ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರ ಮರ ಉರುಳಿಸಿದ ‘ನಿವಾರ್’‌: ತಮಿಳುನಾಡಿನಲ್ಲಿ ಮೂವರು ಸಾವು

ಭಾರಿ ಅನಾಹುತ ಸೃಷ್ಟಿಸಿ ಮರೆಯಾದ ಚಂಡಮಾರುತ:
Last Updated 26 ನವೆಂಬರ್ 2020, 19:39 IST
ಅಕ್ಷರ ಗಾತ್ರ

ಚೆನ್ನೈ:ಅತ್ಯಂತ ತೀವ್ರ ಚಂಡಮಾರುತ ‘ನಿವಾರ್‌’ ಗುರುವಾರ ಬೆಳಿಗ್ಗಿನ ಜಾವ ಪುದುಚೇರಿ ಸಮೀಪ ಭೂ ‍‍ಪ್ರದೇಶವನ್ನು ಪ್ರವೇಶಿಸಿತು. ಚಂಡಮಾರುತವು ಪುದುಚೇರಿ ಮತ್ತು ತಮಿಳುನಾಡಿನಲ್ಲಿ ಅನಾಹುತಕ್ಕೆ ಕಾರಣವಾಗಿದೆ. ಕನಿಷ್ಠ ಮೂವರು ಮೃತಪಟ್ಟಿದ್ದಾರೆ. ಸಾವಿರಕ್ಕೂ ಹೆಚ್ಚು ಮರಗಳು ನೆಲಕ್ಕೆ ಉರುಳಿವೆ. ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಅಪಾರ ಪ‍್ರಮಾಣದಲ್ಲಿ ಬೆಳೆ ಹಾನಿ ಉಂಟಾಗಿದೆ.

ಭೂ ಪ್ರದೇಶಕ್ಕೆ ಅಪ್ಪಳಿಸಿದ ಬಳಿಕ ‘ನಿವಾರ್‌’ ತನ್ನ ತೀವ್ರತೆ ಕಳೆದುಕೊಂಡು, ವಾಯುಭಾರ ಕುಸಿತವಾಗಿ ಪರಿವರ್ತನೆ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮರ ಉರುಳಿ ಮತ್ತು ಗೋಡೆ ಕುಸಿದು ಮಹಿಳೆ ಸೇರಿದಂತೆ ಮೂವರು ತಮಿಳುನಾಡಿನಲ್ಲಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 1,086 ಮರಗಳು ನೆಲಕ್ಕೆ ಬಿದ್ದಿವೆ. ಅವುಗಳನ್ನು ತೆರವು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮರಗಳು ವಿದ್ಯುತ್‌ ತಂತಿಗಳ ಮೇಲೆ ಬಿದ್ದು ವಿದ್ಯುತ್‌ ಸರಬರಾಜಿಗೆ ಅಡಚಣೆ ಉಂಟಾಗಿದೆ. ಕೆಲವೆಡೆ ಇಂಟರ್‌ನೆಟ್‌ ಸಂಪರ್ಕವೂ ಕಡಿತಗೊಂಡಿದೆ.

‘ಚಂಡಮಾರುತದಿಂದಾಗಿ ಇಲ್ಲಿ ಜೀವ ಹಾನಿ ಆಗಿಲ್ಲ. ₹400 ಕೋಟಿ ನಷ್ಟ ಆಗಿರಬಹುದು ಎಂಬುದು ಪ್ರಾಥಮಿಕ ಅಂದಾಜು’ ಎಂದು ಪುದುಚೇರಿ ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ತಿಳಿಸಿದ್ದಾರೆ.

ಆಂಧ್ರದಲ್ಲಿ ಮಳೆ:‘ನಿವಾರ್‌’ ಪರಿಣಾಮವಾಗಿ ಆಂಧ್ರ ಪ್ರದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಕೆಲವೆಡೆ 30 ಸೆಂ. ಮೀ.ನಷ್ಟು ಮಳೆ ಬಿದ್ದಿದೆ. ಚಿತ್ತೂರು ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಇನ್ನೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ನೆಲ್ಲೂರು, ಚಿತ್ತೂರು, ಕಡಪ, ಕೃಷ್ಣಾ, ಪ್ರಕಾಶಂ ಮತ್ತು ಪೂರ್ವ ಗೋದಾವರಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಅನಂತಪುರ, ಕರ್ನೂಲು, ಗುಂಟೂರು ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿಯೂ ಮಳೆ ಸುರಿದಿದೆ.

ಮತ್ತೆ ಮಳೆ ಸಾಧ್ಯತೆ
ಭಾನುವಾರದಿಂದ ಮತ್ತೊಂದು ಸುತ್ತಿನ ಭಾರಿ ಮಳೆ ಎದುರಿಸಲು ತಮಿಳುನಾಡು ಸಜ್ಜಾಗಬೇಕಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಾಣಿಸಿಕೊಂಡಿದ್ದು ಭಾನುವಾರದಿಂದ ಭಾರಿ ಮಳೆ ಸುರಿಯಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ವಾಯುಭಾರ ಕುಸಿತವು ಚಂಡಮಾರುತವಾಗಿ ಪರಿವರ್ತನೆ ಆಗಲಿದೆಯೇ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಇಲಾಖೆ ತಿಳಿಸಿದೆ.

ಅಕ್ಟೋಬರ್‌–ಡಿಸೆಂಬರ್‌ ಅವಧಿಯಲ್ಲಿ ಬಂಗಾಳ ಕೊಲ್ಲಿಯಲ್ಲಿ ಆಗಾಗ ಚಂಡಮಾರುತ ಸೃಷ್ಟಿಯಾಗುತ್ತದೆ. ಇದೇ ಅವಧಿಯಲ್ಲಿ ತಮಿಳುನಾಡು, ಪುದುಚೇರಿ ಮತ್ತು ಕೇರಳ, ಆಂಧ್ರ ಪ್ರದೇಶ, ಕರ್ನಾಟಕದ ಕೆಲವು ಭಾಗಗಳಲ್ಲಿ ಹಿಂಗಾರು ಮಳೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT