ಮಂಗಳವಾರ, ಮಾರ್ಚ್ 21, 2023
28 °C
ನಿಗಾ ವಹಿಸುವಂತೆ ಕಾವೇರಿ ಪ್ರಾಧಿಕಾರಕ್ಕೆ ನಿರ್ದೇಶನ– ಸುಪ್ರೀಂ ಕೋರ್ಟ್‌ಗೆ ಅರ್ಜಿ

ತ್ಯಾಜ್ಯ ನೀರು ಸಂಸ್ಕರಿಸಿ ಬಳಕೆ ತಮಿಳುನಾಡು ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬೆಂಗಳೂರಿನಲ್ಲಿ ಕಾವೇರಿ ನೀರು ಬಳಕೆ ಪ್ರಮಾಣ ಹಾಗೂ ತ್ಯಾಜ್ಯ ನೀರು ಸಂಸ್ಕರಿಸಿ ಜಲಕಾಯಗಳ ಪುನರುಜ್ಜೀವನಕ್ಕೆ ಬಳಸುತ್ತಿರುವ ಬಗ್ಗೆ ಆಕ್ಷೇಪ ಎತ್ತಿರುವ ತಮಿಳುನಾಡು ಸರ್ಕಾರವು, ಸುಪ್ರೀಂ ಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದೆ. 

‘ಬೆಂಗಳೂರು ಜನರ ದಾಹ ತಣಿಸಲು ಕಾವೇರಿ ನದಿಯ 24 ಟಿಎಂಸಿ ಅಡಿ ನೀರನ್ನು ಕಾವೇರಿ ನದಿ ನೀರು ನ್ಯಾಯಮಂಡಳಿ ಹಂಚಿಕೆ ಮಾಡಿ 2008ರಲ್ಲಿ ಆದೇಶ ಹೊರಡಿಸಿದೆ. ನದಿ, ಕೆರೆ ಇತ್ಯಾದಿಗಳಿಂದ ಮೇಲೆತ್ತಿದ ನೀರಿನಲ್ಲಿ ಶೇ 20ರಷ್ಟನ್ನು ಮಾತ್ರ ಗೃಹ ಬಳಕೆಗೆ ಬಳಸಲಾಗುತ್ತದೆ ಹಾಗೂ ಉಳಿದ ಶೇ 80ರಷ್ಟು ನೀರು ಜಲಾನಯನ ಪ್ರದೇಶಕ್ಕೆ ವಾಪಸು ಬರುತ್ತದೆ ಎಂದು ನ್ಯಾಯಮಂಡಳಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಆ ಪ್ರಕಾರ, 18 ಟಿಎಂಸಿ ಅಡಿಯಷ್ಟು ನೀರು ಕಾವೇರಿ ಜಲಾನಯನ ಪ್ರದೇಶಕ್ಕೆ ವಾಪಸ್‌ ಬರಬೇಕು. ಆದರೆ, ಜಲಮಂಡಳಿ ಹಲವು ಯೋಜನೆಗಳ ಮೂಲಕ ಬೇರೆಡೆಗೆ ಈ ನೀರು ಹರಿಸುತ್ತಿದೆ’ ಎಂದು ಆಕ್ಷೇಪಿಸಲಾಗಿದೆ. 

‘ಜಲಮಂಡಳಿಯು ಪೆನ್ನಾರ್ ನದಿ ಕಣಿವೆಯಲ್ಲಿರುವ ಎಲೆ ಮಲ್ಲಪ್ಪ ಚೆಟ್ಟಿ ಕೆರೆಗೆ 22 ಎಂಎಲ್‌ಡಿ (ದಶಲಕ್ಷ ಲೀಟರ್‌) ಸಂಸ್ಕರಿಸಿದ ತ್ಯಾಜ್ಯ ನೀರನ್ನು ಹರಿಸುತ್ತಿದೆ. ಬಳಿಕ ಅದನ್ನು ಹೊಸಕೋಟೆ ಕೆರೆಗೆ ಹರಿಸಲಾಗುತ್ತಿದೆ. ಜಲಮಂಡಳಿಯ ಅಂಕಿ ಅಂಶಗಳ ಪ್ರಕಾರ, 660 ದಶಲಕ್ಷ ಲೀಟರ್ (ವಾರ್ಷಿಕ 8.75 ಟಿಎಂಸಿ ಅಡಿ) ಸಂಸ್ಕರಿಸಿದ ತ್ಯಾಜ್ಯ ನೀರು ದಕ್ಷಿಣ ಪೆನ್ನಾರ್ ನದಿ ಜಲಾನಯನ ಪ್ರದೇಶಕ್ಕೆ ಹರಿದು ಹೋಗುತ್ತಿದೆ. ಬಳಿಕ ಇದು 350 ಎಕರೆ ಭೂಮಿಗೆ ನೀರು ಉಣಿಸುತ್ತಿದೆ. ಬೆಂಗಳೂರಿನ ತ್ಯಾಜ್ಯ ನೀರು ಪೆನ್ನಾರ್ ಜಲಾನಯನ ಪ್ರದೇಶದಲ್ಲಿರುವ ವರ್ತೂರು ಕೆರೆಗೆ ಬರುತ್ತಿದೆ. ಅದನ್ನು ಸಂಸ್ಕರಿಸಿ 350 ಎಕರೆಗೆ ಹರಿಸಲಾಗುತ್ತಿದೆ. ಬೆಳ್ಳಂದೂರು ಕೆರೆ ನೀರನ್ನು ಸಂಸ್ಕರಿಸಿ 126 ಜಲಕಾಯ ಭರ್ತಿ ಮಾಡಲಾಗುತ್ತಿದೆ’ ಎಂದಿದೆ. 

ಕುಡಿಯುವ ಉದ್ದೇಶಕ್ಕಾಗಿ ಬೆಂಗಳೂರಿಗೆ ಪ್ರಸ್ತುತ 18 ಟಿಎಂಸಿ ಅಡಿ ನೀರು ಪೂರೈಕೆ ಆಗುತ್ತಿದೆ. ಅದರಲ್ಲಿ 12 ಟಿಎಂಸಿ ಅಡಿ ನೀರನ್ನು ಕಾವೇರಿ ಜಲಾನಯನ ಪ್ರದೇಶದಿಂದ ಹೊರಗಿರುವ ಜನರು ಬಳಸುತ್ತಿದ್ದಾರೆ. ಜತೆಗೆ, ಮಾರ್ಕಾಂಡೇಯ ನದಿ ಯೋಜನೆ, ಅಂತರ್ಜಲ ಮರುಪೂರಣ, ಕೆರೆಗಳ ತುಂಬಿಸುವ ಯೋಜನೆಗಳಿಗೆ ಸಹ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಬಳಸಲಾಗುತ್ತಿದೆ. ಈ ಮೂಲಕ ಕಾವೇರಿ ನ್ಯಾಯಾಧೀಕರಣದ ಆದೇಶಗಳನ್ನು ಕರ್ನಾಟಕ ಸರ್ಕಾರ ಉಲ್ಲಂಘಿಸಿದೆ ಎಂದು ದೂರಲಾಗಿದೆ. 

‘ಬೆಂಗಳೂರಿನ ತ್ಯಾಜ್ಯ ನೀರು (ನಗರಕ್ಕೆ ಪೂರೈಕೆಯಾದ ಕಾವೇರಿ ನೀರಿನಲ್ಲಿ ಶೇ 80ರಷ್ಟು) ಸಹ ಕಾವೇರಿ ಜಲಾನಯನ ಪ್ರದೇಶಕ್ಕೆ ಬರಬೇಕು. ಈ ನೀರು ಯಾವುದೇ ಕಾರಣಕ್ಕೂ ಪೆನ್ನಾರ್ ಜಲಾನಯನ ಪ್ರದೇಶಕ್ಕೆ ಹೋಗದಂತೆ ತಡೆಯಬೇಕು. ಈ ಬಗ್ಗೆ ಆದೇಶ ನೀಡಬೇಕು’ ಎಂದು ಮನವಿ ಮಾಡಿದೆ. 

‘ಬೆಂಗಳೂರಿಗೆ ಪೂರೈಕೆಯಾಗುತ್ತಿರುವ ಕಾವೇರಿ ನೀರು, ಸಂಸ್ಕರಿಸಿದ ತ್ಯಾಜ್ಯ ನೀರಿನ ಕುರಿತು ಪ್ರಾಧಿಕಾರ
ನಿಗಾ ಇಡುತ್ತಿಲ್ಲ. ಈ ಬಗ್ಗೆ ಮೇಲ್ವಿಚಾರಣೆಗೆ ನಿರ್ದೇಶನ ನೀಡಬೇಕು’ ಎಂದು ತಮಿಳುನಾಡು ಸರ್ಕಾರ ಕೋರಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು