ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋರಾಟ ಶಾಂತಿಯುತವಾಗಿ ಸಾಗದಿದ್ದರೆ ಪ್ರಧಾನಿ ಮೋದಿ ಗೆಲ್ಲುತ್ತಾರೆ: ಬಲ್ಬೀರ್ ಸಿಂಗ್

Last Updated 30 ಜನವರಿ 2021, 14:45 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ರೈತರ ಹೆಸರು ಕೆಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿರುವ ಭಾರತೀಯ ಕಿಸಾನ್ ಯೂನಿಯನ್‌ (ಬಿಕೆಯು) ಅಧ್ಯಕ್ಷ ಬಲ್ಬೀರ್ ಸಿಂಗ್ ರಾಜೇವಾಲ್ ಅವರು, ರೈತರು ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು. ಇಲ್ಲವಾದರೆ, ‘ಪ್ರಧಾನಿ ನರೇಂದ್ರ ಮೋದಿ ಅವರು ಗೆಲುವು ಸಾಧಿಸುತ್ತಾರೆ’ ಎಂದು ಎಚ್ಚರಿಸಿದ್ದಾರೆ.

ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಸ್ಥಿತಿಗತಿಯ ಬಗ್ಗೆ ತಿಳಿಸಲು ಪತ್ರಿಕಾಗೋಷ್ಠಿ ಕರೆದಿದ್ದ ಅವರು, ‘ನಮ್ಮ ಹೋರಾಟದ ವೇಳೆ ಸರ್ಕಾರವು ಇಂಟರ್ನೆಟ್‌ ಸ್ಥಗಿತಗೊಳಿಸಿತು. ಸರ್ಕಾರ ನಮ್ಮ ಹೆಸರು ಕೆಡಿಸುವ ಪ್ರಯತ್ನವನ್ನೂ ಮಾಡಿತು. ಶಾಂತಿಯುತ ಪ್ರತಿಭಟನೆ ನಡೆಸುವಂತೆ ನಾನು ರೈತರಲ್ಲಿ ಮನವಿ ಮಾಡುತ್ತೇನೆ. ಹೋರಾಟವು ಶಾಂತಿಯುತವಾಗಿ ಸಾಗದಿದ್ದರೆ, ಪ್ರಧಾನಿ ಮೋದಿ ಗೆಲುವು ಸಾಧಿಸಲಿದ್ದಾರೆ’ ಎಂದು ಶನಿವಾರ ಹೇಳಿದ್ದಾರೆ.

ಶಾಂತಿಯುತ ಪ್ರತಿಭಟನೆಗೆ ಒತ್ತು ನೀಡಿರುವ ರಾಜೇವಾಲ್, ‘ನಾನು ಜನರಿಗೆ (ದೆಹಲಿಯಲ್ಲಿ) ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡುತ್ತೇನೆ. ಯಾರಾದರೂ ನಿಮ್ಮನ್ನು ಕೆರಳಿಸಲು ಪ್ರಯತ್ನಿಸಿದರೂ ಏನೂ ಮಾಡಬೇಡಿ. ನಾವು ಯುದ್ಧಕ್ಕೆ ಹೋಗುತ್ತಿಲ್ಲ ಎಂಬುದನ್ನು ಗಮನದಲ್ಲಿರಿಸಬೇಕು. ಇದು ನಮ್ಮ ದೇಶ ಮತ್ತು ನಮ್ಮದೇ ಸರ್ಕಾರ’ ಎಂದು ತಿಳಿಸಿದ್ದಾರೆ.

ಇದು ಅತಿದೊಡ್ಡ ರೈತ ಆಂದೋಲನ ಎಂದೂ ಹೇಳಿರುವ ಅವರು, ಸರ್ಕಾರವು ರೈತರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದ್ದಾರೆ.

ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್‌ ರ್ಯಾಲಿ ನಡೆಸಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ರೈತರು ಹಾಗೂ ಪೊಲೀಸರು ಗಾಯಗೊಂಡಿದ್ದರು. ಕೆಲವರು ಕೆಂಪುಕೋಟೆಯ ಮೇಲೆ ಅನ್ಯಧ್ವಜ ಹಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT