ಬುಧವಾರ, ಆಗಸ್ಟ್ 17, 2022
26 °C

ಚಲಿಸುವ ವ್ಯಾನ್‌ನಲ್ಲಿ ಸಾಮೂಹಿಕ ಅತ್ಯಾಚಾರ: ಯುವತಿಯಿಂದ ದೂರು

ಪಿಟಿಐ Updated:

ಅಕ್ಷರ ಗಾತ್ರ : | |

ಬುಲಂದ್‌ಶಹರ್‌ (ಉ.ಪ್ರ): ‘ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ತನ್ನನ್ನು ಅಪಹರಿಸಿದ ನಾಲ್ವರು ಯುವಕರು ಚಲಿಸುವ ವ್ಯಾನ್‌ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿರುವುದಾಗಿ ಯುವತಿಯೊಬ್ಬರು ದೂರು ದಾಖಲಿಸಿದ್ದಾರೆ’ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. 

ಛಾಟಾರಿ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

‘ಕೆಲಸದ ನಿಮಿತ್ತ ನಾನು ಡಿಸೆಂಬರ್‌ 3ರಂದು ಅಂಗಡಿಯೊಂದಕ್ಕೆ ಹೋಗುತ್ತಿದ್ದೆ. ಈ ವೇಳೆ ಹಿಂದಿನಿಂದ ವ್ಯಾನ್‌ವೊಂದು ಬಂದು ನಿಂತಿತು. ಅದರಿಂದ ಇಳಿದ ನಾಲ್ವರು ಹುಡುಗರು ಬಲವಂತವಾಗಿ ನನ್ನನ್ನು ವ್ಯಾನ್‌ನೊಳಗೆ ಎಳೆದೊಯ್ದರು. ಬಳಿಕ ವ್ಯಾನ್‌ ಬೈರಾಮನಗರ ರಸ್ತೆಯತ್ತ ಸಾಗಿತು. ಈ ವೇಳೆ ಅವರು ಸಾಮೂಹಿಕ ಅತ್ಯಾಚಾರ ನಡೆಸಿದರು. ಬಲಾತ್ಕಾರದ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರಿಸಿಕೊಂಡ ಅವರು ಯಾರಿಗಾದರೂ ಹೇಳಿದರೆ ನಿನ್ನ ತಂದೆ, ತಾಯಿಯನ್ನು ಕೊಲೆ ಮಾಡುವುದಾಗಿ ಬೆದರಿಸಿದರು. ಮುಖ್ಯ ಆರೋಪಿಯು ಮೂವರು ಸಹಚರರೊಂದಿಗೆ ಶನಿವಾರ ಬೆಳಿಗ್ಗೆ ನಮ್ಮ ಮನೆಗೆ ಬಂದು ತನ್ನ ವಿರುದ್ಧ ದೂರು ನೀಡಿದರೆ ಕುಟುಂಬದವರನ್ನೆಲ್ಲಾ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ’ ಎಂದು ಯುವತಿಯು ಲಿಖಿತ ದೂರಿನಲ್ಲಿ ವಿವರಿಸಿದ್ದಾರೆ.

‘ಸಂತ್ರಸ್ತ ಯುವತಿಯು ದೂರಿನಲ್ಲಿ ಹೆಸರಿಸಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಈ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಅವರು ಹೇಳಿಕೆ ನೀಡಿದ್ದಾರೆ’ ಎಂದು ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷ್‌ ಕುಮಾರ್‌ ಸಿಂಗ್‌ ಹೇಳಿದ್ದಾರೆ.  

‘ದೀಪಾವಳಿಗೂ ಮುನ್ನ ಯುವತಿಯ ತಾಯಿ ನಮ್ಮ ತಂದೆಗೆ ₹30,000 ಸಾಲ ಕೊಡಿಸಿದ್ದರು. ಇದಕ್ಕೆ ಪ್ರತಿಯಾಗಿ ₹ 2,000 ಕಮಿಷನ್‌ ಕೇಳಿದ್ದರು. ಹಣ ನೀಡಲು ನಮ್ಮ ತಂದೆ ಒಪ್ಪಿರಲಿಲ್ಲ. ಈ ವಿಚಾರವಾಗಿ ಎರಡೂ ಕುಟುಂಬದವರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಯುವತಿಯ ಮನೆಯವರ ಕರೆಯ ಮೇರೆಗೆ ಶನಿವಾರ ಮಧ್ಯಾಹ್ನ ಅವರ ಮನೆಗೆ ಹೋಗಿದ್ದೆ. ಈ ವೇಳೆ ನನ್ನ ಹಾಗೂ ಯುವತಿಯ ತಂದೆಯ ನಡುವೆ ವಾಗ್ವಾದ ನಡೆಯಿತು ಎಂದು ಆರೋಪಿಯು ವಿಚಾರಣೆ ವೇಳೆ ತಿಳಿಸಿದ್ದಾರೆ’ ಎಂದೂ ಸಂತೋಷ್‌ ಕುಮಾರ್ ಮಾಹಿತಿ ನೀಡಿದ್ದಾರೆ. 

‘ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದು, ನಮ್ಮ ತಂಡದವರು ಸಮಗ್ರ ತನಿಖೆ ಕೈಗೊಂಡಿದ್ದಾರೆ’ ಎಂದೂ ಅವರು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.