ಮಾನನಷ್ಟ ಮೊಕದ್ದಮೆ: ಪ್ರತಿಕ್ರಿಯೆ ದಾಖಲಿಸಲು ಸಚಿವ ಮಲ್ಲಿಕ್‌ಗೆ ಹೈಕೋರ್ಟ್ ಸೂಚನೆ

ಮುಂಬೈ: ಎನ್‌ಸಿಬಿ ಮುಂಬೈ ವಲಯದ ಅಧಿಕಾರಿ ಸಮೀರ್ ವಾಂಖೆಡೆ ಅವರ ತಂದೆ ಧ್ಯಾನ್‌ದೇವ್ ವಾಂಖೆಡೆ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ದಾಖಲಿಸಬೇಕು ಎಂದು ಮಹಾರಾಷ್ಟ್ರದ ಸಚಿವ, ಎನ್‌ಸಿಪಿ ನಾಯಕ ನವಾಬ್ ಮಲ್ಲಿಕ್ ಅವರಿಗೆ ಬಾಂಬೆ ಹೈಕೋರ್ಟ್ ಸೋಮವಾರ ಸೂಚಿಸಿತು.
ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ನೇತೃತ್ವದ ರಜೆ ಅವಧಿಯ ನ್ಯಾಯಪೀಠವು ಮಂಗಳವಾರದ ಒಳಗೆ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿತು. ಅಲ್ಲದೆ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
‘ನಾಳೆಯೊಳಗೇ ಪ್ರತಿಕ್ರಿಯೆ ದಾಖಲಿಸಿ. ನಿಮಗೆ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡುವುದು ಸಾಧ್ಯವಾಗದಿದ್ದರೆ, ಇಲ್ಲಿಯೂ ಕೂಡಾ ನೀಡಬಹುದು’ ಎಂದು ನ್ಯಾಯಮೂರ್ತಿ ಜಾಮ್ದಾರ್ ಹೇಳಿದರು. ಅರ್ಜಿದಾರರ ವಿರುದ್ಧ ಯಾವುದೇ ಹೇಳಿಕೆಯನ್ನು ನೀಡುವುದರ ವಿರುದ್ಧ ಯಾವುದೇ ನಿರ್ದಿಷ್ಟ ಸೂಚನೆಯನ್ನು ಇದೇ ಸಂದರ್ಭದಲ್ಲಿ ಪೀಠವು ನೀಡಲಿಲ್ಲ.
ಇದನ್ನೂ ಓದಿ: ನಿಮ್ಮ ನಾದಿನಿ ಡ್ರಗ್ಸ್ ಜಾಲದಲ್ಲಿದ್ದಾರೆಯೇ?: ಸಮೀರ್ ವಾಂಖೆಡೆಗೆ ಸಚಿವ ಪ್ರಶ್ನೆ
ಅರ್ಜಿದಾರರ ಪರವಾಗಿ ಹಾಜರಿದ್ದ ಅರ್ಷದ್ ಶೇಖ್ ಅವರು, ‘ಸಚಿವರು ನಿತ್ಯ ಕೆಲವೊಂದು ಸುಳ್ಳು ಮತ್ತು ಮಾನಹಾನಿಕರ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಇನ್ನಷ್ಟು ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮತ್ತಷ್ಟು ಮಾನಹಾನಿಗೂ ಕಾರಣವಾಗುತ್ತಿದೆ. ಇಂದು, ಬೆಳಿಗ್ಗೆಯೂ ಸಚಿವರು ಸಮೀರ್ ವಾಂಖೆಡೆ ಅವರ ನಾದಿನಿ ವಿರುದ್ಧ ಟ್ವೀಟ್ ಮಾಡಿದ್ದಾರೆ’ ಎಂದರು.
‘ಮತ್ತಷ್ಟು ಹೇಳಿಕೆ ನೀಡುವುದರಿಂದ ಸಚಿವರು ದೂರ ಉಳಿಯಬೇಕು ಅಥವಾ ಕೋರ್ಟ್ ಈ ಕುರಿತು ನಿರ್ದೇಶನ ನೀಡಬೇಕು’ ಎಂದು ಅರ್ಜಿದಾರರ ಪರ ವಕೀಲರು ಕೋರಿದರು. ಮಲ್ಲಿಕ್ ಪರವಾಗಿ ಹಾಜರಿದ್ದ ವಕೀಲ ಅತುಲ್ ದಾಮ್ಲೆ ಅವರು, ‘ವಯಸ್ಸಿಗೆ ಬಂದ ಮಕ್ಕಳ ಪರವಾಗಿ ಅರ್ಜಿದಾರರು ಮಾತನಾಡುವಂತಿಲ್ಲ’ ಎಂದು ವಾದಿಸಿದರು. ಅಲ್ಲದೆ, ಪ್ರತಿಕ್ರಿಯೆ ದಾಖಲಿಸಲು ಸಮಯ ಕೋರಿದರು.
ಮಾನನಷ್ಟ ಮೊಕದ್ದಮೆ ದಾಖಲಿಸಿರುವ ಸಮೀರ್ ವಾಂಖೆಡೆ ಅವರ ತಂದೆ ಒಟ್ಟು ₹ 1.25 ಕೋಟಿ ನಷ್ಟ ಪರಿಹಾರ ಕೋರಿದ್ದಾರೆ. ಅಲ್ಲದೆ, ಮುಂದೆಯೂ ತಮ್ಮ ಕುಟುಂಬದ ವಿರುದ್ಧ ಹೇಳಿಕೆ ನೀಡದಂತೆಯೂ ನಿರ್ಬಂಧ ಹೇರಬೇಕು ಎಂದು ಮನವಿ ಮಾಡಿದ್ದರು.
ಹಡಗಿನಲ್ಲಿ ಡ್ರಗ್ಸ್ ಪ್ರಕರಣ ಕುರಿತು ದಾಳಿ ನಡೆಸಿದ್ದ ತಂಡದ ನೇತೃತ್ವವನ್ನು ಸಮೀರ್ ವಾಂಖೆಡೆ ವಹಿಸಿದ್ದರು. ಈ ಪ್ರಕರಣದಲ್ಲಿ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಸೇರಿ 19 ಮಂದಿ ಆರೋಪಿಗಳಾಗಿದ್ದಾರೆ. ‘ಇದೊಂದು ನಕಲಿ ಪ್ರಕರಣ’ ಎಂದು ಪ್ರತಿಪಾದಿಸಿರುವ ಸಚಿವ ನವಾಬ್ ಮಲ್ಲಿಕ್ ಅವರು ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.