ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರ ಅಕ್ರಮ ರಫ್ತು: ಇ.ಡಿ ವಿಚಾರಣೆಗೆ ಹಾಜರಾದ ರಾಜಸ್ಥಾನ ಸಿಎಂ ಸಹೋದರ

Last Updated 27 ಸೆಪ್ಟೆಂಬರ್ 2021, 11:32 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರ ಅಣ್ಣ ಅಗ್ರಸೇನ್ ಗೆಹಲೋತ್ ಅವರು ಸೋಮವಾರ ಜಾರಿ ನಿರ್ದೇಶನಾಲಯ (ಇಡಿ) ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ರಸಗೊಬ್ಬರ ಅಕ್ರಮ ರಫ್ತು ಆರೋಪಕ್ಕೆ ಸಂಬಂಧಿಸಿದಂತೆ ಅವರು ಮತ್ತು ಇತರರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ವಿಚಾರಣೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.

ಬೆಳಗ್ಗೆ 11.30ರ ಸುಮಾರಿಗೆ ವಕೀಲರ ಜೊತೆ ಹಾಜರಾದ ಅಗ್ರಸೇನ್ ಗೆಹಲೋತ್, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ಅಡಿ ಅವರ ಹೇಳಿಕೆ ದಾಖಲಿಸಿದ್ದಾರೆ.

ಪ್ರಕರಣದಲ್ಲಿ ಈ ಹಿಂದೆಯೂ ಅಗ್ರಸೇನ್ ಗೆಹಲೋತ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ, ಇಡಿ ಕ್ರಮದಿಂದ ವಿನಾಯಿತಿ ಕೋರಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.

ತನಿಖೆಗೆ ಸಹಕರಿಸುವಂತೆ ಇತ್ತೀಚಗೆ ರಾಜಸ್ಥಾನ ಹೈಕೋರ್ಟ್ ಸೂಚಿಸಿದೆ ಎಂದು ಮೂಲಗಳು ಹೇಳಿದ್ದು, ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಇಡಿಗೆ ಸೂಚಿಸಿದೆ.

ಕಳೆದ ವರ್ಷ ಜುಲೈನಲ್ಲಿ ರಾಜಸ್ಥಾನದಲ್ಲಿರುವ ಅವರ ಉದ್ಯಮ ಕೇಂದ್ರಗಳ ಮೇಲೆ ಇಡಿ ದಾಳಿ ಮಾಡಿತ್ತು. ಕೇಂದ್ರ ತನಿಖಾ ಸಂಸ್ಥೆಗಳು ಕೈಗೊಳ್ಳುವ ಇಂತಹ ಕ್ರಮಗಳಿಗೆ ಹೆದರುವುದಿಲ್ಲ ಎಂದು ಆಡಳಿತಾರೂಢ ಕಾಂಗ್ರೆಸ್ ಹೇಳಿತ್ತು.

ರೈತರಿಗೆ ಮೀಸಲಾದ ಮ್ಯೂರಿಯೇಟ್ ಆಫ್ ಪೊಟ್ಯಾಷ್ (ಎಂಒಪಿ) ಸಂಗ್ರಹಣೆ ಮತ್ತು ರಫ್ತಿನಲ್ಲಿ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ 2007-09 ರಲ್ಲಿ ಕಸ್ಟಮ್ಸ್ ಇಲಾಖೆಯ ಪ್ರಕರಣವನ್ನು ಆಧರಿಸಿ ಪಿಎಂಎಲ್‌ಎ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು.

ಮಲೇಷಿಯಾ ಮತ್ತು ತೈವಾನ್ ಮೂಲದ ಖರೀದಿದಾರರಿಗೆ ಕೈಗಾರಿಕಾ ಲವಣಗಳ ನೆಪದಲ್ಲಿ, ರಫ್ತು ನಿರ್ಬಂಧಿತ ಸರಕಾರದ ಎಂಒಪಿಯನ್ನು ರಫ್ತು ಮಾಡಲಾಗಿದೆ ಎಂದು ಇಡಿ ಆರೋಪಿಸಿದೆ.

ತನಿಖಾ ಏಜೆನ್ಸಿ ಮೂಲಗಳು ಹೇಳುವಂತೆ ಅಗ್ರಸೇನ್ ಗೆಹಲೋತ್ ಮತ್ತು ಅವರ ಸಂಸ್ಥೆಗೆ 2013ರಲ್ಲಿ ಈ ರಫ್ತು ಅಕ್ರಮಗಳ ಆರೋಪದ ಮೇಲೆ ಕಸ್ಟಮ್ಸ್ ಇಲಾಖೆ ₹60 ಕೋಟಿ ದಂಡ ವಿಧಿಸಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ₹ 130 ಕೋಟಿ ಮೌಲ್ಯದ 35,000 ಮೆಟ್ರಿಕ್ ಟನ್ ಎಂಒಪಿಯನ್ನು ಗೆಹಲೋತ್ ಕಂಪನಿಯು ರಫ್ತು ಮಾಡಿದೆ ಎಂದು ಇಡಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT