ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿಜೆಪಿ ವಿರುದ್ಧ 440 ವೋಲ್ಟ್ಸ್‌ ವಿದ್ಯುತ್ ಹರಿಯುತ್ತಿದೆ’-ಅಖಿಲೇಶ್ ಯಾದವ್

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ: ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹೇಳಿಕೆ
Last Updated 21 ಫೆಬ್ರುವರಿ 2022, 17:55 IST
ಅಕ್ಷರ ಗಾತ್ರ

ಹರ್ದೋಯಿ (ಉತ್ತರ ಪ್ರದೇಶ):‘ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಚಾರ ನಡೆಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ‘ಪಿಎಂ’ ಅವರನ್ನು ಕರೆಸುತ್ತಾರೆ. ಆದರೆ ಪಿಎಂ ಎಂಬುದು ಪ್ಯಾಕರ್ಸ್ ಅಂಡ್ ಮೂವರ್ಸ್‌ ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಹೇಳಿದ್ದಾರೆ.

ಇಲ್ಲಿ ತಮ್ಮ ಮಿತ್ರಪಕ್ಷವಾದ ಎಸ್‌ಬಿಎಸ್‌ಪಿಯ ಅಭ್ಯರ್ಥಿ ಸುನೀಲ್ ಅರ್ಕಾವಂಶಿ ಪರವಾಗಿ ಅಖಿಲೇಶ್ ಅವರು ರ‍್ಯಾಲಿ ನಡೆಸಿದರು. ಈ ವೇಳೆ ಆಡಳಿತಾರೂಢ ಬಿಜೆಪಿ ವಿರುದ್ಧ ಹರಿಹಾಯ್ದರು.

‘ಈ ಹೋರಾಟ ನಡೆಯುತ್ತಿರುವುದು ಬಿಜೆಪಿ ಮತ್ತು ರಾಜ್ಯದ ಜನತೆ ಮಧ್ಯೆ. ಈ ಹೋರಾಟದಲ್ಲಿ ನಾವು ಜನರ ಜತೆಗಿದ್ದೇವೆ. ಹೀಗಾಗಿ ಈ ಬಾರಿ ಬಿಜೆಪಿಯಾಗಲೀ, ಕಾಂಗ್ರೆಸ್ಸಾಗಲೀ ಸರ್ಕಾರ ರಚಿಸುವುದಿಲ್ಲ. ಆ ಎರಡೂ ಪಕ್ಷಗಳಿಗೆ ಮತ ನೀಡಿ, ಅದನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಬದಲಿಗೆ ಎಸ್‌ಪಿ ಸರ್ಕಾರ ರಚಿಸುವುದನ್ನು ಖಚಿತಪಡಿಸಿ’ ಎಂದು ಅವರು ಮತದಾರರಲ್ಲಿ ಕೋರಿದ್ದಾರೆ.

‘ಆದಿತ್ಯನಾಥ ಅವರು ರಾಜ್ಯದ ನಗರಗಳು, ಯೋಜನೆಗಳ ಹೆಸರು ಮತ್ತು ಬಣ್ಣಗಳನ್ನು ಬದಲಿಸುತ್ತಿದ್ದರು.
ಈಗ ಅವರ ಹೆಸರೇ ಬದಲಾಗಿ ಹೋಗಿದೆ. ನಾನು ಯೋಗಿ ಅವರನ್ನು ‘ಬಾಬಾ ಸಿ.ಎಂ’ ಎಂದು ಕರೆಯುತ್ತಿದ್ದೆ. ಆದರೆ ಈಗ ಪತ್ರಿಕೆಗಳು ಯೋಗಿ ಅವರನ್ನು ‘ಬುಲ್ಡೋಜರ್ ಸಿ.ಎಂ’ ಎಂದು ಕರೆಯುತ್ತಿವೆ’ ಎಂದು ಅಖಿಲೇಶ್ ಹೇಳಿದ್ದಾರೆ.

‘ಬಿಜೆಪಿ ವಿರುದ್ಧ ಉತ್ತರ ಪ್ರದೇಶದ ಜನರಲ್ಲಿ 440 ವೋಲ್ಟ್ಸ್‌ನ ವಿದ್ಯುತ್ ಹರಿಯುತ್ತಿದೆ ಎಂಬುದು ಬಿಜೆಪಿಗೆ ಅರ್ಥವಾಗಿಲ್ಲ. ಜನರು ಬಿಜೆಪಿಯನ್ನು ತಿರಸ್ಕರಿಸಿದ್ದಾರೆ. ಯೋಗಿ ಅವರನ್ನು ಜನರು ಈಗಾಗಲೇ ಅವರ ತವರು ಗೋರಖಪುರಕ್ಕೆ ಕಳುಹಿಸಿದ್ದಾರೆ. ಹೀಗಾಗಿ ಬಿಜೆಪಿ ನಾಯಕರ ಮಾತುಗಳೇ ಬದಲಾಗಿ ಹೋಗಿವೆ. ನಾವು ‘ಭರ್ತಿ’ (ನೇಮಕಾತಿ) ಬಗ್ಗೆ ಮಾತನಾಡುತ್ತಿದ್ದರೆ, ಬಿಜೆಪಿಯವರು ‘ಗರ್ಮಿ’ (ಬಿಸಿ ಇಳಿಸುತ್ತೇವೆ) ಎಂದು ಮಾನಾಡುತ್ತಿದ್ದಾರೆ’ ಎಂದು ಅಖಿಲೇಶ್ ಹೇಳಿದ್ದಾರೆ.

‘ಹಿಂದಿನ ದಾಖಲೆ ಮುರಿಯಲಿದ್ದೇವೆ’

ಲಖನೌ (ಪಿಟಿಐ): ಉತ್ತರ ಪ್ರದೇಶದಲ್ಲಿ ಆಡಳಿತ ಪರವಾದ ಅಲೆ ಇದೆ. ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿಯಲಿದೆ’ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ಹೇಳಿದ್ದಾರೆ.

ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ. ‘ಈ ಬಾರಿ ಬಿಜೆಪಿ ಪರವಾಗಿ ಜನರ ಉತ್ಸಾಹ ಹೆಚ್ಚಾಗಿದೆ. ನಾವು ಪ್ರಚಾರಕ್ಕೆ ಹೋದೆಡೆಯೆಲ್ಲಾ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ನಮ್ಮಲ್ಲಿ ಅಭ್ಯರ್ಥಿಗಳು ಮುಖ್ಯವೇ ಅಲ್ಲ. ಬದಲಿಗೆ ಪಕ್ಷದ ಚಿಹ್ನೆಯ ಅಡಿ ಸ್ಪರ್ಧಿಸುವವರೆಲ್ಲಾ ಗೆಲ್ಲಲಿದ್ದಾರೆ’ ಎಂದು ಶರ್ಮಾ ಹೇಳಿದ್ದಾರೆ.

ಬ್ರಾಹ್ಮಣ ಸಮುದಾಯದ ನಾಯಕರಾದ ದಿನೇಶ್ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಯೋಗಿ ಆದಿತ್ಯನಾಥ ಅವರ ಸರ್ಕಾರದ ನೀತಿಗಳಿಂದ ಬ್ರಾಹ್ಮಣ ಸಮುದಾಯವು ಸಿಟ್ಟಾಗಿದೆ. ಹೀಗಾಗಿಯೇ ದಿನೇಶ್ ಅವರಿಗೆ ಟಿಕೆಟ್ ನೀಡಲಾಗಿಲ್ಲ ಎಂದು ವಿರೋಧ ಪಕ್ಷಗಳು ಮತ್ತು ಬಿಜೆಪಿಯದ್ದೇ ಕೆಲವು ನಾಯಕರು ಹೇಳಿದ್ದರು. ಈ ಆರೋಪವನ್ನು ದಿನೇಶ್ ನಿರಾಕರಿಸಿದ್ದಾರೆ. ‘ಬ್ರಾಹ್ಮಣರು ಬಿಜೆಪಿ ವಿರುದ್ಧ ಇಲ್ಲ. ನನ್ನ ವಿಧಾನ ಪರಿಷತ್ ಸದಸ್ಯತ್ವ 2027ರವರೆಗೆ ಇದೆ. ಹೀಗಾಗಿ ನನಗೆ ಟಿಕೆಟ್ ನೀಡಿಲ್ಲ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

‘ರಾಮ ಮಂದಿರ ನಿರ್ಮಿಸಲಾಗುತ್ತಿದೆ. ಕಾಶಿಯನ್ನು ಅಭಿವೃದ್ಧಿಪಡಿಸಲಾಗಿದೆ. ಮಥುರಾವನ್ನು ಬಿಡುಗಡೆ ಮಾಡಲಾಗುತ್ತದೆ. ಬ್ರಾಹ್ಮಣರು ಬಯಸುವುದೆಲ್ಲವನ್ನೂ ನಮ್ಮ ಸರ್ಕಾರ ಮಾಡಿದೆ. ಹೀಗಾಗಿ ಬ್ರಾಹ್ಮಣರು ನಮ್ಮ ವಿರುದ್ಧ ಸಿಟ್ಟಾಗಿಲ್ಲ’ ಎಂದು ಅವರು ಹೇಳಿದ್ದಾರೆ.

‘ಈ ಬಾರಿ ಬಿಜೆಪಿಯೇ ಸರ್ಕಾರ ರಚಿಸಲಿದೆ. ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್‌ ಮತ್ತು ಉಳಿದೆಲ್ಲಾ ಪಕ್ಷಗಳು ಎರಡನೇ ಸ್ಥಾನಕ್ಕಾಗಿ ಹೋರಾಡುತ್ತಿವೆ. ಈ ಎಲ್ಲಾ ಪಕ್ಷಗಳು ಗೆಲ್ಲುವ ಒಟ್ಟು ಸ್ಥಾನಗಳ ಸಂಖ್ಯೆ 100 ಮುಟ್ಟುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಅಖಿಲೇಶ್ ಚಿಕ್ಕಹುಡುಗ: ಯೋಗಿ

‘ಅಖಿಲೇಶ್ ಯಾದವ್ ಜೀವನಪೂರ್ತಿ ಚಿಕ್ಕಹುಡುಗನಾಗಿಯೇ (ಬಬುವಾ) ಇರುತ್ತಾರೆ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಲೇವಡಿ ಮಾಡಿದ್ದಾರೆ.

ತಮ್ಮನ್ನು ಬಾಬಾ ಸಿಎಂ ಎಂದು ಕರೆದ ಅಖಿಲೇಶ್ ಅವರನ್ನು, ಯೋಗಿ ಈ ಮೂಲಕ ಬಬುವಾ ಎಂದು ಕರೆದಿದ್ದಾರೆ. ‘ಅಖಿಲೇಶ್ ಅವರ ಆರೋಪಗಳೆಲ್ಲವೂ ಬಾಲಿಶವಾಗಿರುತ್ತವೆ. ಅವರು ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್‌ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ವಿತರಿಸುವುದನ್ನು ವಿಳಂಬ ಮಾಡಿದರು. ಏಕೆಂದರೆ ಅವುಗಳನ್ನು ಬಳಸಲು ಅವರಿಗೇ ಬರುತ್ತಿರಲಿಲ್ಲ. ಅವರು ಜೀವನ ಪೂರ್ತಿ ಚಿಕ್ಕ ಹುಡುಗನಾಗಿಯೇ ಇರುತ್ತಾರೆ’ ಎಂದು ಯೋಗಿ ತಿರುಗೇಟು ನೀಡಿದ್ದಾರೆ.

‘ನನ್ನನ್ನು ಅವರು ಬಾಬಾ ಸಿಎಂ ಎಂದು ಕರೆದಿದ್ದಾರೆ. ಅದು ಅವರ ಸಂಸ್ಕೃತಿ ಮತ್ತು ಸಂಸ್ಕಾರವನ್ನು ತೋರಿಸುತ್ತದೆ’ ಎಂದು ಅವರು ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT