ಒಡಿಶಾದ ಅತಿ ಉದ್ದದ ಸೇತುವೆ ಉದ್ಘಾಟಿಸಿದ ಸಿಎಂ ಪಟ್ನಾಯಕ್

ಭುವನೇಶ್ವರ: ಕಟಕ್ ಜಿಲ್ಲೆಯ ಗೋಪಿನಾಥಪುರದಲ್ಲಿ ಮಹಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಒಡಿಶಾದ ಅತಿ ಉದ್ದದ ಸೇತುವೆಯನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸೋಮವಾರ ಉದ್ಘಾಟಿಸಿದರು.
ಸಿಂಗನಾಥ್ ಪೀಠದಿಂದ ಕಟಕ್ ಜಿಲ್ಲೆಯ ಬೈದೇಶ್ವರ್‌ಗೆ ಸಂಪರ್ಕ ಕಲ್ಪಿಸುವ ಈ ಸೇತುವೆಯು 3.4 ಕಿ.ಮೀ ಉದ್ದವಿದೆ. ಇದರಿಂದ ಸುಮಾರು ಐದು ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಎರಡೂ ಸ್ಥಳಗಳ ನಡುವೆ ಇದಕ್ಕೂ ಮೊದಲು 45 ಕಿ.ಮೀ ಕ್ರಮಿಸಬೇಕಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೇತುವೆಯನ್ನು ಟಿ (T) ಆಕಾರದಲ್ಲಿ ನಿರ್ಮಿಸಲಾಗಿದ್ದು, ₹ 111 ಕೋಟಿ ವೆಚ್ಚವಾಗಿದೆ. ಪಟ್ನಾಯಕ್ ಅವರು 2014ರ ಫೆಬ್ರುವರಿ 28 ರಂದು ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಪಟ್ನಾಯಕ್ ಭೇಟಿ ಹಿನ್ನೆಲೆಯಲ್ಲಿ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಲು ಮುಂದಾಗಿದ್ದ ಮಾಜಿ ಶಾಸಕ ದೇವಾಸಿಸ್ ಪಟ್ನಾಯಕ್ ಸೇರಿದಂತೆ ಕಾಂಗ್ರೆಸ್ ಹಾಗೂ ಬಿಜೆಪಿಯ ನೂರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಕಿ ಪಟ್ಟಣದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಲಹಂಡಿಯಲ್ಲಿ ಶಿಕ್ಷಕಿಯೊಬ್ಬರ ಅಪಹರಣ ಮತ್ತು ಕೊಲೆ ಪ್ರಕರಣದೊಂದಿಗೆ ಸಚಿವ ಡಿ.ಎಸ್. ಮಿಶ್ರಾ ಅವರು ಸಂಬಂಧ ಹೊಂದಿದ್ದಾರೆ. ಕೂಡಲೇ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಎಂದು ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದರು.
ಕಥಾಜೋಡಿ ನದಿಗೆ ತ್ರಿಸುಲಿಯಾದಲ್ಲಿ ನಿರ್ಮಿಸಿರುವ 2.88 ಕಿ.ಮೀ. ಉದ್ದದ ನೇತಾಜಿ ಸುಬಾಷ್ ಚಂದ್ರ ಬೋಸ್ ಸೇತುವೆಯನ್ನು ಪಟ್ನಾಯಕ್ ಅವರು 2017ರಲ್ಲಿ ಉದ್ಘಾಟಿಸಿದ್ದರು. ಇದುವರೆಗೆ ಆ ಸೇತುವೆಯು ರಾಜ್ಯದ ಅತಿ ಉದ್ದದ ಸೇತುವೆ ಎನಿಸಿತ್ತು. ಇದು ಭುವನೇಶ್ವರದಿಂದ ಕಟಕ್ಗೆ ಬಾರಂಗ್ ಮಾರ್ಗವಾಗಿ ಸಂಪರ್ಕ ಕಲ್ಪಿಸುತ್ತದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.