ಶುಲ್ಕ ಮರುಪಾವತಿ: ವಿ.ವಿಗಳಿಂದ ₹30 ಕೋಟಿ ಸಂಗ್ರಹಿಸಿದ ಯುಜಿಸಿ- ಜಗದೀಶ್ ಕುಮಾರ್

ನವದೆಹಲಿ: 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪ್ರವೇಶ ರದ್ದಾಗಿರುವ ವಿದ್ಯಾರ್ಥಿಗಳಿಗೆ ಶುಲ್ಕ ಮರುಪಾವತಿ ಮಾಡುವ ಸಲುವಾಗಿ ದೇಶದಾದ್ಯಂತ ವಿವಿಧ ವಿಶ್ವವಿದ್ಯಾಲಯಗಳಿಂದ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ₹30 ಕೋಟಿ ಸಂಗ್ರಹಿಸಿದೆ ಎಂದು ಯುಜಿಸಿ ಅಧ್ಯಕ್ಷ ಎಂ. ಜಗದೀಶ್ ಕುಮಾರ್ ಹೇಳಿದ್ದಾರೆ.
ದೆಹಲಿ ವಿಶ್ವವಿದ್ಯಾಲಯವೊಂದರಿಂದಲೇ ₹17 ಕೋಟಿ ಪಡೆದುಕೊಳ್ಳಲಾಗಿದೆ. ವಿಶ್ವವಿದ್ಯಾಲಯಗಳಿಂದ ಪಡೆದುಕೊಂಡಿರುವ ಈ ಹಣವನ್ನು 14,443 ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
‘ಬಹುಪಾಲು ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಉತ್ತಮ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ಸ್ವಾತಂತ್ರ್ಯ ಅವರಿಗಿದೆ. ಆದರೆ ಈ ಮೊದಲು ಪ್ರವೇಶ ಪಡೆದಿರುವ ವಿಶ್ವವಿದ್ಯಾಲಯಗಳಿಗೆ ಪಾವತಿಸಿರುವ ಶುಲ್ಕ ಮರುಪಾವತಿಯಾಗದೆ ಇನ್ನೊಂದು ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಅವರು ಸಮರ್ಥರಾಗಿರುವುದಿಲ್ಲ’ ಎಂದೂ ವಿವರಿಸಿದ್ದಾರೆ.
‘ಈ ಸಂಬಂಧ ನಮಗೆ ವಿದ್ಯಾರ್ಥಿಗಳಿಂದ ಹಲವಾರು ದೂರುಗಳು ಬಂದಿದ್ದವು. ನಾವು ವಿಶ್ವವಿದ್ಯಾಲಯಗಳ ಜೊತೆ ಮಾತುಕತೆ ನಡೆಸಿ, ಒಂದು ವಿಶ್ವವಿದ್ಯಾಲಯದಿಂದ ಇನ್ನೊಂದು ವಿಶ್ವವಿದ್ಯಾಲಯಕ್ಕೆ ವಲಸೆ ಹೋಗಿರುವ ಮತ್ತು ಪ್ರವೇಶ ರದ್ದಾಗಿರುವ ವಿದ್ಯಾರ್ಥಿಗಳಿಗೆ ಶುಲ್ಕವನ್ನು ಮರುಪಾವತಿ ಮಾಡುವ ಖಾತರಿ ನೀಡಿದ್ದೇವೆ’ ಎಂದಿದ್ದಾರೆ.
ಯುಜಿಸಿಯ ಮಾರ್ಗಸೂಚಿಯ ಪ್ರಕಾರ ಹಲವು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಶುಲ್ಕವನ್ನು ಮರುಪಾವತಿ ಮಾಡಿವೆ. ಹಲವು ವಿಶ್ವವಿದ್ಯಾಲಯಗಳ ವಿಚಾರಗಳಲ್ಲಿ ನಾವು ಮಧ್ಯಪ್ರವೇಶಿಸಬೇಕಾಗಿದೆ. ಕೇಂದ್ರೀಯ, ಖಾಸಗಿ, ಡೀಮ್ಡ್ ವಿಶ್ವವಿದ್ಯಾಲಯಗಳಿಗಲ್ಲಿ ಪ್ರವೇಶ ಪಡೆದಿದ್ದ 832 ವಿದ್ಯಾರ್ಥಿಗಳಿಗೆ ₹12.14 ಕೋಟಿ ಈಗಾಗಲೇ ಮರುಪಾವತಿ ಮಾಡಿದ್ದೇವೆ’ ಎಂದೂ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.