ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2017ರ ತೀರ್ಪು ಮರುಪರಿಶೀಲನೆ ಅಗತ್ಯತೆ ಪರಿಗಣಿಸುವುದಾಗಿ ಹೇಳಿದ ಸುಪ್ರೀಂ ಕೋರ್ಟ್‌

ವಕೀಲರನ್ನು ಹಿರಿಯ ಅಡ್ವೊಕೇಟ್‌ಗಳೆಂದು ಘೋಷಣೆಗೆ ಸಂಬಂಧಿಸಿದ ಮಾರ್ಗಸೂಚಿಗಳ ರಚನೆ
Last Updated 16 ಫೆಬ್ರುವರಿ 2023, 13:44 IST
ಅಕ್ಷರ ಗಾತ್ರ

ನವದೆಹಲಿ: ವಕೀಲರನ್ನು ಹಿರಿಯ ಅಡ್ವೊಕೇಟ್‌ಗಳೆಂದು ಘೋಷಿಸುವುದಕ್ಕೆ ಸಂಬಂಧಿಸಿ ಮಾರ್ಗಸೂಚಿಗಳನ್ನು ರೂಪಿಸಿ 2017ರಲ್ಲಿ ನೀಡಿದ್ದ ಆದೇಶವನ್ನು ಮರುಪರಿಶೀಲಿಸುವ ಅಗತ್ಯವಿದೆಯೇ ಎಂಬುದನ್ನು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್‌ ಗುರುವಾರ ಹೇಳಿದೆ.

ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್‌, ಮನೋಜ್‌ ಮಿಶ್ರಾ ಹಾಗೂ ಅರವಿಂದ ಕುಮಾರ್‌ ಅವರಿದ್ದ ನ್ಯಾಯಪೀಠವು ಈ ವಿಷಯ ಕುರಿತ ಅರ್ಜಿಗಳ ವಿಚಾರಣೆ ನಡೆಸಿತು.

‘ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನಲ್ಲಿ ಕೆಲ ಮಾರ್ಪಾಡುಗಳ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬುದೇ ಇಲ್ಲಿರುವ ಪ್ರಶ್ನೆ’ ಎಂದು ಅಭಿಪ್ರಾಯಪಟ್ಟಿತು.

‘ಒಂದು ವೇಳೆ, ತೀರ್ಪನ್ನು ಮರುಪರಿಶೀಲಿಸಬೇಕು ಎಂದಾದಲ್ಲಿ, ಎಷ್ಟರ ಮಟ್ಟಿಗೆ ಈ ಕಾರ್ಯವಾಗಬೇಕು ಎಂಬುದಕ್ಕಷ್ಟೆ ಈ ವಿಷಯವನ್ನು ಸೀಮಿತಗೊಳಿಸೋಣ’ ಎಂದು ನ್ಯಾಯಪೀಠ ಹೇಳಿತು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಈ ಕುರಿತು ಸರ್ಕಾರವು ಅರ್ಜಿಯೊಂದನ್ನು ಶೀಘ್ರವೇ ಸಲ್ಲಿಸಲಿದೆ’ ಎಂದು ಹೇಳಿದರು.

ಅರ್ಜಿದಾರರೊಬ್ಬರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌, ‘ವಕೀಲರನ್ನು ಹಿರಿಯ ಅಡ್ವೊಕೇಟ್‌ಗಳೆಂದು ಘೋಷಿಸುವುದಕ್ಕೆ ಸಂಬಂಧಿಸಿ ಪ್ರತಿಯೊಂದು ಹೈಕೋರ್ಟ್‌ ತನ್ನದೇ ವಿಧಾನವನ್ನು ಅಳವಡಿಸಿಕೊಳ್ಳುತ್ತಿದೆ. ಈ ಪ್ರಕ್ರಿಯೆಗೆ ಸಂಬಂಧಿಸಿ ಏಕರೂಪ ವಿಧಾನ ಇರಬೇಕು’ ಎಂದು ಹೇಳಿದರು.

‘ಮಾರ್ಗಸೂಚಿಗಳಿಗೆ ಸಂಬಂಧಿಸಿದ ತೀರ್ಪಿನಲ್ಲಿ ಮಾರ್ಪಾಡುಗಳನ್ನು ತರುವುದು ಅಗತ್ಯ ಎಂಬುದಾಗಿ ಎಲ್ಲ ಪಕ್ಷಗಾರರ ಪರ ವಕೀಲರ ಅಭಿಪ್ರಾಯವಾಗಿದೆ. ಈ ವಿಷಯ ಕುರಿತು ಆದ್ಯತೆ ಮೇಲೆ ಪರಿಶೀಲನೆ ನಡೆಸಲಾಗುವುದು’ ಎಂದು ಹೇಳಿದ ನ್ಯಾಯಪೀಠ, ವಿಚಾರಣೆಯನ್ನು ಫೆ.22ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT