ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿರ್ಬಂಧ ಬೆಂಬಲಿಸಿದ್ದ ಬಿಜೆಪಿ ಈಗ ಟೀಕಿಸುವುದು ಸರಿಯಲ್ಲ: ಸಂಜಯ್ ರಾವುತ್

BJP first supported govt on COVID-19 curbs, now opposing: Raut
Last Updated 7 ಏಪ್ರಿಲ್ 2021, 15:04 IST
ಅಕ್ಷರ ಗಾತ್ರ

ಮುಂಬೈ: ‘ಕೋವಿಡ್‌–19 ಪ್ರಕರಣಗಳು ಹರಡುತ್ತಿರುವುದನ್ನು ತಡೆಯಲು ನಿರ್ಬಂಧ ವಿಧಿಸಿದ್ದ ಮಹಾರಾಷ್ಟ್ರ ಸರ್ಕಾರದ ಕ್ರಮಗಳನ್ನು ಈ ಮೊದಲು ಬೆಂಬಲಿಸಿದ್ದ ಬಿಜೆಪಿ, ಈಗ ಟೀಕಿಸುತ್ತಿರುವುದು ಸರಿಯಲ್ಲ’ ಎಂದು ಶಿವಸೇನಾ ನಾಯಕ ಸಂಜಯ್ ರಾವುತ್ ಬುಧವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಕೋವಿಡ್‌ನಂಥ ಸಾಂಕ್ರಾಮಿಕದ ಸಂದರ್ಭದಲ್ಲಿ ವಿರೋಧಪಕ್ಷಗಳು ರಾಜಕೀಯ ಮಾಡುವುದನ್ನು ಬಿಡಬೇಕು’ಎಂದರು.

‌‘ಮಹಾರಾಷ್ಟ್ರದಲ್ಲಿ ಆರಂಭದಲ್ಲಿ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿದಾಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಮನವಿಗೆ ಬಿಜೆಪಿ ಬೆಂಬಲಿಸಿ ಸಹಕಾರ ನೀಡಿತ್ತು. ಆದರೆ, ಈಗ ನಿರ್ಬಂಧ ವಿಧಿಸುತ್ತಿರುವುದನ್ನು ಟೀಕಿಸುತ್ತಿದೆ. ಪ್ರತಿ ಜೀವವೂ ಮುಖ್ಯ. ಇಂಥ ಸಂದರ್ಭಗಳಲ್ಲಿ ರಾಜಕೀಯ ಮಾಡಬಾರದು’ ಎಂದು ರಾವುತ್ ತಿಳಿಸಿದರು.

‘ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್‌ನಲ್ಲಿ ಅಲ್ಲಿನ ಹೈಕೋರ್ಟ್ ಲಾಕ್‌ಡೌನ್ ಮಾಡಲು ಆದೇಶಿಸಿದೆ. ಆದರೆ, ಅದೇ ಬಿಜೆಪಿ ಮಹಾರಾಷ್ಟ್ರದಲ್ಲಿ ಕೋವಿಡ್ ನಿರ್ಬಂಧಗಳನ್ನು ಟೀಕಿಸುತ್ತಿದೆ. ನಿರ್ಬಂಧಗಳಂಥ ನಿರ್ಧಾರ ತೆಗೆದುಕೊಳ್ಳಲು ಯಾವುದೇ ಸರ್ಕಾರವು ಸಂತಸ ಪಡುವುದಿಲ್ಲ. ಇದೊಂದು ತುರ್ತು ಸಂದರ್ಭ ಎಂಬುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕು’ ಎಂದರು.

ಮಹಾರಾಷ್ಟ್ರದಲ್ಲಿ ಕೆಲ ದಿನಗಳಿಂದ ಕೋವಿಡ್ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗಿದೆ. ಈ ಕಾರಣಕ್ಕಾಗಿ ಸೋಮವಾರದಿಂದ ಏ. 30ರವರೆಗೆ ವಾರಾಂತ್ಯದ ಎರಡು ದಿನಗಳಲ್ಲಿ ಲಾಕ್‌ಡೌನ್ ಮತ್ತು ರಾತ್ರಿ ಕರ್ಫ್ಯೂ ಘೋಷಿಸಲಾಗಿದೆ. ಇತರ ಜೊತೆಗೆ ಖಾಸಗಿ ಕಚೇರಿಗಳು, ಚಿತ್ರಮಂದಿರಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ.

ಪ್ರಕರಣಗಳ ಸಂಖ್ಯೆ ಹೆಚ್ಚಾದ ಕಾರಣ ಮಹಾರಾಷ್ಟ್ರದಲ್ಲಿ ವಾರಂತ್ಯದಲ್ಲಿ ಲಾಕ್‌ಡೌನ್ ವಿಧಿಸಬೇಕೆಂದು ಬಿಜೆಪಿ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್ ಭಾನುವಾರ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ನಡುವೆ ಮಂಗಳವಾರ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಫಡ್ನವೀಸ್, ‘ನಾವು ನಿಮ್ಮೊಂದಿಗೆ ಚರ್ಚಿಸಿದಂತೆ ವಾರಾಂತ್ಯದಲ್ಲಿ ಮಾತ್ರ ನಿರ್ಬಂಧ ವಿಧಿಸಬೇಕೆಂದು ಕೋರಿದ್ದೆವು. ಆದರೆ, ವಾರದ ಉಳಿದ ಐದು ದಿನಗಳಲ್ಲೂ ಲಾಕ್‌ಡೌನ್ ರೀತಿಯ ನಿರ್ಬಂಧಗಳನ್ನು ವಿಧಿಸುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ’ ಎಂದು ಹೇಳಿದ್ದಾರೆ.

‘ಅಘೋಷಿತ ಲಾಕ್‌ಡೌನ್, ಸಣ್ಣ ವ್ಯಾಪಾರಿಗಳು, ಸಲೂನ್ ನಡೆಸುವವರು, ಚಿಲ್ಲರೆ ವ್ಯಾಪಾರಿಗಳಿಗೆ ಮೇಲೆ ಪರಿಣಾಮ ಬೀರಲಿದೆ’ ಎಂದೂ ಫಡ್ನವೀಸ್ ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT