ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಬ್ಬರ್ ಸ್ಟ್ಯಾಂಪ್’ ರಾಷ್ಟ್ರಪತಿಯಿಂದ ಸಂವಿಧಾನ ಉಳಿಸಲಾಗದು: ಸಿನ್ಹಾ

ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ– ವಿರೋಧಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಆರೋಪ
Last Updated 8 ಜುಲೈ 2022, 14:27 IST
ಅಕ್ಷರ ಗಾತ್ರ

ಗಾಂಧಿನಗರ: ‘ದೇಶದಲ್ಲಿ ಸಾಂವಿಧಾನಿಕ ಮೌಲ್ಯಗಳು ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳು ಅಪಾಯದಲ್ಲಿವೆ. ‘ರಬ್ಬರ್ ಸ್ಟ್ಯಾಂಪ್’ ರಾಷ್ಟ್ರಪತಿಯು ಎಂದಿಗೂ ಸಂವಿಧಾನವನ್ನು ಉಳಿಸಲು ಸಾಧ್ಯವಿಲ್ಲ’ ಎಂದು ರಾಷ್ಟ್ರಪತಿ ಚುನಾವಣೆಯ ವಿರೋಧಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಶುಕ್ರವಾರ ಹೇಳಿದ್ದಾರೆ.

ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ತಮಗೆ ಬೆಂಬಲ ಕೋರುವ ಸಲುವಾಗಿ ಗುಜರಾತ್‌ ಕಾಂಗ್ರೆಸ್ ಶಾಸಕರನ್ನು ಶುಕ್ರವಾರ ಅವರು ಭೇಟಿ ಮಾಡಿದರು.

ಬಳಿಕ ಮಾತನಾಡಿದ ಸಿನ್ಹಾ, ‘ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಯ ಅಭ್ಯರ್ಥಿ ದ್ರೌಪದಿ ಮುರ್ಮು ಮತ್ತು ತಮ್ಮ ನಡುವಿನ ಸ್ಪರ್ಧೆಯು ದೇಶದ ಮುಂದಿನ ರಾಷ್ಟ್ರಪತಿ ಯಾರು ಎಂಬುದು ಮಾತ್ರವಲ್ಲ. ಈಗ ದೊಡ್ಡ ಯುದ್ಧವಾಗಿ ಮಾರ್ಪಟ್ಟಿದೆ. ಇದು ರಾಷ್ಟ್ರಪತಿಯಾದ ಬಳಿಕ ಅವರು ಸಂವಿಧಾನವನ್ನು ಉಳಿಸಲು ತಮ್ಮ ಹಕ್ಕುಗಳನ್ನು ಬಳಸುತ್ತಾರೆಯೇ ಎಂಬುದಾಗಿದೆ. ‘ರಬ್ಬರ್ ಸ್ಟ್ಯಾಂಪ್’ ಆದ ರಾಷ್ಟ್ರಪತಿಯು ಹಾಗೆ ಮಾಡಲು ಎಂದಿಗೂ ಪ್ರಯತ್ನಿಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದು ಸಿನ್ಹಾ ಹೇಳಿದ್ದಾರೆ.

‘ಒಬ್ಬ ಬುಡಕಟ್ಟು ವ್ಯಕ್ತಿ (ಮುರ್ಮು) ದೇಶದ ಉನ್ನತ ಹುದ್ದೆ ಪಡೆಯುವುದರಿಂದ ದೇಶದಲ್ಲಿನ ಬುಡಕಟ್ಟು ಸಮುದಾಯಗಳ ಜೀವನ ಬದಲಾಗದು. ಅವರು ಯಾವ ಜಾತಿ, ಧರ್ಮದಿಂದ ಬಂದವರು ಎಂಬುದು ಮುಖ್ಯವಲ್ಲ. ಯಾರು ಯಾವ ಸಿದ್ಧಾಂತವನ್ನು ಪ್ರತಿನಿಧಿಸುತ್ತಾರೆ ಎಂಬುದು ಮುಖ್ಯ. ಅವರು (ಮುರ್ಮು) ಆರು ವರ್ಷ ಕಾಲ ಜಾರ್ಖಂಡ್‌ನ ರಾಜ್ಯಪಾಲರಾಗಿದ್ದರು. ಆದರೆ, ಅಲ್ಲಿನ ಆದಿವಾಸಿಗಳ ಜೀವನದಲ್ಲಿ ಬದಲಾವಣೆ ತರಲಿಲ್ಲ’ ಎಂದೂ ಅವರು ಆರೋಪಿಸಿದ್ದಾರೆ.

‘ಸಾಂವಿಧಾನಿಕ ಮೌಲ್ಯಗಳು, ಮಾಧ್ಯಮ ಕ್ಷೇತ್ರ ಸೇರಿದಂತೆ ಪ್ರಜಾಸತ್ತಾತ್ಮಕ ಸಂಸ್ಥೆಗಳು ಇದು ಅಪಾಯಕಾರಿ ಸಂದರ್ಭದಲ್ಲಿವೆ. ಈಗ ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. 1975ರಿಂದ 1977ರ ಅವಧಿಯಲ್ಲಿ ತುರ್ತುಪರಿಸ್ಥಿತಿ ವಿರೋಧಿಸಿ, ಹೋರಾಡಿ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಜೈಲಿಗೆ ಹೋಗಿದ್ದರು. ವಿಪರ್ಯಾಸವೆಂದರೆ ಇಂದು ಅವರದ್ದೇ ಬಿಜೆಪಿ ಪಕ್ಷ ತುರ್ತುಪರಿಸ್ಥಿತಿ ಹೇರಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT