ಸ್ನೇಹಿತೆಯ ಕೊಲೆ ಆರೋಪ: ಎಂಬಿಬಿಎಸ್ ವಿದ್ಯಾರ್ಥಿ ದೋಷಮುಕ್ತ
ಜಬಲ್‌ಪುರ, ಮಧ್ಯಪ್ರದೇಶ: ಸ್ನೇಹಿತೆಯ ಕೊಲೆ ಆಪಾದನೆಯ ಪ್ರಕರಣದಲ್ಲಿ 13 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ಬುಡಕಟ್ಟು ಸಮುದಾಯಕ್ಕೆ ಸೇರಿದ ಎಂಬಿಬಿಎಸ್ ವಿದ್ಯಾರ್ಥಿಯನ್ನು ದೋಷಮುಕ್ತಗೊಳಿಸಿ ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿ ಅತುಲ್ ಶ್ರೀಧರನ್ ಮತ್ತು ಸುನೀತಾ ಯಾದವ್ ಅವರಿದ್ದ ವಿಭಾಗೀಯ ಪೀಠವು, 13 ವರ್ಷ ನ್ಯಾಯಕ್ಕಾಗಿ ಕಾದು ಕಂಬಿಗಳ ಹಿಂದೆ ದಿನ ಕಳೆದ ನತದೃಷ್ಟ ವಿದ್ಯಾರ್ಥಿಗೆ ಮೂರು ತಿಂಗಳೊಳಗೆ ₹42 ಲಕ್ಷ ಪರಿಹಾರ ನೀಡುವಂತೆಯೂ ಸರ್ಕಾರಕ್ಕೆ ಆದೇಶ ನೀಡಿದೆ.
ಭೋಪಾಲ್‌ನ ಗಾಂಧಿ ವೈದ್ಯಕೀಯ ಸರ್ಕಾರಿ ಕಾಲೇಜಿನಲ್ಲಿ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ, ಗೊಂಡ ಬುಡಕಟ್ಟು ಸಮುದಾಯದ ಚಂದ್ರೇಶ್ ಮಾರ್ಸ್ಕೋಲ್ (ಈಗ ಅವರಿಗೆ 34 ವರ್ಷ) 2008ರಲ್ಲಿ ತನ್ನ ಸ್ನೇಹಿತೆಯನ್ನು ಕೊಲೆ ಮಾಡಿ, ಪಚ್ಮರ್ಹಿಯಲ್ಲಿ ಶವ ಸುಟ್ಟುಹಾಕಿದ ಆರೋಪದಲ್ಲಿ ಬಂಧಿಸಲ್ಪಟ್ಟಿದ್ದರು. 2009ರ ಜುಲೈ 31ರಂದು ವಿಚಾರಣಾ ನ್ಯಾಯಾಲಯ ಚಂದ್ರೇಶ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ವಿಚಾರಣಾ ನ್ಯಾಯಾಲಯದ ತೀರ್ಪಿನ ವಿರುದ್ಧ ಚಂದ್ರೇಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ಮಂಗಳವಾರ ವಿಲೇವಾರಿ ಮಾಡಿದ ಪೀಠವು, ಪ್ರಕರಣವು ಸಂಪೂರ್ಣ ಸಾಂದರ್ಭಿಕ ಸಾಕ್ಷ್ಯದ ಮೇಲೆ ಕೇಂದ್ರೀತವಾಗಿದೆ. ಮಹಿಳೆಯ ಹತ್ಯೆಗೆ ಸಾಕ್ಷಿಯಾಗಿ ಪ್ರತ್ಯಕ್ಷದರ್ಶಿಗಳಿಲ್ಲ. ಚಂದ್ರೇಶ್‌ನನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ:
‘ಇದು ಕ್ಯಾಂಪಸ್ ರಾಜಕೀಯದಿಂದ ಉದ್ಭವಿಸಿದ ಪ್ರಕರಣ. ಪ್ರಾಸಿಕ್ಯೂಷನ್ ಸಾಕ್ಷಿ ಡಾ. ಹೇಮಂತ್ ವರ್ಮಾ, ಚಂದ್ರೇಶ್ ಮೇಲಿನ ಹಳೆ ದ್ವೇಷದಿಂದ, ಭೋಪಾಲ್‌ನ ಆಗಿನ ಐಜಿಪಿ ಶೈಲೇಂದ್ರ ಶ್ರೀವಾಸ್ತವ ಅವರ ಮೇಲೆ ಪ್ರಭಾವ ಬೀರಿ, ಸುಳ್ಳು ಪ್ರಕರಣ ದಾಖಲಿಸಿದ್ದರು’ ಎಂದು ಮೇಲ್ಮನವಿದಾರರ ಪರ ವಕೀಲರು ವಾದಿಸಿದ್ದರು.
‘2008ರ ಆಗಸ್ಟ್ 20ರಂದು ಚಂದ್ರೇಶ್ ತನ್ನ ಕಾರು ತೆಗೆದುಗೊಂಡು ಹೋಗಿದ್ದರು. ಮೂರು ದಿನಗಳ ನಂತರ ಚಂದ್ರೇಶ್ ಅವರ ಗೆಳತಿಯ ಶವ ಪಚ್ಮರ್ಹಿಯಲ್ಲಿ ಪತ್ತೆಯಾಗಿತ್ತು. ಅವರೇ ಏನೋ ಮಾಡಿರುವ ಅನುಮಾನವಿದೆ’ ಎಂದು ಡಾ. ಹೇಮಂತ್ ವರ್ಮಾ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರಿಗೆ ಛೀಮಾರಿ:
‘ಈ ಪ್ರಕರಣವು ದುರುದ್ದೇಶಪೂರಿತ ಕಾನೂನು ಕ್ರಮ, ಪೊಲೀಸರ ಚಾಣಾಕ್ಷತನದ ಮತ್ತು ಪೂರ್ವಗ್ರಹಪೀಡಿತ ತನಿಖೆಯ ಕ್ರೌರ್ಯವನ್ನು ಅನಾವರಣಗೊಳಿಸಿದೆ. ವಿದ್ಯಾರ್ಥಿಯ ಇಡೀ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ’ ಎಂದು ಅಭಿಪ್ರಾಯಪಟ್ಟಿರುವ ಪೀಠವು ಪೊಲೀಸರಿಗೆ ಛೀಮಾರಿ ಹಾಕಿದೆ.
‘ಪ್ರಾಯಶಃ ಪ್ರಾಸಿಕ್ಯೂಷನ್ ಸಾಕ್ಷಿ (ಡಾ.ಹೇಮಂತ್ ವರ್ಮಾ)ಯನ್ನು ರಕ್ಷಿಸುವ ಮತ್ತು ಚಂದ್ರೇಶ್‌ನನ್ನು ಅಪರಾಧಿ ಮಾಡುವ ನಿಟ್ಟಿನಲ್ಲಿ ಪೊಲೀಸ್ ತನಿಖೆ ನಡೆದಿದೆ. ಇದರಲ್ಲಿ ನಿಜವಾದ ಅಪರಾಧಿಗಳು ಪ್ರಾಸಿಕ್ಯೂಷನ್ ಸಾಕ್ಷಿ ಮತ್ತು ಪೊಲೀಸರು’ ಎಂದು ಪೀಠ ತೀರ್ಪಿನಲ್ಲಿ ಹೇಳಿದೆ.
‘ಮೇಲ್ಮನವಿ ಅರ್ಜಿದಾರರು ಸರ್ಕಾರಿ ಉದ್ಯೋಗ ಅಥವಾ ಖಾಸಗಿ ವೃತ್ತಿಯಲ್ಲಿದ್ದರೂ ವರ್ಷಕ್ಕೆ ಕನಿಷ್ಠ ₹3 ಲಕ್ಷ ಗಳಿಸುತ್ತಿದ್ದರು. ಚಂದ್ರೇಶ್‌ಗೆ ಪರಿಹಾರ ಪಾವತಿಸುವ ದಿನಾಂಕದವರೆಗೆ ಪರಿಹಾರ ಮೊತ್ತಕ್ಕೆ ವಾರ್ಷಿಕ ಶೇ 9 ಬಡ್ಡಿ ನೀಡಬೇಕು’ ಎಂದು ಪೀಠ ಹೇಳಿದೆ.
ರಹಸ್ಯ ಮಾಹಿತಿ ಸೋರಿಕೆ ಸುಳ್ಳು ಆರೋಪದಲ್ಲಿ ಇಸ್ರೊ ವಿಜ್ಞಾನಿ ನಂಬಿನಾರಾಯಣನ್ ಸಿಬಿಐ ತನಿಖೆಗೆ ಒಳಗಾಗಿ 50 ದಿನ ವಿಚಾರಣಾಧೀನ ಕೈದಿಯಾಗಿದ್ದರು. ಅವರಿಗೆ ₹50 ಲಕ್ಷ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ನಂಬಿನಾರಾಯಣನ್ ಪ್ರಕರಣಕ್ಕೆ ಹೋಲಿಸಿದರೆ ಚಂದ್ರೇಶ್ ಅವರದು ಇನ್ನೂ ‘ನರಕ ಯಾತನೆ’ ಎಂದು ಪೀಠ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.