ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಹಿಂಸಾಚಾರ: 20 ಮಂದಿಗೆ ನೋಟಿಸ್‌, ಕೆಲವರಿಗೆ ‘ಲುಕ್‌ಔಟ್‌‘ ನೋಟಿಸ್‌

Last Updated 28 ಜನವರಿ 2021, 8:32 IST
ಅಕ್ಷರ ಗಾತ್ರ

ನವದೆಹಲಿ: ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಯೋಗೇಂದ್ರ ಯಾದವ್ ಮತ್ತು ಬಲ್‌ಬೀರ್‌ ಸಿಂಗ್‌ ರಾಜೆವಾಲ್ ಸೇರಿದಂತೆ 20ಕ್ಕೂ ಹೆಚ್ಚು ರೈತ ಮುಖಂಡರಿಗೆ ನೋಟಿಸ್ ನೀಡಿದ್ದಾರೆ.

‘ಟ್ರ್ಯಾಕ್ಟರ್‌ ರ‍್ಯಾಲಿ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ವಿರುದ್ಧ ನಾವು ಏಕೆ ಕಾನೂನು ಕ್ರಮ ಕೈಗೊಳ್ಳಬಾರದು ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ. ನೋಟಿಸ್ ತಲುಪಿದ ಮೂರು ದಿನಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ರೈತ ಮುಖಂಡರು ಟ್ರ್ಯಾಕ್ಟರ್‌ ರ‍್ಯಾಲಿಗೆ ವಿಧಿಸಿದ್ದ ನಿರ್ಬಂಧಗಳನ್ನು ಪಾಲಿಸಿಲ್ಲ. ಈ ಕಾರಣಕ್ಕೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ದೆಹಲಿ ಪೊಲೀಸ್ ಆಯುಕ್ತ ಎಸ್‌.ಎನ್‌.ಶ್ರೀವಾಸ್ತವ್ ಬುಧವಾರ ‘ಜ.26ರಂದು ನಡೆದ ಹಿಂಸಾಚಾರದಲ್ಲಿ ರೈತ ಮುಖಂಡರು ಪಾಲ್ಗೊಂಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಆರೋಪಿಯನ್ನೂ ಬಿಡುವುದಿಲ್ಲ‘ ಎಂದು ಹೇಳಿಕೆ ನೀಡಿದ ನಂತರ, ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.

ಮತ್ತೊಬ್ಬ ರೈತ ನಾಯಕ ದರ್ಶನ್ ಪಾಲ್ ಅವರಿಗೆಬುಧವಾರ ನೋಟಿಸ್ ನೀಡಲಾಗಿತ್ತು. ಅದರಲ್ಲಿ ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆಯಲ್ಲಿ ವಿಧ್ವಂಸಕ ಕೃತ್ಯ ಎಸಗುವುದು ದೇಶ ವಿರೋಧಿ ಕೃತ್ಯವಾಗುತ್ತದೆ‘ ಎಂದು ಉಲ್ಲೇಖಿಸಲಾಗಿದೆ.

ಲುಕ್‌ಔಟ್‌ ನೋಟಿಸ್‌:

ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಲ್ಲಿವರೆಗೂ ಎಫ್‌ಐಆರ್ ದಾಖಲಾಗಿರುವ ಎಲ್ಲ ರೈತರ ಮುಖಂಡರಿಗೆ ‘ಲುಕ್‌ಔಟ್‌ ಸುತ್ತೋಲೆ‘ ಕಳುಹಿಸಿದ್ದಾರೆ. ಎಫ್‌ಐಆರ್‌ನಲ್ಲಿ ಹೆಸರಿರುವ ಎಲ್ಲ ರೈತರಿಗೂ ತಮ್ಮ ಪಾಸ್‌ಪೋರ್ಟ್‌ಗಳನ್ನು ತಂದೊಪ್ಪಿಸುವಂತೆ ಸೂಚಿಸಲಾಗಿದೆ.

ದೆಹಲಿಯಲ್ಲಿ ಮಂಗಳವಾರ ನಡೆದ ಘಟನೆಗಳನ್ನು ನಿರಂತರವಾಗಿ ಗಮನಿಸುತ್ತಿದ್ದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ನಂತರದಲ್ಲೇ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಂತರ ಬುಧವಾರ ರಾತ್ರಿ ಹಾಗೂ ಗುರುವಾರದ ಮುಂಜಾವಿನವರೆಗೂ ಸರಣಿ ಸಭೆಗಳು ನಡೆದವು. ಈ ಸಭೆಯ ನಂತರ ಎಫ್‌ಐಆರ್ ದಾಖಲಾದವರ ವಿರುದ್ಧ ಲುಕ್‌ ಔಟ್‌ ನೋಟಿಸ್‌ ನೀಡುವಂತಹ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಫ್‌ಐಆರ್ ದಾಖಲಾಗಿರುವ ರೈತರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿರುವುದಾಗಿ ಮೂಲಗಳು ತಿಳಿಸಿವೆ.

ದೆಹಲಿಯಲ್ಲಿ ಮಂಗಳವಾರ ನಡೆದ ಘಟನೆಗೆ ಸಂಬಂಧಿಸಿದಂತೆ 25ಕ್ಕೂ ಹೆಚ್ಚು ರೈತ ಮುಖಂಡರ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಇದರಲ್ಲಿ ಕೇಂದ್ರ ಸರ್ಕಾರದೊಂದಿಗೆ ಕೃಷಿ ಕಾಯ್ದೆಗಳ ರದ್ದುಗೊಳಿಸುವ ಕುರಿತು ಮಾತುಕತೆ ನಡೆಸುತ್ತಿರುವ 30 ರಿಂದ 40 ರೈತ ಸಂಘಟನೆಗಳ ಸದಸ್ಯರೂ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT