ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ ಹಿಂಸಾಚಾರ: ಪ್ರಮಾಣ ಪತ್ರ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ

Last Updated 22 ಜುಲೈ 2021, 14:39 IST
ಅಕ್ಷರ ಗಾತ್ರ

ಕೋಲ್ಕತ್ತ: ವಿಧಾನಸಭಾ ಚುನಾವಣೆಯ ನಂತರ ನಡೆದ ಹಿಂಸಾಚಾರದ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಸಲ್ಲಿಸಿರುವ ವರದಿಯ ಬಗ್ಗೆ ತನ್ನ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಿ ಪ್ರಮಾಣಪತ್ರ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕಲ್ಕತ್ತ ಹೈಕೋರ್ಟ್ ಗುರುವಾರ ನಿರ್ದೇಶನ ನೀಡಿದೆ.

ಹಿಂಸಾಚಾರದ ಪರಿಣಾಮ ಜನರು ಹಲ್ಲೆಗೆ ಒಳಗಾಗಿದ್ದಾರೆ. ಮನೆಗಳಿಂದ ಪಲಾಯನ ಮಾಡಿದ್ದಾರೆ ಮತ್ತು ಆಸ್ತಿಪಾಸ್ತಿ ನಷ್ಟ ಉಂಟಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಐವರು ನ್ಯಾಯಮೂರ್ತಿಗಳನ್ನೊಳಗೊಂಡಿರುವ ನ್ಯಾಯಪೀಠವು ಜುಲೈ 26 ರೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 28ರಂದು ನಡೆಯಲಿದೆ.

ಎನ್‌ಎಚ್‌ಆರ್‌ಸಿಯ ಏಳು ಸದಸ್ಯರ ಸಮಿತಿಯು ಹಿಂಸಾಚಾರದ ಕುರಿತ ವರದಿಯನ್ನು ಜುಲೈ 13 ರಂದು ಹೈಕೋರ್ಟ್‌ಗೆ ಸಲ್ಲಿಸಿತ್ತು. ಹಿಂಸಾಚಾರದ ವೇಳೆ ನಡೆದ ಕೊಲೆ, ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಪ್ರಕರಣದ ವಿಚಾರಣೆಯನ್ನು ರಾಜ್ಯದ ಹೊರಗೆ ನಡೆಸಬೇಕು ಎಂದು ಸಮಿತಿಯು ನ್ಯಾಯಾಲಯವನ್ನು ಕೋರಿದೆ.

ಎನ್‌ಎಚ್‌ಆರ್‌ಸಿ ವರದಿಯಲ್ಲಿ ಅಕ್ರಮಗಳಿವೆ ಮತ್ತು ಮೇ 2 ರಂದು ಚುನಾವಣಾ ಫಲಿತಾಂಶ ಘೋಷಣೆಯಾಗುವುದಕ್ಕಿಂತಲೂ ಮೊದಲು ನಡೆದ ಅಪರಾಧದ ಪ್ರಕರಣಗಳೂ ಒಳಗೊಂಡಿವೆ ಎಂದು ಪ್ರತಿವಾದಿಯೊಬ್ಬರ ಪರವಾಗಿ ಹಾಜರಾದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಆರೋಪಿಸಿದ್ದಾರೆ. ವರದಿಯು ರಾಜಕೀಯಪ್ರೇರಿತವಾಗಿದೆ ಎಂದೂ ಅವರು ಆರೋಪಿಸಿದ್ದಾರೆ.

ಎನ್‌ಎಚ್‌ಆರ್‌ಸಿ ವರದಿಯು ಪಶ್ಚಿಮ ಬಂಗಾಳದ ನಿಜವಾದ ಕಾನೂನು ಸುವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ದೂರುದಾರರ ಪರ ಹಾಜರಾದ ಹಿರಿಯ ವಕೀಲ ಮಹೇಶ್‌ ಜೆಠ್ಮಲಾನಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT