ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಧಾರ ಕೈಗೊಳ್ಳದ ಕೇಂದ್ರದ ನಡೆ ಬಗ್ಗೆ ‘ಸುಪ್ರೀಂ’ ಅಸಮಾಧಾನ

ಗಲ್ಲು ಶಿಕ್ಷೆ ಮಾರ್ಪಾಡು ಕೋರಿ ಬಲ್ವಂತ್‌ ಸಿಂಗ್‌ ಅರ್ಜಿ
Last Updated 28 ಸೆಪ್ಟೆಂಬರ್ 2022, 12:52 IST
ಅಕ್ಷರ ಗಾತ್ರ

ನವದೆಹಲಿ: ಪಂಜಾಬ್‌ ಮಾಜಿ ಮುಖ್ಯಮಂತ್ರಿ ಬಿಯಾಂತ್‌ ಸಿಂಗ್‌ ಅವರ ಹತ್ಯೆ ಪ್ರಕರಣದಲ್ಲಿ ತನಗೆ ವಿಧಿಸಿರುವ ಮರಣ ದಂಡನೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸುವಂತೆ ಕೋರಿ ಬಲ್ವಂತ್ ಸಿಂಗ್ ರಾಜೋನಾ ಸಲ್ಲಿಸಿರುವ ಅರ್ಜಿ ಕುರಿತು ನಿರ್ಧಾರ ಕೈಗೊಳ್ಳದ ಕೇಂದ್ರದ ನಡೆ ಬಗ್ಗೆ ಸುಪ್ರೀಂ ಕೋರ್ಟ್‌ ಬುಧವಾರ ಅಸಮಾಧಾನ ಹೊರಹಾಕಿತು.

ರಾಜೋನಾ ಸಲ್ಲಿಸಿದ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಯು.ಯು.ಲಲಿತ್‌, ನ್ಯಾಯಮೂರ್ತಿಗಳಾದ ಎಸ್‌.ರವೀಂದ್ರ ಭಟ್ ಹಾಗೂ ಜೆ.ಬಿ.ಪಾರ್ದಿವಾಲಾ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು.

‘ಕಳೆದ 26 ವರ್ಷಗಳಿಂದ ಕಾರಾಗೃಹವಾಸದಲ್ಲಿರುವ ಕಾರಣ ನನಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಮಾರ್ಪಡಿಸಬೇಕು’ ಎಂದು ರಾಜೋನಾ ಅರ್ಜಿ ಸಲ್ಲಿಸಿದ್ದಾನೆ.

‘ಅರ್ಜಿ ವಿಚಾರಣೆಯನ್ನು ಮುಂದೂಡಬೇಕು’ ಎಂಬುದಾಗಿ ಕೇಂದ್ರ ಸರ್ಕಾರ ಮನವಿ ಮಾಡಿದ ಬಗ್ಗೆಯೂ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

‘ಕಳೆದ ಮೇ 2ರಂದು ವಿಚಾರಣೆ ನಡೆಸಿ, ನಿರ್ಧಾರ ತಿಳಿಸಲು ಎರಡು ತಿಂಗಳು ಅವಕಾಶ ನೀಡಲಾಗಿತ್ತು. ಆ ಅವಧಿಯೂ ಮುಗಿದಿದೆ. ಆದರೆ, ಸಂಬಂಧಪಟ್ಟವರು ಈ ಕುರಿತು ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ ಎಂಬುದಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ’ ಎಂದು ಹೇಳಿದ ನ್ಯಾಯಪೀಠ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

‘ಇಂಥ ವಿಷಯಗಳು ವಿಚಾರಣೆಯನ್ನು ಮುಂದೂಡಿದಾಗ ಏನಾಗುತ್ತದೆ ಎಂಬುದು ನಿಮಗೆ ಗೊತ್ತು. ಇಂಥ ವಿಷಯಗಳು ಮತ್ತೆ ಆರು ತಿಂಗಳ ನಂತರ ವಿಚಾರಣೆಗೆ ಬರುತ್ತವೆ’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT