ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಉದ್ಯಮ: ₹ 5 ಲಕ್ಷ ಕೋಟಿ ವಹಿವಾಟು ಗುರಿ

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿಕೆ
Last Updated 21 ಫೆಬ್ರುವರಿ 2021, 7:44 IST
ಅಕ್ಷರ ಗಾತ್ರ

ನವದೆಹಲಿ: ಗ್ರಾಮೀಣ ಪ್ರದೇಶಗಳಲ್ಲಿರುವ ಗುಡಿ ಕೈಗಾರಿಕೆಗಳ ವಾರ್ಷಿಕ ವಹಿವಾಟನ್ನು ಮುಂದಿನ 2–3 ವರ್ಷಗಳಲ್ಲಿ ₹ 80,000 ಕೋಟಿಯಿಂದ ₹ 5 ಲಕ್ಷ ಕೋಟಿಗೆ ಹೆಚ್ಚಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾನುವಾರ ಹೇಳಿದರು.

ಇಲ್ಲಿನ ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ‘ಹುನರ್‌ ಹಾಟ್‌’ನ 26ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದ ಆರ್ಥಿಕತೆಗೆ ಕರಕುಶಲ ಕರ್ಮಿಗಳು ಮಹತ್ತರ ಕೊಡುಗೆ ನೀಡಲು ಸಾಧ್ಯ’ ಎಂದರು.

‘ಗ್ರಾಮೀಣ ಭಾಗದಲ್ಲಿರುವ ಕೈಗಾರಿಕೆಗಳಿಗೆ ಎಷ್ಟು ಪ್ರಮಾಣದಲ್ಲಿ ಪ್ರೋತ್ಸಾಹ ಸಿಗಬೇಕಿತ್ತೋ ಅಷ್ಟು ಸಿಗುತ್ತಿಲ್ಲ. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಹೆಚ್ಚು ಮುತುವರ್ಜಿ ವಹಿಸುತ್ತಿದೆ’ ಎಂದೂ ರಾಜನಾಥ್‌ ಸಿಂಗ್‌ ಹೇಳಿದರು.

‘ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ಹುನರ್‌ ಹಾಟ್‌ ಆರಂಭಿಸುವ ಮೂಲಕ ಉತ್ತಮ ಕಾರ್ಯ ಮಾಡಿದೆ. ಇದು ಆತ್ಮನಿರ್ಭರ ಭಾರತ ಉದ್ದೇಶ ಈಡೇರಿಸುವಲ್ಲಿ ಮಹತ್ತರ ಪಾತ್ರ ವಹಿಸುವುದು’ ಎಂದರು.

ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಕ್ತಾರ್‌ ಅಬ್ಬಾಸ್‌ ನಖ್ವಿ ಮಾತನಾಡಿ, ‘5 ಲಕ್ಷಕ್ಕೂ ಅಧಿಕ ಕುಶಲಕರ್ಮಿಗಳಿಗೆ ಹುನರ್‌ ಹಾಟ್‌ ಉದ್ಯೋಗ ಒದಗಿಸಿದೆ’ ಎಂದರು.

‘ದೇಶದ 75ನೇ ಸ್ವಾತಂತ್ರ್ಯೋತ್ಸವ ಮುಂದಿನ ವರ್ಷ ನಡೆಯುವುದು. ಈ ವೇಳೆಗೆ 75 ಇಂಥ ಮೇಳಗಳನ್ನು ಆಯೋಜಿಸಿ, 7,50,000 ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗುವುದು’ ಎಂದೂ ಹೇಳಿದರು.

ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಚಂಡಿಗಡ, ಗೋವಾ, ಗುಜರಾತ್‌ ಸೇರಿದಂತೆ 31 ರಾಜ್ಯಗಳ 600ಕ್ಕೂ ಅಧಿಕ ಕುಶಲಕರ್ಮಿಗಳು ತಯಾರಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಗಮನ ಸೆಳೆಯುತ್ತಿದೆ.

ಈ ಮೇಳ ಮಾರ್ಚ್‌ 1ರ ವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT