ವರ್ಚುವಲ್ ವ್ಯವಸ್ಥೆ ಬಗ್ಗೆ ‘ಸುಪ್ರೀಂ‘ ಅಸಮಾಧಾನ: ಸರಿಪಡಿಸಲು ಸೂಚನೆ

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ವರ್ಚುವಲ್ ವ್ಯವಸ್ಥೆ ಮೂಲಕ ನಡೆಯುತ್ತಿರುವ ವಿಚಾರಣೆಗಳು ತೃಪ್ತಿಕರವಾಗಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಇದೇ ವ್ಯವಸ್ಥೆಯಲ್ಲಿ ಸಮರ್ಪಕವಾಗಿ ವಿಚಾರಣೆ ಮುಂದುವರಿಸುವುದು ತುಂಬಾ ಕಷ್ಟ ಎಂದು ಹೇಳಿದೆ.
ಆದರೆ, ಸುಪ್ರೀಂ ಕೋರ್ಟ್ ಪಕ್ಕದಲ್ಲೇ ಇರುವ ದೆಹಲಿ ಹೈಕೋರ್ಟ್‌ನಲ್ಲೂ ವರ್ಚುವಲ್ ವ್ಯವಸ್ಥೆಯಲ್ಲೇ ಕಾರ್ಯಕಲಾಪಗಳು ನಡೆಯುತ್ತಿದ್ದು, ಅಲ್ಲಿ ಈ ವ್ಯವಸ್ಥೆಯಿಂದ ಅಂತಹ ಯಾವುದೇ ಸಮಸ್ಯೆಗಳಿಲ್ಲ ಎಂಬುದನ್ನೂ ನ್ಯಾಯಾಲಯ ಗಮನಿಸಿದೆ.
‘ದೆಹಲಿ ಹೈಕೋರ್ಟ್‌ನಲ್ಲಿ ಈ ವರ್ಚುವಲ್ ವ್ಯವಸ್ಥೆಯಿಂದ ಯಾವುದೇ ಸಮಸ್ಯೆ ಸೃಷ್ಟಿಯಾಗದಿದ್ದರೂ, ಸುಪ್ರೀಂ ಕೋರ್ಟ್‌ನಲ್ಲಿ ತೃಪ್ತಿಕರವಾಗಿ ಕಾರ್ಯನಿರ್ವಹಿಸುವುದು ಕಷ್ಟ ಎಂಬುದನ್ನು ಆರಂಭದಲ್ಲೇ ಹೇಳಿರುವುದಾಗಿ‘ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರ ನೇತೃತ್ವದ ಪೀಠ ಜನವರಿ 5ರಂದು ಹೊರಡಿಸಿರುವ ಆದೇಶದಲ್ಲಿ ಉಲ್ಲೇಖಿಸಿದೆ.
‘ವಾದ–ಪ್ರತಿವಾದದ ಸಂದರ್ಭದಲ್ಲೂ ಇಂಟರ್ನೆಟ್ ಸಂಪರ್ಕ ಕಡಿತದಂತಹ ಸಮಸ್ಯೆ ಎದುರಿಸುತ್ತಿದ್ದೇವೆ. ಮಾತುಗಳು ಪ್ರತಿಧ್ವನಿಯಂತೆ ಕೇಳಿಸುತ್ತವೆ. ನಿನ್ನೆಯಿಂದ ಈ ಸಮಸ್ಯೆಗಳು ತೀವ್ರವಾಗಿವೆ‘ ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಮತ್ತು ಹೃಷಿಕೇಶ ರಾಯ್ ಅವರನ್ನೂ ಒಳಗೊಂಡ ನ್ಯಾಯಪೀಠ ಹೇಳಿದೆ. ಈ ಸಮಸ್ಯೆಗಳ ಬಗ್ಗೆ ಗಮನಹರಿಸುವಂತೆ ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ.
ಕೋವಿಡ್ 19 ಸಾಂಕ್ರಾಮಿಕದಿಂದಾಗಿ ಕಳೆದ ವರ್ಷದ ಮಾರ್ಚ್‌ನಿಂದ ಸುಪ್ರೀಂ ಕೋರ್ಟ್‌ನಲ್ಲಿ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆಗಳು ನಡೆಯುತ್ತಿವೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.