ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಭಾರತ: ಹಲವೆಡೆ ಪ್ರವಾಹ– ಚುರುಕುಗೊಂಡ ರಕ್ಷಣಾ ಕಾರ್ಯ

ಮಧ್ಯಪ್ರದೇಶದಲ್ಲಿ 8,832 ಜನರ ರಕ್ಷಣೆ, ಪಶ್ಚಿಮ ಬಂಗಾಳದಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು
Last Updated 7 ಆಗಸ್ಟ್ 2021, 14:33 IST
ಅಕ್ಷರ ಗಾತ್ರ

ಭೋಪಾಲ್‌/ಕೋಟಾ/ಕೋಲ್ಕತ್ತ: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಬೀಳುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳ ಹೆಚ್ಚು ಬಾಧಿತವಾಗಿದ್ದು, ಜನರು ಪರದಾಡುತ್ತಿದ್ದಾರೆ.

ಪಶ್ಚಿಮ ಬಂಗಾಳದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಜನರ ಸ್ಥಳಾಂತರ ಹಾಗೂ ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.

ಮಧ್ಯಪ್ರದೇಶದ ಗ್ವಾಲಿಯರ್‌ ಹಾಗೂ ಚಂಬಲ್‌ ವಿಭಾಗಗಗಳಲ್ಲಿ ಭಾರಿ ಪ್ರಮಾಣದ ಹಾನಿಯಾಗಿದೆ. ಕಳೆದ ಕೆಲವು ದಿನಗಳಿಂದ ಭಾರಿ ಮಳೆ ಬೀಳುತ್ತಿದ್ದು, 12 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರವಾಹ ಪೀಡಿತ ಪ್ರದೇಶಗಳಿಂದ ಈ ವರೆಗೆ 8,832 ಜನರನ್ನು ರಕ್ಷಿಸಲಾಗಿದೆ. 29,280 ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಚೌಹಾಣ್‌ ಶನಿವಾರ ಹೇಳಿದ್ದಾರೆ.

‘ಶನಿವಾರವಷ್ಟೇ 40 ಜನರನ್ನು ರಕ್ಷಿಸಲಾಗಿದೆ. ಗುನಾ, ಅಶೋಕನಗರ, ವಿದಿಶಾ ಜಿಲ್ಲೆಗಳಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯದ ಮಾಹಿತಿ ಪಡೆದಿದ್ದೇನೆ‘ ಎಂದು ಅವರು ಹೇಳಿದ್ದಾರೆ.

‘ಭಾರತೀಯ ವಾಯುಪಡೆ, ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ಸಿಬ್ಬಂದಿ ಹಗಲು–ರಾತ್ರಿ ಎನ್ನದೇ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದೂ ಅವರು ಟ್ವೀಟ್‌ ಮಾಡಿದ್ದಾರೆ.

ಅಶೋಕನಗರ ಜಿಲ್ಲೆಯ ಬಾರ‍್ರಿ ಹಾಗೂ ಸಿರ್ಸೋರಾ ಗ್ರಾಮಗಳಲ್ಲಿ ತಲಾ 15 ಜನರನ್ನು ಹೆಲಿಕಾಪ್ಟರ್‌ ಮೂಲಕ ರಕ್ಷಿಸಲಾಗಿದೆ. ಇದೇ ಜಿಲ್ಲೆಯ ವಸುನಿಯಾ ಘಾಟ್ ಗ್ರಾಮದ 6 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ.

ಮಾಲ್ಡಾ ಜಿಲ್ಲೆಯಲ್ಲಿ ಉಕ್ಕಿ ಹರಿಯುತ್ತಿರುವ ನದಿಗಳು

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಗಂಗಾ, ಫುಲ್ಹಾರ್‌ ಹಾಗೂ ಮಹಾನಂದ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದ್ದು, ಅಪಾಯ ಮಟ್ಟ ಮೀರಿ ನೀರು ಹರಿಯುತ್ತಿದೆ.

ಹೂಗ್ಲಿ ಜಿಲ್ಲೆಯಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಭದ್ರತಾ ಪಡೆಗಳ ಯೋಧರು, ಎನ್‌ಡಿಆರ್‌ಎಫ್‌ ಸಿಬ್ಬಂದಿ, ಆಹಾರ, ಔಷಧಗಳು ಹಾಗೂ ಪರಿಹಾರ ಸಾಮಗ್ರಿಗಳನ್ನ ವಿತರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಭಾಗದ ಜಿಲ್ಲೆಗಳಾದ ಹೂಗ್ಲಿ, ದಕ್ಷಿಣ 24 ಪರಗಣ, ಪೂರ್ವ ಮೇದಿನಿಪುರ ಹಾಗೂ ಹೌರಾ ಜಿಲ್ಲೆಗಳಲ್ಲಿ ಪ್ರವಾಹದಿಂದ ಜನರು ಪರದಾಡುವಂತಾಗಿದೆ.

ದಾಮೋದರ ವ್ಯಾಲಿ ಕಾರ್ಪೋರೇಷನ್‌ (ಡಿವಿಸಿ)ವ್ಯಾಪ್ತಿಯ ಅಣೆಕಟ್ಟುಗಳಿಂದ 29,000 ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ.

‘ಪ್ರವಾಹದಿಂದಾಗಿ ಈವರೆಗೆ ಕನಿಷ್ಠ 23 ಜನರು ಮೃತಪಟ್ಟಿದ್ದು, ಲಕ್ಷಾಂತರ ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಭಾರಿ ಪ್ರಮಾಣದಲ್ಲಿ ನದಿಗೆ ನೀರನ್ನು ಬಿಟ್ಟಿರುವ ಕಾರಣ ಜನರು ತೊಂದರೆ ಅನುಭವಿಸುವಂತಾಗಿದೆ. ನದಿಗೆ ನೀರು ಬಿಡುವುದನ್ನು ಡಿವಿಸಿ ನಿಲ್ಲಿಸಿದರೆ ಪರಿಸ್ಥಿತಿ ಸುಧಾರಿಸಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದರಿಂದ ಭಾರಿ ಸಂಖ್ಯೆಯಲ್ಲಿ ಜನರು ತೊಂದರೆ ಅನುಭವಿಸುವಂತಾಗಿದೆ. ಅವರಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ’ ಎಂದು ಹೂಗ್ಲಿ ಜಿಲ್ಲಾಧಿಕಾರಿ ದೀಪವ್‌ ಪ್ರಿಯಾ ಹೇಳಿದ್ದಾರೆ.

‘45 ಯೋಧರನ್ನು ಒಳಗೊಂಡ ತಂಡ ಹೂಗ್ಲಿಯಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ’ ಎಂದು ರಕ್ಷಣಾ ಇಲಾಖೆಯ ವಕ್ತಾರರೊಬ್ಬರು ತಿಳಿಸಿದರು.

ರಾಜಸ್ಥಾನ: ಓಂ ಬಿರ್ಲಾ ಅವರಿಂದ ವೈಮಾನಿಕ ಸಮೀಕ್ಷೆ

ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರುಕೋಟಾ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶನಿವಾರ ವೈಮಾನಿಕ ಸಮೀಕ್ಷೆ ನಡೆಸಿದರು. ಬಿರ್ಲಾ ಅವರು ಬೂಂದಿ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

‘ಕೋಟಾ ಜಿಲ್ಲೆಯ ಸಂಗೋಡ್‌ ಪ್ರದೇಶದಲ್ಲಿ ಶನಿವಾರ 140 ಜನರನ್ನು ರಕ್ಷಿಸಿ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ’ ಎಂದು ಜಿಲ್ಲಾಧಿಕಾರಿ ಉಜ್ವಲ್‌ ರಾಠೋಡ್‌ ತಿಳಿಸಿದ್ದಾರೆ.

ಭದ್ರತಾ ಪಡೆಗಳಲ್ಲದೇ, ಎಸ್‌ಡಿಆರ್‌ಎಫ್‌, ಎನ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಕೈಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT