ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌–19: ಸಂಶೋಧನಾ ಕೇಂದ್ರಗಳಿಗೆ ಮೋದಿ ಭೇಟಿ

ಲಸಿಕೆ ಅಭಿವೃದ್ಧಿಯಲ್ಲಿ ಆಗಿರುವ ಪ್ರಗತಿ ಪರಿಶೀಲನೆ
Last Updated 28 ನವೆಂಬರ್ 2020, 20:29 IST
ಅಕ್ಷರ ಗಾತ್ರ

ಅಹಮದಾಬಾದ್‌/ಹೈದರಾಬಾದ್‌/ಪುಣೆ: ಕೋವಿಡ್‌–19ಗೆ ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ದೇಶದ ಮೂರು ಕೇಂದ್ರಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭೇಟಿನೀಡಿ, ಲಸಿಕೆ ಅಭಿವೃದ್ಧಿಯಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸಿದರು.

ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಜೈಡಸ್‌ ಕೆಡಿಲಾ ಸಂಸ್ಥೆಗೆ ಭೇಟಿ ನೀಡುವ ಮೂಲಕ ಪ್ರಧಾನಿ ತಮ್ಮ ಕಾರ್ಯಕ್ರಮ ಆರಂಭಿಸಿದರು. ಪಿಪಿಇ ಕಿಟ್‌ ಧರಿಸಿ, ಅಲ್ಲಿ ನಡೆಯುತ್ತಿರುವ ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯನ್ನು ವೀಕ್ಷಿಸಿದರು. ವಿಜ್ಞಾನಿಗಳು ಹಾಗೂ ಲಸಿಕೆ ಅಭಿವೃದ್ಧಿಪಡಿಸುತ್ತಿರುವವರ ಜತೆಗೆ ಅವರು ಸಂವಾದ ನಡೆಸಿದರು.

‘2021ರ ಮಾರ್ಚ್‌ ವೇಳೆಗೆ ಲಸಿಕೆಯ ಪ್ರಯೋಗಗಳನ್ನು ಪೂರ್ಣಗೊಳಿಸಲಾಗುವುದು, ವರ್ಷಕ್ಕೆ ಹತ್ತು ಕೋಟಿ ಡೋಸ್‌ನಷ್ಟು ಲಸಿಕೆಯನ್ನು ತಯಾರಿಸುವ ಗುರಿ ಹೊಂದಲಾಗಿದೆ’ ಎಂದು ಜೈಡಸ್‌ ಕೆಡಿಲಾ ಸಂಸ್ಥೆಯ ಅಧ್ಯಕ್ಷ ಪಂಕಜ್‌ ಪಟೇಲ್‌ ಇತ್ತೀಚೆಗೆ ಹೇಳಿದ್ದರು.

ಜೈಡಸ್‌ ಬಯೊಟೆಕ್‌ ಪಾರ್ಕ್‌ ಆವರಣದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಪರಿಶೀಲನೆ ನಡೆಸಿದ ಮೋದಿ ಅವರು, ಅಲ್ಲಿಂದ ಹೈದರಾಬಾದ್‌ನತ್ತ ಪ್ರಯಾಣಿಸಿದರು. ಅಲ್ಲಿ ‘ಕೊವ್ಯಾಕ್ಸಿನ್‌’ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಭಾರತ್‌ ಬಯೊಟೆಕ್‌ ಸಂಸ್ಥೆಗೆ ಭೇಟಿನೀಡಿ ಪರಿಶೀಲಿಸಿದರು. ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶ ಕೃಷ್ಣ ಎಲ್ಲ ಹಾಗೂ ವಿಜ್ಞಾನಿಗಳ ಜತೆ ಸಂವಾದ ನಡೆಸಿದರು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹಾಗೂ ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿಯ ಸಹಯೋಗದಲ್ಲಿ, ಭಾರತ್‌ ಬಯೊಟೆಕ್‌ ಸಂಸ್ಥೆಯು ಕೊವ್ಯಾಕ್ಸಿನ್‌ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ಲಸಿಕೆಯ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ.

ಮಧ್ಯಾಹ್ನ 2.30ಕ್ಕೆ ಹೈದರಾಬಾದ್‌ನಿಂದ ಹೊರಟ ಮೋದಿ, ನೇರವಾಗಿ ಪುಣೆಗೆ ಬಂದು ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾಗೆ ಭೇಟಿನೀಡಿದರು. ಈ ಸಂಸ್ಥೆಯು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ‘ಅಸ್ಟ್ರಾಜೆನೆಕಾ’ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದೆ.

ಇಲ್ಲಿಯೂ ಹಿರಿಯ ವಿಜ್ಞಾನಿಗಳ ಜತೆಗೆ ಸಂವಾದ ನಡೆಸಿದ ಬಳಿಕ, ಸಂಜೆ 6 ಗಂಟೆಗೆ ದೆಹಲಿಗೆ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT