ಗುರುವಾರ , ಆಗಸ್ಟ್ 18, 2022
25 °C

ತಮ್ಮನ ಕೋಪ ತಣಿಸಲು 5 ಕೆಜಿ ತೂಕದ ಪತ್ರ ಬರೆದ ಅಕ್ಕ!

ಪಿಟಿಐ Updated:

ಅಕ್ಷರ ಗಾತ್ರ : | |

ಇಡುಕ್ಕಿ (ಕೇರಳ): ಸಹೋದರರ ದಿನ ಶುಭಕೋರಲಿಲ್ಲವೆಂದು ಕೋಪಿಸಿಕೊಂಡು ತನ್ನ ಜೊತೆ ಮಾತನಾಡುವುದನ್ನೇ ನಿಲ್ಲಿಸಿದ್ದ ತಮ್ಮನನ್ನು ಸಂತೈಸಲು ಯುವತಿಯೊಬ್ಬರು 5 ಕೆ.ಜಿ.ತೂಕ ಹಾಗೂ 434 ಮೀಟರ್‌ ಉದ್ದದ ಸುದೀರ್ಘ ಪತ್ರವೊಂದನ್ನು ಬರೆದಿದ್ದಾರೆ! 

ಕೇರಳದ ಕೃಷ್ಣಪ್ರಿಯಾ ಪತ್ರ ಬರೆದವರು. 

‘ಸಹೋದರರ ದಿನ ತಮ್ಮನಿಗೆ ಶುಭಕೋರಲು ಮರೆತಿದ್ದೆ. ಇದರಿಂದ ಮುನಿಸಿಕೊಂಡಿದ್ದ ಆತ ಮೊಬೈಲ್‌ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ನನ್ನ ಮೊಬೈಲ್‌ ಸಂಖ್ಯೆ ‘ಬ್ಲಾಕ್‌’ ಮಾಡಿದ್ದ. ತಪ್ಪಿನ ಅರಿವಾದ ಬಳಿಕ ಪತ್ರ ಬರೆಯಲು ನಿರ್ಧರಿಸಿದ್ದೆ’ ಎಂದು ಎಂಜಿನಿಯರಿಂಗ್‌ ವಿದ್ಯಾರ್ಥಿನಿಯಾಗಿರುವ ಕೃಷ್ಣಪ್ರಿಯಾ ಹೇಳಿದ್ದಾರೆ.

‘ಪತ್ರ ಬರೆಯಲು ಮೊದಲು ಎ–4 ಗಾತ್ರದ ಹಾಳೆ ಆಯ್ಕೆಮಾಡಿಕೊಂಡಿದ್ದೆ. ನಾನು ಆತನ ಮೇಲೆ ಇಟ್ಟಿರುವ ಪ್ರೀತಿ, ಮಮತೆ, ಅಕ್ಕರೆ ಹಾಗೂ ನಮ್ಮಿಬ್ಬರ ಒಡನಾಟದ ಬಗ್ಗೆ ವಿವರಿಸಲು ಅದು ಸಾಕಾಗುವುದಿಲ್ಲ ಎಂಬುದು ಮನದಟ್ಟಾಯಿತು. ಹೀಗಾಗಿ ಮಾರುಕಟ್ಟೆಗೆ ಹೋಗಿ ಬಿಲ್‌ಗೆ ಬಳಸುವ ಕಾಗದದ 14 ರೋಲ್‌ಗಳನ್ನು ಖರೀದಿಸಿದೆ. ಪತ್ರ ಬರೆದು ಮುಗಿಸಲು ಸುಮಾರು 12 ಗಂಟೆ ಸಮಯ ಬೇಕಾಯಿತು’ ಎಂದು ತಿಳಿಸಿದ್ದಾರೆ.

‘ನಮ್ಮಿಬ್ಬರ ನಡುವಣ ವಯಸ್ಸಿನ ಅಂತರ 7 ವರ್ಷ. ಹೀಗಿದ್ದರೂ ಇಬ್ಬರು ಅವಳಿ ಮಕ್ಕಳಂತೆ ಇದ್ದೆವು. ವಿಶೇಷ ಸಂದರ್ಭಗಳಲ್ಲಿ ಒಂದೇ ವರ್ಣದ ಬಟ್ಟೆಗಳನ್ನು ಧರಿಸುತ್ತಿದ್ದೆವು’ ಎಂದೂ ಹೇಳಿದ್ದಾರೆ.  

‘ಅಕ್ಕನ ಪತ್ರ ಕೈಸೇರಿದಾಗ ಆಶ್ಚರ್ಯವಾಯಿತು. ಅದನ್ನು ಓದಿದ ಬಳಿಕ ತುಂಬಾ ಖುಷಿಯಾಯಿತು. ಆಕೆಯ ಮೇಲಿನ ಕೋಪವೂ ದೂರವಾಯಿತು’ ಎಂದು ಸಹೋದರ ಕೃಷ್ಣಪ್ರಸಾದ್‌ ಸಂತಸ ವ್ಯಕ್ತಪಡಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು