ಶುಕ್ರವಾರ, ಡಿಸೆಂಬರ್ 9, 2022
21 °C
‘ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿ 2022’ ಪ್ರಶಸ್ತಿ ಪ್ರಕಟ

ಸ್ವಚ್ಛತಾ ಸರ್ವೇಕ್ಷಣೆ: ಇಂದೋರ್‌ ಸ್ವಚ್ಛ ನಗರ, ಮಧ್ಯಪ್ರದೇಶ ಸ್ವಚ್ಛ ರಾಜ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರ ಸರ್ಕಾರದ ವಾರ್ಷಿಕ ಸ್ವಚ್ಛತಾ ಸರ್ವೇಕ್ಷಣೆಯ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ದೇಶದ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಮಧ್ಯಪ್ರದೇಶ ಇಂದೋರ್‌ ಸತತ ಆರನೇ ಬಾರಿಗೆ ಪಾತ್ರವಾಗಿದೆ. ನಂತರದ ಎರಡು ಸ್ಥಾನಗಳಲ್ಲಿ ಅನುಕ್ರಮವಾಗಿ ಗುಜರಾತ್‌ನ ಸೂರತ್‌ ಮತ್ತು ಮಹಾರಾಷ್ಟ್ರದ ನವಿ ಮುಂಬೈ ನಗರಗಳು ಇವೆ.

‘ಸ್ವಚ್ಛ ಸರ್ವೇಕ್ಷಣೆ ಪ್ರಶಸ್ತಿ 2022’ರ ಉತ್ತಮ ಪ್ರದರ್ಶನ ತೋರಿದ ರಾಜ್ಯಗಳ ವಿಭಾಗದಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ಛತ್ತೀಸಗಢ ಮತ್ತು ಮಹಾರಾಷ್ಟ್ರ ರಾಜ್ಯಗಳು ಇವೆ. 

100ಕ್ಕಿಂತ ಕಡಿಮೆ ಸ್ಥಳೀಯ ಸಂಸ್ಥೆಗಳನ್ನು ಹೊಂದಿರುವ ಸ್ವಚ್ಛ ರಾಜ್ಯಗಳ ಪಟ್ಟಿಯಲ್ಲಿ ತ್ರಿಪುರಾ ಪ್ರಥಮ ಸ್ಥಾನ ಪಡೆದಿದೆ. 

1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಮಹಾರಾಷ್ಟ್ರದ ಪಂಚಗಣಿ ಮೊದಲ ಸ್ಥಾನ ಪಡೆದರೆ, ನಂತರದ ಸ್ಥಾನವನ್ನು ಛತ್ತೀಸಗಢದ ಪಟಾನ್‌ ಪಡೆದಿದೆ. ಗಂಗಾ ತೀರದ ಸ್ವಚ್ಛನಗರ ಎಂಬ ಹೆಗ್ಗಳಿಕೆಗೆ ಹರಿದ್ವಾರ ಪಾತ್ರವಾಗಿದೆ. 

ಪ್ರಶಸ್ತಿ ಪ್ರದಾನ: ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವ ಹರ್ದೀಪ್‌ ಸಿಂಗ್‌ ಪುರಿ ಅವರು ಈ ವೇಳೆ ಉಪಸ್ಥಿತರಿದ್ದರು.

ಮುರ್ಮು ಅವರಿಂದ 6 ಪ್ರಶಸ್ತಿಗಳ ಪ್ರದಾನ 

ಸ್ವಚ್ಛತೆಗೆ ಸಂಬಂಧಿಸಿದ ಆರು ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವಚ್ಛ ಭಾರತ ದಿವಸದ ಅಂಗವಾಗಿ ಭಾನುವಾರ ಪ್ರದಾನ ಮಾಡಲಿದ್ದಾರೆ. 

ಗಾಂಧಿ ಜಯಂತಿಯಂದೇ ಸ್ವಚ್ಛ ಭಾರತ ದಿವಸ ಆಚರಣೆ ಮಾಡಲಾಗುತ್ತದೆ. ಸ್ವಚ್ಛ ಸರ್ವೇಕ್ಷಣೆ ಗ್ರಾಮೀಣ–2022, ಸ್ವಚ್ಛತಾ ಹಿ ಸೇವಾ, ಸುಜ್ಲಮ್‌ 1.0 ಮತ್ತು 2.0, ಜಲ್‌ ಜೀವನ ಮಿಶನ್‌ ಕಾರ್ಯನಿರ್ವಹಣೆ ಮೌಲ್ಯಮಾಪನ, ಹರ್ ಘರ್‌ ಜಲ್‌ ಪ್ರಮಾಣೀಕರಣ, ಸ್ಟಾರ್ಟ್‌ ಅಪ್‌ ಗ್ರ್ಯಾಂಡ್‌ ಚಾಲೆಂಜ್‌ ಪ್ರಶಸ್ತಿಗಳನ್ನು ಮುರ್ಮು ಅವರು ಪ್ರದಾನ ಮಾಡಲಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು