ಬುಧವಾರ, ಅಕ್ಟೋಬರ್ 28, 2020
21 °C
’ಗಾಳಿ ಯಂತ್ರ’ದಿಂದ ವಿದ್ಯುತ್‌, ನೀರು, ಆಮ್ಲಜನಕ ಉತ್ಪಾದಿಸಬಹುದೆಂಬ ಪ್ರಧಾನಿ ಹೇಳಿಕೆಗೆ ರಾಹುಲ್ ಟೀಕೆ

ರಾಹುಲ್‌ ಗಾಂಧಿ ವಿರುದ್ಧ ಮುಗಿಬಿದ್ದ ಬಿಜೆಪಿ ನಾಯಕರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಪವನ ಯಂತ್ರಗಳಿಂದ ವಿದ್ಯುತ್‌ ಜತೆಗೆ ಶುದ್ಧ ಕುಡಿಯುವ ನೀರು ಹಾಗೂ ಆಮ್ಲಜನಕವನ್ನೂ ತಯಾರಿಸುವಂತಹ ವಿಧಾನಗಳ ಬಗ್ಗೆ ಗಮನಹರಿಸಬಹುದು’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಇದು ಬಿಜೆಪಿ ನಾಯಕರನ್ನು ಕೆರಳಿಸಿದೆ.

ರಾಹುಲ್‌ ಗಾಂಧಿ ಅವರ ಹೇಳಿಕೆ ವಿರುದ್ಧ ಹರಿಹಾಯ್ದಿರುವ ಬಿಜೆಪಿ ನಾಯಕರು, ‘ಇಂಥ ಹೇಳಿಕೆಗಳಿಗೆ ಪ್ರತಿಕ್ರಿಯಿಸುವ ಮುನ್ನ ರಾಹುಲ್‌ಗಾಂಧಿ ಅವರು ಒಂದಷ್ಟು ವೈಜ್ಞಾನಿಕ ಪತ್ರಿಕೆಗಳನ್ನು ಓದುವ ಅವಶ್ಯಕತೆ ಇದೆ’ ಎಂದು ತಿರುಗೇಟು ನೀಡಿದ್ದಾರೆ.

ಪವನ ವಿದ್ಯುತ್ ಉತ್ಪಾದನಾ ಕಂಪನಿಯ ಸಿಇಒ ಅವರೊಂದಿಗೆ ನಡೆದ ಸಂವಾದದಲ್ಲಿ ಪ್ರಧಾನಿಯವರು, ’ಪವನ ಯಂತ್ರಗಳಿಂದ ವಿದ್ಯುತ್ ತಯಾರಿಸುವ ಜತೆಗೆ, ಶುದ್ಧ ಕುಡಿಯುವ ನೀರು ಮತ್ತು ಆಮ್ಲಜನಕವನ್ನು ತಯಾರಿಸುವಂತಹ ವಿಧಾನದ ಬಗ್ಗೆ ಗಮನಹರಿಸಬಹುದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಈ ಹೇಳಿಕೆಗೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದ ರಾಹುಲ್‌ ಗಾಂಧಿ, ‘ನಮ್ಮ ಪ್ರಧಾನಿಯವರಿಗೆ ಏನೂ ಅರ್ಥವಾಗುತ್ತಿಲ್ಲ ಎಂಬುದೇ ಭಾರತಕ್ಕಿರುವ ನಿಜವಾದ ಅಪಾಯ. ವಿಷಯ ಏನೆಂದರೆ, ಅವರಿಗೆ ಸಲಹೆ ನೀಡುವ ಧೈರ್ಯವಿರುವಂಥವರು ಅವರ ಸುತ್ತ ಯಾರೂ ಇಲ್ಲ’ ಎಂದು ಉಲ್ಲೇಖಿಸಿದ್ದರು. ಈ ಟ್ವೀಟ್‌ ಜತೆಗೆ ಪ್ರಧಾನಿ ಮೋದಿ ಅವರು ಪವನ ವಿದ್ಯುತ್ ಉತ್ಪಾದಕ ಕಂಪನಿಯ ಸಿಇಒ ಅವರೊಂದಿಗಿನ ಸಂವಾದದ ವಿಡಿಯೊ ತುಣುಕನ್ನು ಟ್ಯಾಗ್‌ ಮಾಡಿದ್ದರು.

ರಾಹುಲ್‌ ಹೇಳಿಕೆ ವಿರುದ್ಧ ಹರಿಹಾಯ್ದಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್, ‘ರಾಹುಲ್ ಗಾಂಧಿ ಅವರಿಗೆ ಏನೂ ಅರ್ಥವಾಗುವುದಿಲ್ಲ ಎಂದು ಹೇಳುವ ಧೈರ್ಯ ಅವರ ಸುತ್ತಮುತ್ತ ಇರುವವರಲ್ಲಿ ಯಾರಿಗೂ ಇಲ್ಲ’ ಎಂದು ಟೀಕಿಸಿ ಟ್ವೀಟ್ ಮಾಡಿದ್ದಾರೆ. ‘ವಿಶ್ವದ ಪ್ರಸಿದ್ದ ಕಂಪನಿಯ ಸಿಇಒ ಅವರೇ ಪ್ರಧಾನಿಯವರ ವಿಚಾರಗಳನ್ನು ಒಪ್ಪಿಕೊಂಡ ಮೇಲೂ ಇವರು ಪ್ರಧಾನಿಯವರ ವಿಚಾರಗಳನ್ನು ಅಪಹಾಸ್ಯ ಮಾಡುತ್ತಾರೆ’ ಎಂದು ಉಲ್ಲೇಖಿಸಿದ್ದಾರೆ. ಈ ಟ್ವೀಟ್‌ ಜತೆಗೆ ಗಾಳಿ ಯಂತ್ರಗಳು ತೆಳುವಾದ ಗಾಳಿಯಿಂದ ನೀರನ್ನು ಉತ್ಪಾದಿಸುತ್ತವೆ ಎಂದು ವರದಿಯನ್ನು ಟ್ಯಾಗ್ ಮಾಡಿದ್ದಾರೆ. 

ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಅವರು ರಾಹುಲ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ ಟ್ವೀಟ್ ಮಾಡಿದ್ದು, ‘ರಾಹುಲ್‌ಜಿ ನಾಳೆ ಬೆಳಿಗ್ಗೆ ಎದ್ದು ನಾನು ಇಲ್ಲಿ ಲಗತ್ತಿಸಿರುವ ಎರಡು ವೈಜ್ಞಾನಿಕ ಪತ್ರಿಕೆಗಳನ್ನು ದಯವಿಟ್ಟು ಓದಿ. ಓದಿದ ನಂತರ ನಿಮಗೆ ಖಚಿತವಾದರೂ ಈ ವಿಷಯದ ಸಂಕೀರ್ಣತೆ ಬಗ್ಗೆ ಅರ್ಥವಾಗುವುದಿಲ್ಲ’ ಎಂದು ಉಲ್ಲೇಖಿಸಿದ್ದಾರೆ. ಗಾಳಿ ಯಂತ್ರಗಳು ತೆಳುವಾದ ಗಾಳಿಯಿಂದ ನೀರನ್ನು ಉತ್ಪಾದಿಸುತ್ತವೆ ಮತ್ತು ಮರುಭೂಮಿಯಲ್ಲಿ ದಿನಕ್ಕೆ 1000 ಲೀಟರ್ ಶುದ್ಧ ನೀರನ್ನು ಉತ್ಪಾದನೆ ಮಾಡಬಹುದೆಂಬ ವರದಿಯ ತುಣುಕುಗಳನ್ನು ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು