ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಕೊರತೆಯಿಂದ ದೇಶದ ಎರಡು ಆಸ್ಪತ್ರೆಗಳಲ್ಲಿ 30 ಸಾವು

ದೆಹಲಿಯ ಗಂಗಾರಾಮ್‌ ಆಸ್ಪತ್ರೆಯ 60 ರೋಗಿಗಳ ಸ್ಥಿತಿ ಚಿಂತಾಜನಕ
Last Updated 23 ಏಪ್ರಿಲ್ 2021, 20:07 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯಕೀಯ ಆಮ್ಲಜನಕ ಕೊರತೆಯು ಭಾರಿ ದುರಂತಗಳಿಗೆ ಕಾರಣವಾಗಿದೆ. ಆಮ್ಲಜನಕ ಕೊರತೆಯಿಂದಾಗಿ ದೇಶದ ಎರಡು ಆಸ್ಪತ್ರೆಗಳಲ್ಲಿ 30 ಮಂದಿ ಶುಕ್ರವಾರ ಮೃತಪಟ್ಟಿದ್ದಾರೆ.

ದೆಹಲಿಯ ಶ್ರೀ ಗಂಗಾರಾಮ್‌ ಆಸ್ಪತ್ರೆಯಲ್ಲಿ (ಎಸ್‌ಜಿಆರ್‌ಎಚ್‌) ಕೋವಿಡ್‌ಗೆ‌ ಚಿಕಿತ್ಸೆ ಪಡೆಯುತ್ತಿದ್ದ 25 ಮಂದಿ ಆಮ್ಲಜನಕದ ಕೊರತೆಯ ಕಾರಣದಿಂದ ಸತ್ತಿದ್ದಾರೆ. ಇನ್ನೂ 60 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಬಲ್ಪುರದ ಆಸ್ಪತ್ರೆಯೊಂದರಲ್ಲಿ ಐವರು ಮರಣ ಹೊಂದಿದ್ದಾರೆ.

ಶುಕ್ರವಾರ ಬೆಳಿಗ್ಗೆ ಆಸ್ಪತ್ರೆಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬೇಕಾದಷ್ಟು ಒತ್ತಡದಲ್ಲಿ ಆಮ್ಲಜನಕ ಸರಬರಾಜು ಆಗದಿರುವುದು ಹಲವು ರೋಗಿಗಳ ಸಾವಿಗೆ ಕಾರಣವಾಗಿರುವ ಸಾಧ್ಯತೆ ಇದೆ. ಬೆಳಿಗ್ಗೆ 9.20ಕ್ಕೆ ಆಸ್ಪತ್ರೆಗೆ ಆಮ್ಲಜನಕದ ಒಂದು ಟ್ಯಾಂಕರ್‌ ಬಂದಿದೆ. ಆದರೆ, ಅದು ಐದು ಗಂಟೆಗಳಷ್ಟು ಕಾಲ ರೋಗಿಗಳಿಗೆ ನೀಡಲು ಸಾಕಾಗಬಹುದು ಅಷ್ಟೇ ಎಂದು ಮೂಲಗಳು ಹೇಳಿವೆ.

ಈ ಆಸ್ಪತ್ರೆಯಲ್ಲಿ ಸುಮಾರು 500 ಕೋವಿಡ್‌ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ ಸುಮಾರು 150 ರೋಗಿಗಳಿಗೆ ಹೆಚ್ಚು ಒತ್ತಡದ ಆಮ್ಲಜನಕ ನೀಡುವ ಅಗತ್ಯವಿದೆ. ‘ನಮ್ಮಲ್ಲಿ ಐದು ಗಂಟೆಗಳಿಗೆ ಸಾಕಾಗುವಷ್ಟು ಆಮ್ಲಜನಕ ಮಾತ್ರ ಇದೆ. ತುರ್ತಾಗಿ ಆಮ್ಲಜನಕದ ಸರಬರಾಜು ವ್ಯವಸ್ಥೆ ಮಾಡಬೇಕು’ ಎಂದು ಆಸ್ಪತ್ರೆಯ ಅಧಿಕಾರಿಗಳು ಗುರುವಾರ ರಾತ್ರಿ 8 ಗಂಟೆಗೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದರು. ರಾತ್ರಿ 12.30ರ ಸುಮಾರಿಗೆ ಸ್ವಲ್ಪ ಆಮ್ಲಜನಕವನ್ನು ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ ಇನ್ನಷ್ಟು ಆಮ್ಲಜನಕದ ಅಗತ್ಯ ಇತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕೋವಿಡ್‌ ಪ್ರಕರಣಗಳ ಸಂಖ್ಯೆ ವಿಪರೀತವಾಗಿರುವುದರಿಂದ ದೆಹಲಿಯ ಎಲ್ಲಾ ಆಸ್ಪತ್ರೆಗಳು ಆಮ್ಲಜನಕದ ಸಂಗ್ರಹ ಪ್ರಮಾಣವನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿವೆ. ನಾವು ಬಯಸುವುದು ಆಮ್ಲಜನಕದ ತಡೆರಹಿತ ಮತ್ತು ಸಕಾಲಿಕ ಸರಬರಾಜು ಮಾತ್ರ’ ಎಂದು ಗಂಗಾರಾಮ್‌ ಆಸ್ಪತ್ರೆಯ ಅಧ್ಯಕ್ಷ ಡಾ. ಡಿ.ಎಸ್‌. ರಾಣಾ ಹೇಳಿದ್ದಾರೆ.

‘ವೆಂಟಿಲೇಟರ್‌ ಹಾಗೂ ಬಿಪ್ಯಾಪ್‌ (BiPAP) ಯಂತ್ರಗಳು ಪರಿಣಾಮಕಾರಿಯಾಗಿಕಾರ್ಯನಿರ್ವಹಿಸುತ್ತಿಲ್ಲ. 60 ಮಂದಿ ಗಂಭೀರ ರೋಗಿಗಳ ಸ್ಥಿತಿ ಅಪಾಯದಲ್ಲಿದೆ. ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇದೆ’ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದೆಹಲಿಯ ಎಲ್ಲಾ ಆಸ್ಪತ್ರೆಗಳ ಹೊರಗೆ ಕೋವಿಡ್‌ ರೋಗಿಗಳು ಮತ್ತು ಅವರ ಸಂಬಂಧಿಕರು ಬೆಡ್‌ಗಾಗಿ ಸಾಲುಗಟ್ಟಿ ನಿಂತಿದ್ದಾರೆ. ‘ಆಮ್ಲಜನಕದ ಸಮಸ್ಯೆ ನಿವಾರಣೆ ಯಾದರೆ ಹಾಸಿಗೆಗಳ ಸಂಖ್ಯೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗುವುದು’ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಹೇಳಿದ್ದಾರೆ.

ಜಬಲ್ಪುರ: ಐವರು ಬಲಿ

ಜಬಲ್ಪುರ (ಪಿಟಿಐ): ಮಧ್ಯಪ್ರದೇಶದ ಜಬಲ್ಪುರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಕೋವಿಡ್‌ ರೋಗಿಗಳು ವೈದ್ಯಕೀಯ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಮಧ್ಯರಾತ್ರಿಯ ಬಳಿಕ ಈ
ಸಾವು ಸಂಭವಿಸಿದೆ. ಗಸ್ತು ತಿರುಗುತ್ತಿದ್ದ ಪೊಲೀಸರು ಮೃತರ ಸಂಬಂಧಿಕರು ಸೃಷ್ಟಿಸಿದ ಗದ್ದಲದಿಂದಾಗಿ ಆಸ್ಪತ್ರೆಯತ್ತ ಬಂದಿದ್ದಾರೆ. ‘ಆಮ್ಲಜನಕ ಖಾಲಿಯಾದುದೇ ಸಾವಿಗೆ ಕಾರಣ’ ಎಂದು ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಗುರುವಾರ ರಾತ್ರಿ ಆಸ್ಪತ್ರೆಗೆ ಆಮ್ಲಜನಕದ ಹತ್ತು ಸಿಲಿಂಡರ್‌ ಪೂರೈಕೆ ಆಗಬೇಕಿತ್ತು. ಆದರೆ ಅದನ್ನು ಸಾಗಿಸುತ್ತಿದ್ದ ವಾಹನದಲ್ಲಿ ಸಮಸ್ಯೆ ಉಂಟಾಗಿತ್ತು. ಬಳಿಕ ಪೊಲೀಸರೇ ಆ ವಾಹನ ಇದ್ದಲ್ಲಿಗೆ ಧಾವಿಸಿ, ಸಿಲಿಂಡರ್‌ಗಳನ್ನು ತಂದರು.

ಐಸಿಯುನಲ್ಲಿ ಬೆಂಕಿ: 15 ರೋಗಿಗಳ ಸಾವು

ವಿರಾರ್‌ (ಪಿಟಿಐ): ಮಹಾರಾಷ್ಟ್ರದ ಇನ್ನೊಂದು ಆಸ್ಪತ್ರೆಯಲ್ಲಿ ಶುಕ್ರವಾರ ಅಗ್ನಿ ಅನಾಹುತ ಸಂಭವಿಸಿದೆ. ಪಾಲ್ಘರ್‌ ಜಿಲ್ಲೆಯ ವಿರಾರ್‌ನ ಕೋವಿಡ್‌ ಆಸ್ಪತ್ರೆಯಲ್ಲಿ ಅವಘಡ ಸಂಭವಿಸಿದ್ದು, ಕೋವಿಡ್‌ಗೆ‌ ಚಿಕಿತ್ಸೆ ಪಡೆಯುತ್ತಿದ್ದ 15 ರೋಗಿಗಳು ಮೃತಪಟ್ಟಿದ್ದಾರೆ.

ವಿರಾರ್‌ನ ತಿರುಪತಿನಗರದಲ್ಲಿರುವ ‘ವಿಜಯವಲ್ಲಭ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ’ದ ತೀವ್ರನಿಗಾ ಘಟಕದಲ್ಲಿ ನಸುಕಿನ 3.15ರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು 5.30ರ ಸುಮಾರಿಗೆ ಬೆಂಕಿಯನ್ನು ನಂದಿಸಿದ್ದಾರೆ. ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಸಮಸ್ಯೆಯುಂಟಾಗಿ ಬೆಂಕಿ ಹತ್ತಿಕೊಂಡಿರಬಹುದು ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಶಂಕಿಸಿದ್ದಾರೆ. ಘಟನೆ ಸಂಭವಿಸಿದಾಗ ಆಸ್ಪತ್ರೆಯಲ್ಲಿ 90 ಮಂದಿ ರೋಗಿಗಳಿದ್ದರು. ಅವರಲ್ಲಿ 18 ಮಂದಿ ತೀವ್ರ ನಿಗಾ ಘಟಕದಲ್ಲಿದ್ದರು. ಸತ್ತವರಲ್ಲಿ ಐವರು ಮಹಿಳೆಯರು ಮತ್ತು ಹತ್ತು ಮಂದಿ ಪುರುಷರಿದ್ದಾರೆ. ತೀವ್ರನಿಗಾ ಘಟಕಕ್ಕೆ ಮಾತ್ರ ಹಾನಿಯಾಗಿದೆ. ಆಸ್ಪತ್ರೆಯ ಬೇರೆ ವಿಭಾಗಗಳಿಗೆ ಯಾವುದೇ ಹಾನಿ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT