ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿ: ಪ್ರಮಾಣಪತ್ರ ಸಲ್ಲಿಸಿ: ಕೇಂದ್ರ, ಆರ್‌ಬಿಐಗೆ ‘ಸುಪ್ರೀಂ’ ಸೂಚನೆ

500, 1,000 ಮುಖಬೆಲೆಯ ನೋಟುಗಳ ರದ್ದತಿ ನಿರ್ಧಾರ l ಕೇಂದ್ರ, ಆರ್‌ಬಿಐಗೆ ‘ಸುಪ್ರೀಂ’ ಸೂಚನೆ
Last Updated 12 ಅಕ್ಟೋಬರ್ 2022, 18:38 IST
ಅಕ್ಷರ ಗಾತ್ರ

ನವದೆಹಲಿ: ಅಧಿಕ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ನಿರ್ಧಾ ರಕ್ಕೆ ಸಂಬಂಧಿಸಿ ಸಮಗ್ರವಾದ ಪ್ರಮಾಣ
ಪತ್ರಗಳನ್ನು ಸಲ್ಲಿಸುವಂತೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್‌ ಬ್ಯಾಂಕಿಗೆ (ಆರ್‌ಬಿಐ) ಸುಪ್ರೀಂಕೋರ್ಟ್‌ ಬುಧವಾರ ಸೂಚಿಸಿತು.

ಈ ವಿಷಯಕ್ಕೆ ಸಂಬಂಧಿಸಿ ಆರ್‌ಬಿಐಗೆ ಕಳುಹಿಸಿದ್ದ ಪತ್ರ, ಆರ್‌ಬಿಐ ಮಂಡಳಿ ಕೈಗೊಂಡ ನಿರ್ಧಾರ ಹಾಗೂ ನೋಟು ರದ್ದತಿ ಘೋಷಣೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸು
ವಂತೆಯೂ ನ್ಯಾಯಮೂರ್ತಿ ಎಸ್‌.ಅಬ್ದುಲ್‌ ನಜೀರ್‌ ನೇತೃತ್ವದ ಐವರು ಸದಸ್ಯರ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ, ಎ.ಎಸ್‌.ಬೋಪಣ್ಣ, ವಿ. ರಾಮ ಸುಬ್ರಮಣಿಯನ್‌ ಮತ್ತು ಬಿ.ವಿ.ನಾಗರತ್ನಾ ಅವರು ಈ ನ್ಯಾಯಪೀಠದಲ್ಲಿದ್ದಾರೆ.

‘ಸರ್ಕಾರದ ನೀತಿ ನಿರ್ಧಾರಗಳ ಕುರಿತು ಪರಾಮರ್ಶೆ ಮಾಡುವಾಗ ತನಗಿರುವ ‘ಲಕ್ಷ್ಮಣ ರೇಖೆ’ಯ ಅರಿವು ನ್ಯಾಯಾಲಯಕ್ಕೆ ಇದೆ’ ಎಂದೂ ನ್ಯಾಯಪೀಠ ಹೇಳಿತು.

‘ಆರ್‌ಬಿಐ ಕಾಯ್ದೆಯ ಸೆಕ್ಷನ್‌ 26ರ ಅನ್ವಯ, ₹ 500 ಹಾಗೂ ₹1000 ಮುಖಬೆಲೆಯ ಎಲ್ಲ ನೋಟುಗಳನ್ನು ರದ್ದು ಮಾಡಲು ಕೇಂದ್ರ ಸರ್ಕಾರ ಅಧಿಕಾರ ಹೊಂದಿತ್ತೆ ಎಂಬುದೇ ಇಲ್ಲಿ ಮುಖ್ಯಪ್ರಶ್ನೆ’ ಎಂದು ಹೇಳಿದ ನ್ಯಾಯಪೀಠ, ವಿಚಾರಣೆಯನ್ನು ನವೆಂಬರ್‌ 9ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ಕೇಂದ್ರದ ಪರವಾದ ಮಂಡಿಸಿದ ಅಟಾರ್ನಿ ಜನರಲ್ ಆರ್‌.ವೆಂಕಟರಮಣಿ ಹಾಗೂ ಸಾಲಿಸಿ
ಟರ್‌ ಜನರಲ್ ತುಷಾರ್ ಮೆಹ್ತಾ, ‘ಈ ವಿಷಯ ಈಗ ಜಿಜ್ಞಾಸೆಯ ಕಸರತ್ತಾಗಿದೆ. ಕಾಯ್ದೆಯನ್ನೇ ಪ್ರಶ್ನಿಸದಿರುವಾಗ, ಆ ಕಾಯ್ದೆಯಡಿ ಹೊರಡಿಸಿದ ಅಧಿಸೂಚನೆಗಳನ್ನು ಪ್ರಶ್ನಿಸಲಾಗದು’ ಎಂದರು.

ಇದಕ್ಕೆ ಆಕ್ಷೇಪಿಸಿದ ಹಿರಿಯ ವಕೀಲ ಪಿ.ಚಿದಂಬರಂ, ‘ 2016ರಲ್ಲಿ ಕೈಗೊಂಡ ನೋಟುಗಳ ರದ್ದತಿ ನಿರ್ಧಾರವು ದೇಶದ ಆರ್ಥಿಕತೆ ಹಾಗೂ ಸಾಮಾನ್ಯ ಜನರ ಮೇಲೆ ಭೀಕರ ಪರಿಣಾಮ ಬೀರಿದೆ. ಹೀಗಾಗಿ, ಭವಿಷ್ಯದ ದೃಷ್ಟಿಯಿಂದ ಈ ವಿಷಯ ಈಗಲೂ ಪ್ರಸ್ತುತ’ ಎಂದರು.

ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ಈ ರೀತಿಯ ಅಕಾಡೆಮಿಕ್‌ ವಿಚಾರಗಳಿಗೆ ನ್ಯಾಯಾಲಯದ ಸಮಯ ವ್ಯರ್ಥವಾಗಬಾರದು’ ಎಂದರು.

ಈ ಮಾತಿಗೆ, ಅರ್ಜಿದಾರ ನಾರಾಯಣ ಶರ್ಮಾ ಅವರ ಪರ ವಕೀಲ ಶ್ಯಾಮ್‌ ದಿವಾನ್‌ ಅವರು ಆಕ್ಷೇಪ ವ್ಯಕ್ತಪಡಿಸಿದರು. ‘ನೋಟು ರದ್ದತಿ ಪ್ರಶ್ನಿಸಿ ಸಲ್ಲಿಕೆಯಾಗುವ ಅರ್ಜಿಗಳ ವಿಚಾರಣೆಯನ್ನು ಇತರ ನ್ಯಾಯಾಲಯಗಳು ನಡೆಸದಂತೆ ಸುಪ್ರೀಂಕೋರ್ಟ್‌ ಆದೇಶಿಸಿದೆ’ ಎಂದು ನ್ಯಾಯಪೀಠದ ಗಮನಕ್ಕೆ ತಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT