ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಗರಿಷ್ಠ ವಾಯುಮಾಲಿನ್ಯವುಳ್ಳ ನಗರ: ವರದಿ

ವಾಯುಮಾಲಿನ್ಯ: ವಿಶ್ವದ 30 ನಗರಗಳ ಪಟ್ಟಿಯಲ್ಲಿ ಭಾರತದ 22 ನಗರಗಳು
Last Updated 16 ಮಾರ್ಚ್ 2021, 20:01 IST
ಅಕ್ಷರ ಗಾತ್ರ

ನವದೆಹಲಿ: ಜಗತ್ತಿನಲ್ಲಿಯೇ ಅತಿ ಹೆಚ್ಚು ವಾಯುಮಾಲಿನ್ಯವಿರುವ 30 ನಗರಗಳ ಪೈಕಿ 22 ನಗರಗಳು ಭಾರತದಲ್ಲಿಯೇ ಇವೆ. ಈ ಪೈಕಿ ರಾಜಧಾನಿ ನವದೆಹಲಿಗೆ ಜಗತ್ತಿನಲ್ಲಿಯೇ ‘ಹೆಚ್ಚು ವಾಯುಮಾಲಿನ್ಯವುಳ್ಳ ನಗರ’ ಎಂಬ ಕುಖ್ಯಾತಿ ದೊರೆತಿದ್ದು, ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

ಸ್ವಿಸ್‌ ಮೂಲದ ಐಕ್ಯೂಏರ್‌ ಸಂಸ್ಥೆಯು ಬಿಡುಗಡೆ ಮಾಡಿರುವ ‘ವಿಶ್ವದ ವಾಯು ಗುಣಮಟ್ಟ ವರದಿ 2020’ ವರದಿಯಲ್ಲಿ ಈ ಅಂಶ ದಾಖಲಾಗಿದೆ. ವರದಿಯ ಪ್ರಕಾರ, ವಾಯುಮಾಲಿನ್ಯ ಗರಿಷ್ಠವಾಗಿರುವ 10 ನಗರಗಳಲ್ಲಿ ಚೀನಾದ ಕ್ಸಿನ್‌ಜಿಯಾಂಗ್ ಮೊದಲ ಸ್ಥಾನದಲ್ಲಿದೆ. ನಂತರದ 9 ಸ್ಥಾನಗಳಲ್ಲಿ ಭಾರತದ ನಗರಗಳಿವೆ.

ವಾಯುಮಾಲಿನ್ಯ ಕುರಿತು ನಗರಗಳ ಜಾಗತಿಕ ಶ್ರೇಣಿಯನ್ನು 106 ದೇಶಗಳಿಂದ ಪಡೆದ ಗುಣಮಟ್ಟ ಮಾಪಕದ ಪಿಎಂ2.5 ಅಂಕಿ ಅಂಶ ಆಧರಿಸಿ ನೀಡಲಾಗಿದೆ. ಸರ್ಕಾರಗಳ ಅಧೀನದಲ್ಲಿಯೇ ಇರುವ ಸಂಸ್ಥೆಗಳು ನೀಡಿದ್ದ ಅಂಕಿಅಂಶಗಳನ್ನು ಈ ವರದಿ ಆಧರಿಸಿದೆ.

ಆದರೆ, ನವದೆಹಲಿಯಲ್ಲಿ ವಾಯುವಿನ ಗುಣಮಟ್ಟ 2019ಕ್ಕೆ ಹೋಲಿಸಿದರೆ 2020ರಲ್ಲಿ ಶೇ 15ರಷ್ಟು ಉತ್ತಮಗೊಂಡಿದೆ. ಕೋವಿಡ್‌ನಿಂದಾಗಿ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್‌ ಕಾರಣದಿಂದಾಗಿ ವಾಯುಮಾಲಿನ್ಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದೂ ವರದಿ ತಿಳಿಸಿದೆ.

ಭಾರತದಲ್ಲಿ ವಾಯುಮಾಲಿನ್ಯ ಪ್ರಮಾಣವು ಹೆಚ್ಚಿರಲು ವಾಹನಗಳು. ಉಳಿದಂತೆ, ಅಡುಗೆಗೆ ಉರುವಲು ಬಳಕೆ, ಕೈಗಾರಿಕೆ, ನಿರ್ಮಾಣ ಚಟುವಟಿಕೆ ಮತ್ತು ತ್ಯಾಜ್ಯಗಳು ಹಾಗೂ ಮತ್ತು ಕೃಷಿ ತ್ಯಾಜ್ಯಗಳನ್ನು ಸುಡುವ ಪ್ರಕ್ರಿಯೆಗಳು ಕಾರಣ. ಈ ಪೈಕಿ ವಾಹನಗಳ ಕೊಡುಗೆ ಹೆಚ್ಚಿದ್ದು, ಬಹುತೇಕ ನಗರಗಳಲ್ಲಿ ಮಾಲಿನ್ಯಕ್ಕೆ ವಾಹನಗಳ ಕೊಡುಗೆ ಪ್ರಮಾಣ ಪಿಎಂ2.5 ಆಗಿದೆ ಎಂದು ವರದಿಯು ವಿವರಿಸಿದೆ.

ಭಾರತದ ದೃಷ್ಟಿಯಿಂದ ಈ ವರದಿಯನ್ನು ವಿಶ್ಲೇಷಿಸಿರುವ ಪರಿಸರ ಕಾರ್ಯಕರ್ತ, ಗ್ರೀನ್‌ಪೀಸ್ ಇಂಡಿಯಾ ಸಂಸ್ಥೆಯ ಅವಿನಾಶ್ ಚಂಚಲ್‌ ಅವರು, ‘ಲಾಕ್‌ ಡೌನ್‌ ಕಾರಣದಿಂದ ದೆಹಲಿ ಸೇರಿ ವಿವಿಧ ನಗರಗಳಲ್ಲಿ ವಾಯುಮಾಲಿನ್ಯ ಕುಗ್ಗಿರಬಹುದು. ಆದರೆ, ಆರ್ಥಿಕ ಮತ್ತು ಆರೋಗ್ಯದ ಮೇಲೆ ಅದರ ಪರಿಣಾಮ ಗಂಭೀರವಾಗಿಯೇ ಇದೆ’ ಎನ್ನುತ್ತಾರೆ.

ಪರಿಸರ ಸ್ನೇಹಿಯಾಗಿರುವ ಸಂಚಾರ ಸೌಲಭ್ಯವನ್ನು ಉತ್ತಮಪಡಿಸುವುದರಿಂದ ಆರೋಗ್ಯ ರಕ್ಷಣೆಯಷ್ಟೇ ಆಗುವುದಿಲ್ಲ. ಆರೋಗ್ಯದ ಸಂಬಂಧ ಮಾಡುವ ವೆಚ್ಚವು ಗಣನೀಯವಾಗಿ ಕುಗ್ಗಲಿದೆ ಎಂದೂ ಅವರು ಅಭಿಪ್ರಾಯಪಟ್ಟರು.

ವಾಯುಮಾಲಿನ್ಯ ಹೆಚ್ಚಿರುವ ದೇಶದ ಇತರೆ 21 ನಗರಗಳು

ಉತ್ತರಪ್ರದೇಶ: ಗಾಜಿಯಾಬಾದ್, ಬುಲಂದ್‌ಶಹರ್, ಬಿಸ್ರಾಕ್‌ ಜಲಾಲ್‌ಪುರ, ನೊಯ್ಡಾ, ಗ್ರೇಟರ್ ನೊಯ್ಡಾ, ಕಾನ್ಪುರ, ಲಖನೌ, ಮೀರತ್‌, ಆಗ್ರಾ, ಮುಜಾಫರ್‌ನಗರ,

ಹರಿಯಾಣ: ಫರಿದಾಬಾದ್, ಜಿಂದ್‌, ಹಿಸರ್‌, ಫತೇಹಾಬಾದ್, ಬಂದ್ವಾರಿ, ಗುರುಗ್ರಾಮ್, ಯಮುನಾ ನಗರ್, ರೋಹ್ಟಕ್, ಧರುಹೆರಾ

ಬಿಹಾರ: ಮುಜಾಫರ್‌ ನಗರ.

ರಾಜಸ್ತಾನ: ಭಿವಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT