ಶನಿವಾರ, ಡಿಸೆಂಬರ್ 7, 2019
25 °C

ಆಲಮಟ್ಟಿಯ ಭಾನುವಾರದ ಸಂತೆ: ಆವಕ ಹೆಚ್ಚಳ; ಕುಸಿದ ಈರುಳ್ಳಿ ಬೆಲೆ..!

ಚಂದ್ರಶೇಖರ ಕೋಳೇಕರ Updated:

ಅಕ್ಷರ ಗಾತ್ರ : | |

Deccan Herald

ಆಲಮಟ್ಟಿ: ಇಲ್ಲಿನ ಭಾನುವಾರದ ಸಂತೆಯ ಸಗಟು ಮಾರುಕಟ್ಟೆಗೆ, ಈರುಳ್ಳಿ ಹೆಚ್ಚು ಆವಕವಾಗಿದ್ದರಿಂದ, ದಿಢೀರ್ ಬೆಲೆ ಕುಸಿತ ಕಂಡಿತು.

ಪ್ರತಿ ವಾರವೂ ಈರುಳ್ಳಿ ಸೇರಿದಂತೆ ಹಲ ಕಾಯಿಪಲ್ಲೆ ಸಗಟು ವ್ಯಾಪಾರ ಇಲ್ಲಿ ಬೆಳಿಗ್ಗೆ ನಡೆಯಲಿದೆ. ನಂತರ ದಿನವಿಡಿ ಚಿಲ್ಲರೆ ವ್ಯಾಪಾರ ನಡೆಯುತ್ತದೆ.

ಭಾನುವಾರ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈರುಳ್ಳಿ ತುಂಬಿದ ಚೀಲ ಮಾರಾಟಕ್ಕೆ ಬಂದಿದ್ದರಿಂದ, ಕೊಳ್ಳುವವರು ಇಲ್ಲದಿದ್ದರಿಂದ ಬೆಲೆ ದಿಢೀರ್ ಇಳಿಯಿತು. ಇದರಿಂದ ಹಲವು ರೈತರು ತಂದಿದ್ದ ಉತ್ಪನ್ನಕ್ಕೆ ಬೆಲೆ ಸಿಗದೆ ಹೈರಾಣಾದರು.

ಕಳೆದ ವಾರ ಒಂದು ಚೀಲ ಈರುಳ್ಳಿಗೆ (ಅಂದಾಜು 50 ರಿಂದ 60 ಕೆಜಿ) ₹ 400ರಿಂದ ₹ 600 ದರ ಸಿಕ್ಕಿತ್ತು. ಈ ವಾರ ₹ 200ಕ್ಕೂ ಕೇಳುವವರೇ ಇಲ್ಲವಾಗಿದ್ದರು.

ರೈತರೇ ತಮ್ಮ ಇಲಾರಿಗೆಯಲ್ಲಿ (ಸಂಗ್ರಾಹಕ) ಸಂಗ್ರಹಿಸಿದ ಈರುಳ್ಳಿಯನ್ನು ಅಗತ್ಯಕ್ಕೆ ಅನುಗುಣವಾಗಿ ಭಾನುವಾರದ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಾರೆ. ಆದರೆ ಕಳೆದ ವಾರ ಎರಡು ದಿನ ಈ ಭಾಗದಲ್ಲಿ ಮಳೆ ಸುರಿದಿದ್ದರಿಂದ ಉಳ್ಳಾಗಡ್ಡಿ ಕೊಳೆಯಬಹುದೆಂಬ ಭೀತಿಯಿಂದ ಹೆಚ್ಚಿನ ಸಂಖ್ಯೆಯ ರೈತರು ಮಾರುಕಟ್ಟೆಗೆ ತಮ್ಮಲ್ಲಿನ ಉತ್ಪನ್ನ ತಂದಿದ್ದರು.

ಕಳೆದ ಕೆಲ ತಿಂಗಳಿಂದ ಈರುಳ್ಳಿಗೆ ಬೆಲೆ ಸಿಗುತ್ತಿತ್ತು. ಆದರೆ ಈ ವಾರ ಮಾತ್ರ ಏಕಾಏಕಿ ದರ ಕುಸಿತ ಕಂಡಿದ್ದು ರೈತರನ್ನು ಕಂಗಾಲನ್ನಾಗಿಸಿತು.

‘ಚಲೋ ರೇಟ್ ಬರ್ತೈತಿ ಅಂತ ಇಲ್ಲಿಗ ಬಂದ್ರ; ಇಲ್ಲೂ ಧಾರಣೆ ಇಲ್ಲ. ಹೆಬ್ಬಾಳದಿಂದ ಟ್ರ್ಯಾಕ್ಟರ್‌ನ್ಯಾಗ ಹೊತಕೊಂಡು 20 ಪಿಶಿವಿ ಉಳ್ಳಾಗಡ್ಡಿ ಮಾರಾಕ ತಂದಿನ್ರೀ. ಈಗ ಇಲ್ಲಿ ನೋಡದ್ರ ಚಲೋ ಗಡ್ಡಿ ₹ 200 , ಸ್ವಲ್ಪ ಸಣ್ಣ ಗಡ್ಡಿ ₹ 150 ಕ್ಕ ಮಾರಾಕತ್ತೀವ್ರೀ’ ಎಂದು ಹೆಬ್ಬಾಳದ ರೈತ ಸುಭಾಸ ಹೇಳಿದರು.

ಈಗ ಬರುವುದೆಲ್ಲಾ ಹಳೆ ಮಾಲು:

‘ಸದ್ಯ ಮಾರುಕಟ್ಟೆಗೆ ಬರುವುದೆಲ್ಲಾ ಮೇ ತಿಂಗಳಲ್ಲಿ ರಾಶಿ ಮಾಡಿದ ಈರುಳ್ಳಿ. ಬೆಲೆ ಬರುತ್ತದೆ ಎಂಬ ನಿರೀಕ್ಷೆಯಲ್ಲಿ ಕೆಲ ರೈತರು ಇಲಾರಿಗೆಯಲ್ಲಿ ಸಂಗ್ರಹಿಸಿಟ್ಟಿರುತ್ತಾರೆ. ನಾಲ್ಕು ತಿಂಗಳು ಕಳೆದರೂ ಬೆಲೆ ಬಾರದ ಕಾರಣ, ಈರುಳ್ಳಿ ಕೊಳೆಯುವ ಸಾಧ್ಯತೆಯಿದ್ದು, ಮಾರಾಟಕ್ಕೆ ಹೆಚ್ಚಿನ ಸಂಖ್ಯೆಯ ರೈತರು ಬಂದಿದ್ದಾರೆ, ಸದ್ಯ ನಮ್ಮ ಭಾಗದಲ್ಲಿ ಹೆಚ್ಚಾಗಿ ಈರುಳ್ಳಿ ಬೆಳೆದಿದ್ದು, ನವೆಂಬರ್ ಮೊದಲ ವಾರ ಹೊಸ ಈರುಳ್ಳಿ ಬರುತ್ತದೆ’ ಎಂದು ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಆಲೂರ ತಿಳಿಸಿದರು.

‘ಉಳ್ಳಾಗಡ್ಡಿ ಬೆಳೆದ ಹಾಳಾಗೇನ್ರೀ.. ಊರಾಗಿಂದ ಗಾಡಿ ಬಾಡಿಗೆ ಮಾಡಕೊಂಡ ಉಳ್ಳಾಗಡ್ಡಿ ಚೀಲ ಇಲ್ಲಿ ಸಂತ್ಯಾಗ ತಂದ ಇಟ್ಟೇನ್ರೀ.. ಚಲೋ ಉಳ್ಳಾಗಡ್ಡಿ ಕೇಳುವವರ ಇಲ್ರೀ.. ದಿನಕ್ಕೆ ₹ 250 ಕೊಟ್ಟು ಉಳ್ಳಾಗಡ್ಡಿ ಕೀಳಿಸಿನ್ರೀ.. ಬಾಡಗಿ ಮಾಡಕೊಂಡ ಬಂದ ಮಾರಾಕತ್ತೀನ್ರೀ.. ಆದ್ರ ರೇಟ್ ಮಾತ್ರ ಹತ್ತವಲರ್ರೀ...’ ಎಂದು ಅಂಗಡಗೇರಿ ಭೀಮಪ್ಪ ಕೊಳ್ಳಾರ ತಮ್ಮ ನೋವು ತೋಡಿಕೊಂಡರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು