ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್‌ ಕಿ ಬಾತ್‌ | ಹೆಮ್ಮೆಯಿಂದ ಮಾತೃಭಾಷೆ ಮಾತನಾಡಿ: ಪ್ರಧಾನಿ ನರೇಂದ್ರ ಮೋದಿ

ದೇಶದ ಆಹಾರ ಪದ್ಧತಿ, ವಸ್ತ್ರವೈವಿಧ್ಯ ಕುರಿತು ‘ಮನ್‌ ಕಿ ಬಾತ್‌’ನಲ್ಲಿ ಪ್ರಸ್ತಾಪ
Last Updated 27 ಫೆಬ್ರುವರಿ 2022, 10:34 IST
ಅಕ್ಷರ ಗಾತ್ರ

ನವದೆಹಲಿ: ‘ಜನರು ಬಹಳ ಹೆಮ್ಮೆಯಿಂದ ತಮ್ಮ ಮಾತೃಭಾಷೆಯನ್ನು ಮಾತನಾಡಬೇಕು. ಭಾಷಾ ಶ್ರೀಮಂತಿಕೆ ವಿಷಯದಲ್ಲಿ ಭಾರತವನ್ನು ಸರಿಗಟ್ಟುವ ದೇಶ ಮತ್ತೊಂದಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.

ಮಾಸಿಕ ‘ಮನ್‌ ಕಿ ಬಾತ್‌’ನಲ್ಲಿ ಅವರು ದೇಶದಲ್ಲಿನ ಭಾಷೆಗಳ ಸೊಗಡು, ಆಹಾರ ಪದ್ಧತಿ, ವಸ್ತ್ರವೈವಿಧ್ಯ ಕುರಿತು ಮಾತನಾಡಿದರು.

ವಿವಿಧ ಭಾಷೆಗಳಲ್ಲಿನ ಜನಪ್ರಿಯ ಗೀತೆಗಳನ್ನು ಹಾಡಿರುವ ವಿಡಿಯೊಗಳನ್ನು ಸಿದ್ಧಪಡಿಸುವಂತೆ ಯುವ ಜನತೆಗೆ ಕರೆ ನೀಡಿದ ಮೋದಿ, ಈ ರೀತಿ ಮಾಡುವುದರಿಂದ ನೀವು ಜನಪ್ರಿಯರಾಗುವ ಜೊತೆಗೆ, ಹೊಸ ಪೀಳಿಗೆಗೆ ದೇಶದ ವೈವಿಧ್ಯವನ್ನು ತೋರಿಸಿಕೊಟ್ಟಂತಾಗುವುದು ಎಂದರು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಒಂದು ರಾಜ್ಯದ ಜನರು ಮತ್ತೊಂದು ರಾಜ್ಯದ ಭಾಷೆಯ ಹಾಡುಗಳ ವಿಡಿಯೊ ಮಾಡಬೇಕು. ಇದರಿಂದ ‘ಏಕ್ ಭಾರತ್, ಶ್ರೇಷ್ಠ್ ಭಾರತ್’ನ ಅನುಭೂತಿ ಸಾಕಾರವಾಗಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳು ಗತಿಸಿದ್ದರೂ, ಭಾಷೆ, ದಿರಿಸು, ಆಹಾರ–‍ಪಾನೀಯಗಳಂತಹ ವಿಷಯದಲ್ಲಿ ಕೆಲವರಿಗೆ ಈಗಲೂ ದ್ವಂದ್ವ ಹಾಗೂ ಸಂಕೋಚ ಇದೆ. ಇಂಥ ವೈರುದ್ಧ್ಯ ಜಗತ್ತಿನ ಬೇರೆ ದೇಶಗಳಲ್ಲಿ ಇಲ್ಲ’ ಎಂದೂ ಹೇಳಿದರು.

‘ಬಿಹಾರದಿಂದ ಕೆಲ ವರ್ಷಗಳ ಹಿಂದೆ ಕಳವು ಮಾಡಲಾಗಿದ್ದ ಪ್ರಾಚೀನ ವಿಗ್ರಹವೊಂದನ್ನು ಇಟಲಿಯಿಂದ ಮರಳಿ ತರಲಾಗಿದೆ. ದೇಶದ ನೂರಾರು ಅಮೂಲ್ಯ ವಿಗ್ರಹಗಳು ಕಳುವಾಗಿದ್ದವು. 2014ರಲ್ಲಿ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ, ಇಂಥ ನೂರಾರು ವಿಗ್ರಹಗಳನ್ನು ಬೇರೆ ಬೇರೆ ದೇಶಗಳಿಂದ ಮರಳಿ ತರಲಾಗಿದೆ’ ಎಂದು ಮೋದಿ ಹೇಳಿದರು.

ಫೆ.28ರಂದು ಆಚರಿಸಲಾಗುವ ‘ರಾಷ್ಟ್ರೀಯ ವಿಜ್ಞಾನ ದಿನ’ ಪ್ರಸ್ತಾಪಿಸಿದ ಅವರು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಪಾಲಕರು ಮುಂದಾಗಬೇಕು ಎಂದರು.

‘ಶಿವರಾತ್ರಿ ಹಾಗೂ ಹೋಳಿ ಹಬ್ಬಗಳಿಗೆ ದೇಶೀಯವಾಗಿ ತಯಾರಿಸಿದ ಉತ್ಪನ್ನಗಳನ್ನೇ ಬಳಸುವಂತೆ ಅವರು ಕೋರಿದರು. ಜೊತೆಗೆ, ಕೋವಿಡ್‌–19 ಗೆ ಸಂಬಂಧಿಸಿ ಮುನ್ನೆಚ್ಚರಿಕೆ ವಹಿಸುವಂತೆಯೂ ಹೇಳಿದರು.

***

2013 ರವರೆಗೆ ವಿವಿಧ ದೇಶಗಳಿಂದ 13 ವಿಗ್ರಹಗಳನ್ನು ಮರಳಿ ತರಲಾಗಿದ್ದರೆ, ಕಳೆದ ಏಳು ವರ್ಷಗಳಲ್ಲಿ 200ಕ್ಕೂ ಅಧಿಕ ಅಮೂಲ್ಯ ವಿಗ್ರಹಗಳನ್ನು ಭಾರತಕ್ಕೆ ತರಲಾಗಿದೆ

-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT