ಮಂಗಳವಾರ, ಆಗಸ್ಟ್ 16, 2022
21 °C

‘ಎಂಡಿಎಚ್‌ ಮಸಾಲಾ‘ ಸಂಸ್ಥಾಪಕ ಧರ್ಮಪಾಲ್‌ ಗುಲಾಟಿ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಸಿದ್ಧ ಮಸಾಲಾ ಬ್ರಾಂಡ್‌ ಎಂಡಿಚ್‌ ಮಸಾಲಾ ಕಂಪನಿಯ ಮಾಲೀಕ ಮಹಾಶಯ್‌ ಧರ್ಮಪಲ್ ಗುಲಾಟಿ (97) ಅವರು ಇಲ್ಲಿನ ಮಾತಾ ಚನ್ನಾನ್‌ ದೇವಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

‘ಕಳೆದ ಕೆಲವು ವಾರಗಳಿಂದ ‘ಕೋವಿಡ್‌ 19 ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಮಹಾಶಯ್ ಅವರು, ಗುರುವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ‘ ಎಂದು ವೈದ್ಯಕೀಯ ವರದಿಗಳು ತಿಳಿಸಿವೆ.

‘ಸ್ಪೈಸ್ ಕಿಂಗ್‘ ಎಂದೇ ಖ್ಯಾತಿ ಪಡೆದಿದ್ದ ಗುಲಾಟಿ ಅವರು ಮಾರ್ಚ್‌ 27, 1923ರಂದು ಈಗಿನ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿ ಜನಿಸಿದ್ದರು. ತಂದೆ ಮಹಾಶಯ್ ಚುನ್ನಿ ಗುಲಾಟಿ ಅವರು ಸಿಯಾಲ್ ಕೋಟ್‌ನಲ್ಲಿ ಮಸಾಲಾ ವ್ಯಾಪಾರ ಮಾಡುತ್ತಿದ್ದರು. ಸ್ವಾತಂತ್ರ್ಯಾ ನಂತರ ದೇಶ ವಿಭಜನೆಯಾದಾಗ ಅವರ ಕುಟುಂಬ ಭಾರತಕ್ಕೆ ವಲಸೆ ಬಂದಿತು.

‘ಎಂಡಿಎಚ್‌‘ನ ವಿಸ್ತೃತ ರೂಪ ‘ಮಹಾಶಯನ್ ಡಿ ಹಟ್ಟಿ‘. ಇದು ಮಹಾಶಯ್‌ ಚುನ್ನಿ ಲಾಲ್‌ ಗುಲಾಟಿ ಅವರು ಸ್ಥಾಪಿಸಿದ ಮಸಾಲಾ ತಯಾರಕ ಕಂಪನಿ.  ತನ್ನ ತಂದೆಯ ನಿಧನದ ನಂತರ ಮಹಾಶಯ್ ಧರ್ಮಪಾಲ್ ಅವರು ಈ ಮಸಾಲಾ ವ್ಯಾಪಾರ ಕೈಗೆತ್ತಿಕೊಂಡರು. ನವದೆಹಲಿಯ ಕರೋಲಾ ಭಾಗ್‌ನಿಂದ ಆರಂಭಿಸಿದ ಮಸಾಲಾ ವ್ಯಾಪಾರದ ಘಮಲು ದೇಶದ ಮೂಲೆ ಮೂಲೆಗೆ ಪಸರಿಸುವ ಮೂಲಕ ‘ಎಂಡಿಚ್‌‘ ಎಂಬ ಬ್ರ್ಯಾಂಡ್ ಆಗಿ ಖ್ಯಾತಿ ಪಡೆಯಿತು.

ಧರ್ಮಪಾಲ್ ಅವರ ಉದ್ಯಮಕ್ಷೇತ್ರ ಮತ್ತು ಸಮಾಜ ಕ್ಷೇತ್ರದಲ್ಲಿನ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ 2019ರಲ್ಲಿ ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿ ‘ಪದ್ಮಭೂಷಣ‘ ನೀಡಿ ಗೌರವಿಸಿದೆ.

ಮಹಾಶಯ್ ಧರ್ಮಪಾಲ್ ನಿಧನಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಂತಾಪ ಸೂಚಿಸಿದ್ದಾರೆ. ‘ಧರ್ಮಪಾಲ್ ಅವರು  ಸ್ಪೂರ್ತಿದಾಯಕ ವ್ಯಕ್ತಿತ್ವ ಉಳ್ಳವರಾಗಿದ್ದರು. ತಮ್ಮ ಬದುಕನ್ನು ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದರು‘ ಎಂದು ಸಂತಾಪ ಸೂಚಿಸಿದ್ದಾರೆ.

ಉಪ ಮುಖ್ಯಮಂತ್ರಿ ಮನೀಷ್ ಸಿಸೊಡಿಯಾ ‘ಧರ್ಮಪಾಲ್ ಅವರ ನಿಧನದಿಂದಾಗಿ ಭಾರತ ಸ್ಪೂರ್ತಿದಾಯಕ ಉದ್ಯಮಿಯೊಬ್ಬರನ್ನು ಕಳೆದುಕೊಂಡಿದೆ. ನನ್ನ ಜೀವನದಲ್ಲಿ ಎಲ್ಲೂ ಇಂಥ ಸ್ಪೂರ್ತಿದಾಯಕ ವ್ಯಕ್ತಿಯನ್ನು ಕಂಡಿಲ್ಲ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ‘ ಎಂದು ಟ್ವಿಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು