ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನಾವ್‌: ಮೇವು ತರಲು ಹೋದ ಇಬ್ಬರು ದಲಿತ ಹುಡುಗಿಯರ ಸಾವು, ಒಬ್ಬಳ ಸ್ಥಿತಿ ಗಂಭೀರ

ಉನ್ನಾವ್‌ನಲ್ಲಿ ಮತ್ತೊಂದು ದುರಂತ; ಸಿಬಿಐ ತನಿಖೆಗೆ ಕುಟುಂಬ ಆಗ್ರಹ
Last Updated 19 ಫೆಬ್ರುವರಿ 2021, 5:49 IST
ಅಕ್ಷರ ಗಾತ್ರ

ಲಖನೌ: ದನಕರುಗಳಿಗೆ ಹಸಿರು ಮೇವು ತರಲು ಅರಣ್ಯಕ್ಕೆ ಹೋಗಿದ್ದ ಮೂವರು ಅಪ್ರಾಪ್ತ ದಲಿತ ಬಾಲಕಿಯರಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದು, ಮತ್ತೊಬ್ಬ ಬಾಲಕಿ ಅಸ್ವಸ್ಥಳಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಘಟನೆ ಉತ್ತರಪ್ರದೇಶದ ಉನ್ನಾವ್‌ ಜಿಲ್ಲೆಯ ಬಾಬುರಾಹಾ ಹಳ್ಳಿಯಲ್ಲಿ ನಡೆದಿದೆ.

ಬಾಲಕಿಯರ ಕುಟುಂಬದ ಸದಸ್ಯರ ರೋದನ ಮುಗಿಲುಮುಟ್ಟಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಸಂತ್ರಸ್ತ ಕುಟುಂಬ ಒತ್ತಾಯಿಸಿದೆ. ಗ್ರಾಮಸ್ಥರು ಕೂಡ ಪ್ರತಿಭಟನೆ ನಡೆಸಿ, ಕುಟುಂಬದವರ ಬೇಡಿಕೆಯನ್ನು ಬೆಂಬಲಿಸಿದ್ದಾರೆ.

ಈ ಮೂವರು ಸೋದರಿಯರು 13, 16 ಹಾಗೂ 17 ವರ್ಷ ವಯೋಮಾನದವರು. ಇಬ್ಬರು ಸಹೋದರಿಯರ ಶವಗಳ ಬಳಿಯೇ ಮತ್ತೊಬ್ಬ ಬಾಲಕಿಯು ಅಸ್ವಸ್ಥಳಾಗಿ ಬಿದ್ದಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಈ ಘಟನೆಯ ನಂತರ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಸಂತ್ರಸ್ತ ಕುಟುಂಬ ಸದಸ್ಯರನ್ನು ಅವರ ಮನೆಯಿಂದ ಹೊರಬರದಂತೆ ತಡೆಯಲಾಗಿದೆ. ಗ್ರಾಮಕ್ಕೆ ಮಾಧ್ಯಮ ಪ್ರತಿನಿಧಿಗಳ ಪ್ರವೇಶವನ್ನೂ ನಿರ್ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರತ್ಯಕ್ಷ ಸಾಕ್ಷಿಗಳು ಹೇಳಿರುವ ಪ್ರಕಾರ, ಕುಟುಂಬ ಸದಸ್ಯರು ಬಾಲಕಿಯರನ್ನು ಹುಡುಕಲು ಹೋದಾಗ, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿಯರ ಕೈಗಳನ್ನು ಕಟ್ಟಿಹಾಕಲಾಗಿತ್ತು. ಅವರ ಬಾಯಲ್ಲಿ ನೊರೆ ಬರುತ್ತಿತ್ತು. ಅವರ ಬಾಯಿಗೆ ವಿಷ ಪದಾರ್ಥಗಳನ್ನು ಹಾಕಿರಬಹುದು. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಶೋಹಾ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ಈ ಮೂವರು ಬಾಲಕಿಯರು, ಬುಧವಾರ ಸಂಜೆಯಾದರೂ ಹಿಂತಿರುಗಿ ಬಾರದಿದ್ದಾಗ ಕುಟುಂಬದವರು ಅವರಿಗಾಗಿ ಹುಡುಕಾಡಿದ್ದಾರೆ. ಆಗ ಮರವೊಂದರ ಬಳಿ ಬಾಲಕಿಯರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅವರನ್ನು ತಂದಾಗ, ಅವರಲ್ಲಿ 13 ಮತ್ತು 16 ವರ್ಷಗಳ ಇಬ್ಬರು ಬಾಲಕಿಯರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ. 17 ವರ್ಷದ ಬಾಲಕಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದಾಳೆ ಎಂದು ಮೂಲಗಳು ತಿಳಿಸಿವೆ.

ಸರ್ಕಾರದ ವಿರುದ್ಧ ಆಕ್ರೋಶ
ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷಗಳು, ರಾಜ್ಯದಲ್ಲಿ ಮಹಿಳೆಯರಿಗೆ ಸುರಕ್ಷತೆ ನೀಡುವಲ್ಲಿ ಯೋಗಿ ಆದಿತ್ಯನಾಥ್‌ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಿಡಿಕಾರಿವೆ.

‘ಇದು ಆಘಾತಕಾರಿ ಘಟನೆ.... ಸಂತ್ರಸ್ತ ಕುಟುಂಬವನ್ನು ಅವರ ಮನೆಯಲ್ಲಿ ಕೂಡಿಟ್ಟಿರುವ ವರದಿಗಳಿವೆ... ಗಂಭೀರ ಸ್ಥಿತಿಯಲ್ಲಿರುವ ಬಾಲಕಿಯನ್ನು ತಕ್ಷಣವೇ ದೆಹಲಿಯ ಏಮ್ಸ್‌ಗೆ ಸ್ಥಳಾಂತರಿಸಬೇಕು’ ಎಂದು ಒತ್ತಾಯಿಸಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್‌ ಮಾಡಿದ್ದಾರೆ.

‘ರಾಜ್ಯದಲ್ಲಿ ಜಂಗಲ್‌ ರಾಜ್‌ ಮೇಲುಗೈ ಸಾಧಿಸಿದೆ ಎನ್ನುವುದು ಈ ಘಟನೆಯಿಂದ ಸಾಬೀತಾಗಿದೆ’ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ವಕ್ತಾರ ಸುನಿಲ್ ಸಿಂಗ್ ಸಾಜನ್‌ ಕಿಡಿಕಾರಿದ್ದಾರೆ.

ಭೀಮ್ ಸೇನೆಯ ಅಧ್ಯಕ್ಷ ಮತ್ತು ದಲಿತ ಮುಖಂಡ ಚಂದ್ರಶೇಖರ್ ‘ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ’ ಎಂದು ದೂಷಿಸಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಉತ್ತರಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ದಲಿತ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT