ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವದೇಶಿ ಉತ್ಪನ್ನ ಬೆಂಬಲಿಸೋಣ; ಮನದ ಮಾತು ಕಾರ್ಯಕ್ರಮದಲ್ಲಿ ಮೋದಿ ಕರೆ

Last Updated 27 ಡಿಸೆಂಬರ್ 2020, 19:40 IST
ಅಕ್ಷರ ಗಾತ್ರ
ADVERTISEMENT
""
""

ನವದೆಹಲಿ: ‘ವಿದೇಶಿ ಉತ್ಪನ್ನಗಳ ಬಳಕೆ ತಗ್ಗಿಸಿ, ಭಾರತದಲ್ಲೇ ತಯಾರಾದ ವಸ್ತುಗಳನ್ನು ಉಪಯೋಗಿಸುವ ಮೂಲಕ ‘ಆತ್ಮನಿರ್ಭರ ಭಾರತ’ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಮನವಿ ಮಾಡಿದರು.

ಆಕಾಶವಾಣಿಯ ಮೂಲಕ, 2020ನೇ ಸಾಲಿನ ಕೊನೆಯ ‘ಮನದ ಮಾತು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸರ್ಕಾರ ಆರಂಭಿಸಿದ್ದ ಸ್ವದೇಶಿ (ವೋಕಲ್‌ ಫಾರ್‌ ಲೋಕಲ್‌) ಆಂದೋಲನಕ್ಕೆ ದೇಶದ ಜನರು ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಈ ಘೋಷಣೆ ಈಗ ಮನೆಮನೆಯಲ್ಲಿ ಪ್ರತಿಧ್ವನಿಸುತ್ತಿದೆ. ಜಾಗತಿಕ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ ಹೊಣೆ ನಮ್ಮ ದೇಶದ ತಯಾರಕರ ಮೇಲೆ ಇದೆ ಎಂದರು. ವೋಕಲ್‌ ಫಾರ್‌ ಲೋಕಲ್‌ ಅಭಿಯಾನಕ್ಕೆ ಜನರಿಂದ ಬಂದ ಪ್ರತಿಕ್ರಿಯೆಗಳನ್ನೂ ಅವರು ಹಂಚಿಕೊಂಡರು.

‘ಪ್ರತಿಯೊಬ್ಬರೂ ತಾವು ನಿತ್ಯ ಬಳಸುವ ವಸ್ತುಗಳ ಒಂದು ಪಟ್ಟಿಯನ್ನು ಮಾಡಬೇಕು, ಅದರಲ್ಲಿ ವಿದೇಶಿ ಸಂಸ್ಥೆಗಳು ತಯಾರಿಸಿದ ಎಷ್ಟು ವಸ್ತುಗಳಿವೆ ಎಂಬುದನ್ನು ಗುರುತಿಸಿ, ಅವುಗಳ ಬದಲಿಗೆ ಸ್ವದೇಶಿ ಉತ್ಪನ್ನಗಳ ಬಳಕೆಯನ್ನು ಆರಂಭಿಸಬೇಕು’ ಎಂದು ಅವರು ಮನವಿ ಮಾಡಿದರು.

ಮೋದಿ ಹೇಳಿದ್ದು...

* ಹೊಸವರ್ಷದ ದಿನದಂದು ಎಲ್ಲರೂ ಕನಿಷ್ಠ ಒಂದು ಹೊಸ ನಿರ್ಣಯ ಕೈಗೊಳ್ಳುವುದಿಲ್ಲವೇ? ಈ ಬಾರಿ ದೇಶದ ಪರವಾಗಿ ಒಂದು ನಿರ್ಣಯ ಕೈಗೊಳ್ಳೋಣ

* ವ್ಯಾಪಾರಿಗಳು ‘ಭಾರತದಲ್ಲಿ ತಯಾರಾದದ್ದು’ ಎಂದು ಪ್ರಚಾರ ಮಾಡಿ, ಕೆಲವು ಉತ್ಪನ್ನಗಳನ್ನು ಮಾರುತ್ತಿದ್ದಾರೆ. ಜನರಿಂದ ಒಳ್ಳೆಯ ಪ್ರತಿಕ್ರಿಯೆಯೂ ಬರುತ್ತಿದೆ. ಒಂದು ವರ್ಷದ ಅವಧಿಯಲ್ಲಿ ನಮ್ಮ ಮನಸ್ಥಿತಿಯಲ್ಲಿ ದೊಡ್ಡ ಬದಲಾವಣೆ ಆಗಿದೆ

* ಒಂದೇಬಾರಿ ಬಳಸುವ ಪ್ಲಾಸ್ಟಿಕ್‌ನಿಂದ ದೇಶವನ್ನು ಹೊಸ ವರ್ಷದಲ್ಲಿ ಸಂಪೂರ್ಣವಾಗಿ ಮುಕ್ತಗೊಳಿಸಬೇಕು

* 2014–16ರ ಅವಧಿಯಲ್ಲಿ ದೇಶದಲ್ಲಿ ಚಿರತೆಗಳ ಸಂಖ್ಯೆ ಶೇ 60ರಷ್ಟು ಹೆಚ್ಚಾಗಿದೆ. ಹುಲಿ ಮತ್ತು ಸಿಂಹಗಳ ಸಂಖ್ಯೆಯೂ ಕಳೆದ ಕೆಲವು ವರ್ಷಗಳಿಂದ ಏರಿಕೆಯಾಗುತ್ತಿದೆ. ಇದು ಗಮನಾರ್ಹ ಸಾಧನೆ

ಬೈಂದೂರು: ನವ ದಂಪತಿಗೆ ಶ್ಲಾಘನೆ
ಕಡಲತೀರ ಸ್ವಚ್ಛಗೊಳಿಸಿದ ನಂತರ ಮಧುಚಂದ್ರಕ್ಕೆ ಹೋಗುವ ಸಂಕಲ್ಪ ಮಾಡಿದ್ದ ಬೈಂದೂರಿನ ಅನುದೀಪ್ ಹೆಗಡೆ ಹಾಗೂ ಮಿನುಷಾ ಕಾಂಚನ್ ದಂಪತಿಯ ಪರಿಸರ ಪ್ರೇಮವನ್ನು ಮೋದಿ ಅವರು ಶ್ಲಾಘಿಸಿದ್ದಾರೆ.

‘ನವೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಅನುದೀಪ್ ಹಾಗೂ ಮಿನುಷಾ ದಂಪತಿ, ಸೋಮೇಶ್ವರ ಬೀಚ್‌ನಲ್ಲಿ ತ್ಯಾಜ್ಯ ಹೆಕ್ಕುವ ಸಂಕಲ್ಪ ಮಾಡಿದ್ದರು. ಕಡಲತೀರ ಶುಚಿಗೊಳಿಸುವ ತಮ್ಮ ಕಾರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಸಾರ್ವಜನಿಕರೂ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದ್ದಾರೆ’ ಎಂದು ಮೋದಿ ಪ್ರಸ್ತಾಪಿಸಿದರು.

‘ಸಂಘಟಿತ ಶ್ರಮದ ಫಲವಾಗಿ ಸೋಮೇಶ್ವರ ಬೀಚ್‌ನಲ್ಲಿದ್ದ 800 ಕೆ.ಜಿ ತ್ಯಾಜ್ಯ ವಿಲೇವಾರಿಯಾಗಿದೆ. ಈ ದಂಪತಿಯಂತೆ ಎಲ್ಲರೂ ಪರಿಸರ ಸ್ವಚ್ಛತೆಯ ಸಂಕಲ್ಪ ಮಾಡೋಣ’ ಎಂದು ಅವರು ಕರೆ ನೀಡಿದರು.

ಅನುದೀಪ್ ಹೆಗಡೆ ಹಾಗೂ ಮಿನುಷಾ ದಂಪತಿಯ ಪರಿಸರ ಕಾಳಜಿಯ ಕುರಿತು ಡಿ.7ರಂದು ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು.

ಅನುದೀಪ್ ಹಾಗೂ ಮಿನುಷಾ ಕಾಂಚನ್‌ ದಂಪತಿ

ದೇಗುಲಕ್ಕೆ ಕಾಯಕಲ್ಪ: ಮೆಚ್ಚುಗೆ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂ ಗ್ರಾಮದ ಬಳಿ ಪಾಳುಬಿದ್ದಿದ್ದ ಐತಿಹಾಸಿಕ ವೀರಭದ್ರೇಶ್ವರಸ್ವಾಮಿ ದೇವಾಲಯಕ್ಕೆ ಕಾಯಕಲ್ಪ ನೀಡಿರುವ ಯುವ ಬ್ರಿಗೇಡ್‌ ಸದಸ್ಯರ ಕಾರ್ಯವನ್ನೂ ಮೋದಿ ಅವರು ಶ್ಲಾಘಿಸಿದ್ದಾರೆ.

‘ವಾರಾಂತ್ಯದ ಬಿಡುವಿನ ಸಮಯದಲ್ಲಿ ಯುವಕರು ದೇಗುಲ ದುರಸ್ತಿಗೊಳಿಸಿದ್ದಾರೆ. ಪಾಳು ಬಿದ್ದಿದ್ದಿ ಐತಿಹಾಸಿಕ ಕಟ್ಟಡಕ್ಕೆ ಹೊಸ ರೂಪ ನೀಡಿದ್ದಾರೆ. ಬಣ್ಣ ಬಳಿದು, ಬಾಗಿಲು ಜೋಡಿಸಿ, ವಿದ್ಯುತ್‌ ಸಂಪರ್ಕ ಕಲ್ಪಿಸಿ ಪೂಜೆ ಪುನರಾರಂಭವಾಗುವಂತೆ ಮಾಡಿರುವುದು ಮಾದರಿ ಕೆಲಸ’ ಎಂದು ಅವರು ಬಣ್ಣಿಸಿದ್ದಾರೆ.

ಪಟ್ಟಣದ ಯುವ ಬ್ರಿಗೇಡ್‌ನ ಸುಮಾರು 15 ಜನರ ತಂಡ 300 ವರ್ಷ ಹಿಂದಿನ ದೇವಾಲಯವನ್ನು ಜೀರ್ಣೋದ್ಧಾರ ಮಾಡಿದೆ. ಕಳೆದ ಕಾರ್ತೀಕ ಮಾಸದ 2ನೇ ಸೋಮವಾರದಂದು ದೇಗುಲದಲ್ಲಿ ದೀಪೋತ್ಸವ ಆಚರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT