ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸೇರಿ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ‘ಸುಪ್ರೀಂ’ ತೀರ್ಪು ಲಭ್ಯ

ಗಣರಾಜ್ಯೋತ್ಸವದ ದಿನದಿಂದಲೇ ಕಾರ್ಯಗತ: ಸಿಜೆಐ ಘೋಷಣೆ
Last Updated 25 ಜನವರಿ 2023, 18:35 IST
ಅಕ್ಷರ ಗಾತ್ರ

ನವದೆಹಲಿ : ಕನ್ನಡ ಸೇರಿದಂತೆ ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರತಿಗಳನ್ನು ಒದಗಿಸುವ ಆನ್‌ಲೈನ್‌ ಸೇವೆಗೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್‌ ಅವರು ಬುಧವಾರ ಚಾಲನೆ ನೀಡಿದ್ದಾರೆ. ಈ ಸೇವೆ ಗುರುವಾರದಿಂದಲೇ (ಗಣರಾಜ್ಯೋತ್ಸವದ ದಿನ) ಕಾರ್ಯಗತಗೊಳ್ಳಲಿದೆ.

‘ಎಲೆಕ್ಟ್ರಾನಿಕ್‌–ಸುಪ್ರೀಂ ಕೋರ್ಟ್‌ ರಿಪೋರ್ಟ್ಸ್‌ (ಇ–ಎಸ್‌ಸಿಆರ್‌) ಯೋಜನೆಯ ಭಾಗವಾಗಿ ನ್ಯಾಯಾಲಯವು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಉಚಿತವಾಗಿ ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರತಿಗಳನ್ನು ಒದಗಿಸಲು ನಿರ್ಧರಿಸಿದೆ’ ಎಂದು ಸಿಜೆಐ ಚಂದ್ರಚೂಡ್‌ ಅವರು ಬುಧವಾರ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಿದ್ದ ವಕೀಲರಿಗೆ ತಿಳಿಸಿದರು.

‘ಇ–ಎಸ್‌ಸಿಆರ್‌ ಯೋಜನೆಯಡಿ ಸದ್ಯ ಸುಮಾರು 34 ಸಾವಿರ ತೀರ್ಪುಗಳನ್ನು ಕ್ರೋಡೀಕರಿಸಲಾಗಿದೆ. ಜೊತೆಗೆ 1,091 ತೀರ್ಪುಗಳು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ ಇದ್ದು, ಇವು ಗುರುವಾರದಿಂದ ಎಲ್ಲರಿಗೂ ದೊರೆಯುತ್ತವೆ. ಕನ್ನಡದಲ್ಲಿ 17, ಒಡಿಯಾದಲ್ಲಿ 21, ಮರಾಠಿಯಲ್ಲಿ 14, ಅಸ್ಸಾಮಿಯಲ್ಲಿ 4, ಮಲೆಯಾಳದಲ್ಲಿ 29, ನೇಪಾಳಿಯಲ್ಲಿ 3, ಪಂಜಾಬಿಯಲ್ಲಿ 4, ತೆಲುಗಿನಲ್ಲಿ 28, ಉರ್ದುವಿನಲ್ಲಿ 3 ಹಾಗೂ ತಮಿಳಿನಲ್ಲಿ 52 ತೀರ್ಪುಗಳು ಈಗಾಗಲೇ ಲಭ್ಯ ಇವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘22 ಪ್ರಾದೇಶಿಕ ಭಾಷೆಗಳಲ್ಲೂ ತೀರ್ಪಿನ ಪ್ರತಿ ಒದಗಿಸುವ ಗುರಿಯನ್ನು ಸುಪ್ರೀಂ ಕೋರ್ಟ್‌ ಹೊಂದಿದೆ. ತೀರ್ಪುಗಳ ಆನ್‌ಲೈನ್‌ ಪ್ರತಿಗಳು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌, ಮೊಬೈಲ್‌ ಆ್ಯಪ್‌ ಹಾಗೂ ನ್ಯಾಷನಲ್‌ ಜ್ಯುಡಿಷಿಯಲ್‌ ಡಾಟಾ ಗ್ರಿಡ್‌ನ (ಎನ್‌ಜೆಡಿಜಿ) ಜಡ್ಜ್‌ಮೆಂಟ್‌ ‍ಪೋರ್ಟಲ್‌ನಲ್ಲಿ ಲಭ್ಯ ಇವೆ’ ಎಂದಿದ್ದಾರೆ.

‘ದೇಶದ ವಿವಿಧ ಭಾಗಗಳಲ್ಲಿ ಇರುವ ವಕೀಲರು, ಕಾನೂನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಚಿತವಾಗಿ ಈ ಸೇವೆಯ ಪ್ರಯೋಜನ ಪಡೆದುಕೊಳ್ಳಬಹುದು. ‘ಸರ್ಚ್‌ ಎಂಜಿನ್‌’ ಅನ್ನು ಸುಧಾರಿಸುವ ಕಾರ್ಯಕ್ಕೂ ನಾವು ಮುಂದಾಗಿದ್ದೇವೆ. ಈ ವರ್ಷದ ಜನವರಿ 1ರವರೆಗಿನ ತೀರ್ಪುಗಳ ಪ್ರತಿಗಳು ಪ್ರತಿಯೊಬ್ಬರಿಗೂ ದೊರೆಯುವ ವ್ಯವಸ್ಥೆ ಮಾಡಲಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

ಆನ್‌ಲೈನ್‌ನಲ್ಲಿ ತೀರ್ಪಿನ ಪ್ರತಿ

ನ್ಯಾಯಾಲಯದ ತೀರ್ಪುಗಳ ಪ್ರತಿಗಳನ್ನು ಆನ್‌ಲೈನ್‌ ಮೂಲಕ ಒದಗಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್‌ ಜನವರಿ 2ರಂದು ಇ–ಎಸ್‌ಸಿಆರ್‌ ಯೋಜನೆ ಜಾರಿಗೊಳಿಸಿತ್ತು.

ಜೊತೆಗೆ ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ನೆರವಿನೊಂದಿಗೆ ಸರ್ಚ್‌ ಎಂಜಿನ್‌ ಕೂಡ ಅಭಿವೃದ್ಧಿಪಡಿಸಿತ್ತು.

***

ದೇಶದೆಲ್ಲೆಡೆ ವಕೀಲರು, ಕಾನೂನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ದೊರೆಯುತ್ತಿರುವ ಉಚಿತ ಸೇವೆ ಇದು. ಎಲ್ಲರೂ ಇದರ ಪ್ರಯೋಜನ ಪಡೆಯಬಹುದು

- ಡಿ.ವೈ.ಚಂದ್ರಚೂಡ್‌, ಸಿಜೆಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT