಡಿಕೆದಾರರ ಆಕ್ರೋಶ; ಎ.ಎಸ್. ಕಲ್ಯಾಣ ಮಂಟಪದ ಎಂಟು ಕೌಂಟರ್‌ಗಳಲ್ಲಿ ದೂರು ನೀಡಲು ಮುಗಿಬಿದ್ದ ಜನ; ನ್ಯಾಯಕ್ಕಾಗಿ ಪೊಲೀಸ್‌ ಕಮಿಷನರ್ ಅವರನ್ನು ಭೇಟಿಯಾದ ನಿಯೋಗ.

ನೂರಾರು ಕೋಟಿ ರೂಪಾಯಿ ಷೇರು ಸಂಗ್ರಹಿಸಿದ ‘ಐಎಂಎ ಸಮೂಹ ಕಂಪನಿ’ಯ ವಂಚನೆ ಪ್ರಕರಣದ ಸುತ್ತ ಮಂಗಳವಾರ ಕಂಡುಬಂದ ಬೆಳವಣಿಗೆಗಳಿವು.

ಕಂಪನಿಯ ಪ್ರಧಾನ ಕಚೇರಿ ಎದುರು ಸೋಮವಾರ ಬೆಳಿಗ್ಗೆ ಜಮಾಯಿಸಿ ಪ್ರತಿಭಟನೆ ನಡೆಸಿದ್ದ ಸಾವಿರಾರು ಹೂಡಿಕೆದಾರರು, ಮಂಗಳವಾರವೂ ಕಚೇರಿ ಬಳಿ ನಿಂತು ಆಕ್ರೋಶ ವ್ಯಕ್ತಪಡಿಸಿದರು.‌

ಶಿವಾಜಿನಗರದ ಬಸ್‌ ನಿಲ್ದಾಣದಿಂದ ಕಬ್ಬನ್ ರಸ್ತೆಗೆ ಹೋಗುವ ವಾಹನಗಳು ಲೇಡಿ ಕರ್ಜನ್ ರಸ್ತೆಯಲ್ಲಿ (ಏಕಮುಖ ರಸ್ತೆ) ಹಾದು ಹೋಗುತ್ತವೆ. ಇದೇ ರಸ್ತೆಯಲ್ಲಿರುವ ಕಂಪನಿಯ ಕಚೇರಿ ಎದುರು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ವಾಹನಗಳ ಓಡಾಟಕ್ಕೆ ಮಂಗಳವಾರವೂ ಅಡ್ಡಿ ಉಂಟಾಯಿತು. ಪೊಲೀಸರು ಮಾರ್ಗ ಬದಲಾವಣೆ ಮಾಡಿ ವಾಹನಗಳನ್ನು ಕಳುಹಿಸಿಕೊಟ್ಟರು.

ಸ್ಥಳಕ್ಕೆ ಬಂದಿದ್ದ ಪೂರ್ವ ವಿಭಾಗದ ಡಿಸಿಪಿ ರಾಹುಲ್‌ಕುಮಾರ್, ‘ವಂಚನೆ ಬಗ್ಗೆ ಪ್ರತಿ ಹೂಡಿಕೆದಾರರಿಂದ ದೂರು ಸ್ವೀಕರಿಸಲು ಶಿವಾಜಿನಗರದ ಎ.ಎಸ್.ಕಲ್ಯಾಣ ಮಂಟಪದಲ್ಲಿ ಎಂಟು ಕೌಂಟರ್‌ಗಳನ್ನು ತೆರೆಯಲಾಗಿದೆ. ಎಲ್ಲರೂ ಅಲ್ಲಿಗೆ ಹೋಗಿ ದೂರು ನೀಡಿ’ ಎಂದು ಕೋರಿದರು. ಅದಕ್ಕೆ ಸ್ಪಂದಿಸಿದ ಕೆಲವರು, ಕಲ್ಯಾಣ ಮಂಟಪದತ್ತ ಸಾಗಿದರು. ಮಧ್ಯಾಹ್ನದ ಹೊತ್ತಿಗೆ ಅರ್ಧ ರಸ್ತೆ ಖಾಲಿಯಾಯಿತು. ನಂತರ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು.

ತಡರಾತ್ರಿವರೆಗೂ ದೂರು ಸ್ವೀಕಾರ: ಗುತ್ತಿಗೆದಾರ ಮೊಹಮ್ಮದ್ ಖಾಲಿದ್ ಅಹ್ಮದ್ ಎಂಬುವರು ನೀಡಿರುವ ದೂರು ಆಧರಿಸಿ ಐಎಂಎ ಸಮೂಹ ಕಂಪನಿ ಮಾಲೀಕ ಮನ್ಸೂರ್ ಖಾನ್ ಹಾಗೂ ಇತರರ ವಿರುದ್ಧ ಭಾನುವಾರ ರಾತ್ರಿಯೇ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಸೋಮವಾರದಿಂದ ದೂರು ನೀಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ, ಎ.ಎಸ್.ಕಲ್ಯಾಣ ಮಂಟಪದಲ್ಲಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದು ಪೊಲೀಸರು ದೂರು ಸ್ವೀಕರಿಸುತ್ತಿದ್ದಾರೆ. 

ಪೊಲೀಸ್ ಕಮಿಷನರ್ ಭೇಟಿ: ಈ ಮಧ್ಯೆ, ಪ್ರತಿಭಟನಾನಿರತ ಹೂಡಿಕೆದಾರರ ತಂಡವೊಂದು ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್‌ಕುಮಾರ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.

ಲೇಡಿ ಕರ್ಜನ್ ರಸ್ತೆಯಿಂದ ಕಮಿಷನರ್ ಕಚೇರಿಯವರೆಗೂ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರ ಬಳಿಯೇ ಬಂದ ಸುನೀಲ್‌ಕುಮಾರ್ ಅಹವಾಲು ಆಲಿಸಿದರು.

‘ಕಷ್ಟಪಟ್ಟು ದುಡಿದ ಹಣವನ್ನೆಲ್ಲ ಕಳೆದುಕೊಂಡಿದ್ದೇವೆ. ನಮಗೆ ನ್ಯಾಯ ಬೇಕು. ನಮ್ಮ ಹಣವನ್ನು ವಾಪಸ್ ಕೊಡಿಸಿ’ ಎಂದು ಮನವಿ ಮಾಡಿದರು.

ಸುನೀಲ್‌ಕುಮಾರ್, ‘ಮನ್ಸೂರ್ ಖಾನ್‌ ಜೀವಂತವಾಗಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಹಣವನ್ನು ವಾಪಸ್ ಕೊಡಿಸಲು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ಚರ್ಚಿಸಲಾಗಿದೆ’ ಎಂದರು.

ಎಐಎಂಎಂಎಸ್: ಪ್ರತಿಭಟನೆ
ಬೆಂಗಳೂರು: ಶಿವಾಜಿನಗರದ ‘ಐಎಂಎ ಸಮೂಹ ಕಂಪನಿ’ ವಂಚನೆ ಪ್ರಕರಣ ಬಯಲಾಗುತ್ತಿದ್ದಂತೆ, ಜಯನಗರದಲ್ಲಿರುವ ‘ಎಐಎಂಎಂಎಸ್ ವೆಂಚರ್ಸ್’ ಕಂಪನಿಯ ಕಚೇರಿ ಎದುರೂ ಹೂಡಿಕೆದಾರರು ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.‌

ಇದೇ 5ರಿಂದ ಐಎಂಎ ಕಂಪನಿ ಪ್ರಧಾನ ಕಚೇರಿಯ ಬಾಗಿಲು ಬಂದ್‌ ಮಾಡಲಾಗಿದ್ದು, ಅದರ ಎದುರೇ ಸೋಮವಾರ ಬೆಳಿಗ್ಗೆಯಿಂದ ಹೂಡಿಕೆದಾರರು ಧರಣಿ ನಡೆಸುತ್ತಿದ್ದಾರೆ. ಆ ಕಂಪನಿ ಮಾದರಿಯಲ್ಲೇ ‘ಎಐಎಂಎಂಎಸ್ ವೆಂಚರ್ಸ್’ ಕಂಪನಿ ಸಹ ವಂಚನೆ ಮಾಡಿದ್ದು, ಅದರ ಹೂಡಿಕೆದಾರರು ಈಗ ಬೀದಿಗೆ ಇಳಿದಿದ್ದಾರೆ.

ಜಯನಗರ 9ನೇ ಬ್ಲಾಕ್‌ನಲ್ಲಿರುವ ‘ಎಐಎಂಎಂಎಸ್ ವೆಂಚರ್ಸ್’ ಕಂಪನಿ ಕಚೇರಿ ಎದುರು ಸೇರಿದ್ದ ಹೂಡಿಕೆದಾರರು, ಕಂಪನಿಯವರು ತಮಗೆ ಕೊಟ್ಟಿದ್ದ ಒಪ್ಪಂದ ಪತ್ರವನ್ನು ಪ್ರದರ್ಶಿಸಿದರು. ನ್ಯಾಯ ಸಿಗುವವರೆಗೂ ಜಾಗ ಬಿಟ್ಟು ಕದಲುವುದಿಲ್ಲವೆಂದು ಹೇಳಿದರು.

‘ಅಧಿಕ ಬಡ್ಡಿಯ ಆಮಿಷವೊಡ್ಡಿದ್ದ ಕಂಪನಿ, ಸಾರ್ವಜನಿಕರಿಂದ ಹಣ ಠೇವಣಿ ಇರಿಸಿಕೊಂಡಿತ್ತು. ಜನವರಿಯಿಂದಲೇ ಕಂಪನಿ ಕಚೇರಿ ಬಂದ್ ಮಾಡಲಾಗಿದೆ. ಅದರಿಂದ 500ಕ್ಕೂ ಹೆಚ್ಚು ಜನರಿಗೆ ವಂಚನೆ ಆಗಿದೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಕಂಪನಿ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ, ಇದುವರೆಗೂ ನಮಗೆ ಹಣ ಕೊಡಿಸಿಲ್ಲ. ಐಎಂಎ ಪ್ರಕರಣದ ಜೊತೆಗೆ ಎಐಎಂಎಂಎಸ್ ಕಂಪನಿ ಪ್ರಕರಣದ ತನಿಖೆಯನ್ನೂ ಮಾಡಿ ನ್ಯಾಯ ಒದಗಿಸಬೇಕು’ ಎಂದು ಕೋರಿದರು.

ಕಂಪನಿ ಮೇಲೆ ದಾಳಿ ನಡೆಸಿದ್ದ ಸಿಸಿಬಿ: ಹೂಡಿಕೆದಾರರ ದೂರು ಆಧರಿಸಿ ಇದೇ ಜ. 9ರಂದು ಕಂಪನಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ಕಂಪನಿಯ ಸಂಸ್ಥಾಪಕರಾದ ಅಯೂಬ್ ಅಲಿ, ಇಲಿಯಾಸ್ ಪಾಷಾ, ಮೊಹಮದ್ ಮುಜಾಹಿದ್ದುಲ್ಲಾ, ಮುದಾಸಿರ್ ಪಾಷಾ ಹಾಗೂ ಮೊಹಮದ್ ಸಾದಿಕ್ ಎಂಬುವರನ್ನು ಬಂಧಿಸಿದ್ದರು.


ದೂರಿನ ಪ್ರತಿಗಳನ್ನು ಪೊಲೀಸರು ಹೊಂದಿಸಿಟ್ಟುಕೊಂಡರು

ಮತ್ತೊಂದು ಆಡಿಯೊ ಬಿಡುಗಡೆ: ನಕಲಿ ಎಂದ ಪೊಲೀಸರು
‘ಐಎಂಎ ಸಮೂಹ ಕಂಪನಿ’ ಮಾಲೀಕ ಮನ್ಸೂರ್ ಖಾನ್ ಅವರದ್ದು ಎನ್ನಲಾದ ಮತ್ತೊಂದು ಆಡಿಯೊ ಮಂಗಳವಾರ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿತು.

‘ನಾನು ಮನ್ಸೂರ್ ಖಾನ್. ನನಗೆ ಏನೂ ಆಗಿಲ್ಲ. ಜೀವಂತವಾಗಿ ಇದ್ದೇನೆ. ನನ್ನನ್ನು ಮುಗಿಸಲು ಕೆಲವರು ಇಲ್ಲಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ. ಶಿವಾಜಿನಗರ ಶಾಸಕ ರೋಷನ್ ಬೇಗ್, ಶಕೀಲ್ ಅಹ್ಮದ್, ರಾಹಿಲ್ ಎಲ್ಲರೂ ಸೇರಿ ನನ್ನನ್ನು ಮುಗಿಸಲು ಯತ್ನಿಸುತ್ತಿದ್ದಾರೆ’ ಎಂಬ ಮಾತು ಆಡಿಯೊದಲ್ಲಿದೆ.

‘ಇದೆಲ್ಲದರ ಹಿಂದೆ ಕಾಣದ ಕೈಗಳಿವೆ. ನನ್ನ ಬಳಿ ಹಣ ಹೂಡಿಕೆ ಮಾಡಿದವರು ಆತಂಕಪಡುವ ಅಗತ್ಯವಿಲ್ಲ. ಎಲ್ಲರಿಗೂ ಹಣ ವಾಪಸ್ ಕೊಡುತ್ತೇನೆ. ಯಾರ‍್ಯಾರಿಗೆ ಹಣ ಕೊಡಬೇಕು ಎಂಬ ಮಾಹಿತಿಯನ್ನು ರಾಹಿಲ್‌ಗೆ ಕೊಟ್ಟಿದ್ಧೇನೆ. ಆತನೇ ಸಭೆ ನಡೆಸಿ ಹೂಡಿಕೆದಾರರ ಜೊತೆ ಮಾತನಾಡಲಿದ್ದಾನೆ’ ಎಂಬುದು ಆಡಿಯೊದಲ್ಲಿದೆ.

ಆಡಿಯೊ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ‘ಇದೊಂದು ನಕಲಿ ಆಡಿಯೊ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ’ ಎಂದು ಹೇಳಿದರು.

ಐಎಂಎ ನಿರ್ದೇಶಕರೂ ನಾಪತ್ತೆ
‘ಆರೋಪಿ ಮನ್ಸೂರ್ ಖಾನ್, ತನ್ನ ಆಪ್ತರನ್ನೇ ಸೇರಿಸಿಕೊಂಡು ಆಡಳಿತ ಮಂಡಳಿ ರಚಿಸಿಕೊಂಡಿದ್ದ. ಆ ಪೈಕಿ ನಾಲ್ವರು ನಿರ್ದೇಶಕರು ಬೆಂಗಳೂರಿನವರೇ ಆಗಿದ್ದು, ದೂರು ದಾಖಲಾಗುತ್ತಿದ್ದಂತೆ ಎಲ್ಲರೂ ತಲೆಮರೆಸಿಕೊಂಡಿದ್ದಾರೆ. ಹುಡುಕಾಟ ನಡೆದಿದೆ’ ಎಂದು ಅಧಿಕಾರಿ ಹೇಳಿದರು.

ಪೊಲೀಸರಿಗೂ ವಂಚನೆ!
ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೌಕರರು, ನಿವೃತ್ತ ನೌಕರರು ಹಾಗೂ ಪೊಲೀಸರು ಸಹ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದರು. 
ಅವರಿಗೂ ವಂಚನೆ ಆಗಿದೆ.

‘ವಂಚನೆಗೀಡಾದವರ ಪೈಕಿ ಶೇ 10ರಷ್ಟು ಮಂದಿ ಸರ್ಕಾರಿ ನೌಕರರು ಹಾಗೂ ಪೊಲೀಸರು ಇದ್ದಾರೆ. ಆ ಪೈಕಿ ಹಲವರು ಈಗಾಗಲೇ ದೂರು ನೀಡಿದ್ದಾರೆ. ಇನ್ನು ಕೆಲವರು ದೂರು ನೀಡಲು ಹಿಂಜರಿಯುತ್ತಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಪತ್ನಿಯರಿಬ್ಬರ ಹೆಸರಿನಲ್ಲಿ ವ್ಯವಹಾರ
‘ಮನ್ಸೂರ್ ಖಾನ್ ಅವರಿಗೆ ಇಬ್ಬರು ಪತ್ನಿಯರಿದ್ದಾರೆ. ಅವರ ಹೆಸರಿನಲ್ಲೂ ಖಾನ್‌ ತನ್ನದೇ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಉದ್ಯಮದಲ್ಲಿ ಬಂದ ಲಾಭವನ್ನು ಅವರ ಖಾತೆಗೂ ಜಮೆ ಮಾಡುತ್ತಿದ್ದರು. ಈಗ ಪತ್ನಿಯರು ಸಹ ನಾಪತ್ತೆಯಾಗಿದ್ದಾರೆ’ ಎಂದು ಅಧಿಕಾರಿ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !