ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶ ಚುನಾವಣೆ ಎರಡನೇ ಹಂತದ ಮತದಾನ: ಮುಸ್ಲಿಂ, ದಲಿತರು ನಿರ್ಣಾಯಕ

ಅಲ್ಪಸಂಖ್ಯಾತರ ಮತಗಳ ಮೇಲೆ ಎಸ್‌ಪಿ ಕಣ್ಣು, ಬಿಜೆಪಿಯಿಂದ ಧ್ರುವೀಕರಣ ಯತ್ನ
Last Updated 12 ಫೆಬ್ರುವರಿ 2022, 20:37 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 55 ವಿಧಾನಸಭಾ ಕ್ಷೇತ್ರಗಳಲ್ಲಿ ದಲಿತ ಮತ್ತು ಮುಸ್ಲಿಂ ಸಮದಾಯದ ಮತಗಳೇ ನಿರ್ಣಾಯಕ. 2017ರಲ್ಲಿ ಗೆದ್ದದ್ದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಉಮೇದಿನಲ್ಲಿ ಸಮಾಜವಾದಿ ಪಕ್ಷ (ಎಸ್‌‍ಪಿ) ಇದೆ. ದಲಿತ ಮತ್ತು ಮುಸ್ಲಿಂ ಸಮುದಾಯಗಳು ನಿರ್ಣಾಯಕ ಆಗಿರುವ ಕಾರಣ ಧ್ರುವೀಕರಣವು ಗೆಲುವಿಗೆ ಸಹಕಾರಿ ಆಗಬಹುದು ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಇದೆ.

ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಏರಬೇಕಿದ್ದರೆ ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಹೆಚ್ಚಿನವುಗಳನ್ನು ಗೆಲ್ಲುವುದು ಎಸ್‌ಪಿಗೆ ಅನಿವಾರ್ಯ. 2017ರಲ್ಲಿ ಈ ಭಾಗದಲ್ಲಿ ಬಿಜೆಪಿ ಪರವಾದ ಸ್ಪಷ್ಟ ಅಲೆ ಇದೆ ಎಂಬ ಭಾವನೆ ಇದ್ದರೂ 55 ಕ್ಷೇತ್ರಗಳ ಪೈಕಿ 27ರಲ್ಲಿ ಎಸ್‌ಪಿಗೆ ಗೆದ್ದಿತ್ತು. ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿದ್ದು 11 ಕ್ಷೇತ್ರಗಳಲ್ಲಿ ಮಾತ್ರ. 13 ಕ್ಷೇತ್ರಗಳಲ್ಲಿ ಬಿಎಸ್‌ಪಿ ಗೆದ್ದಿತ್ತು.

ಸಂಭಾಲ್‌, ಮೊರಾದಾಬಾದ್‌, ಸಹರನ್‌ಪುರ, ಬಿಜ್ನೋರ್‌, ರಾಂಪುರ ಸೇರಿ ಕೆಲವು ಜಿಲ್ಲೆಗಳಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಗಣನೀಯವಾಗಿದೆ. 25 ಕ್ಷೇತ್ರಗಳಲ್ಲಿ ಮುಸ್ಲಿಮರೇ ನಿರ್ಣಾಯಕ. ಈ ಭಾಗದಲ್ಲಿ ದಲಿತರ ಜನಸಂಖ್ಯೆಯೂ ಹೆಚ್ಚು. ಇಲ್ಲಿನ ಕನಿಷ್ಠ 20 ಕ್ಷೇತ್ರಗಳಲ್ಲಿ ದಲಿತರ ಮತಗಳು ನಿರ್ಣಾಯಕ.

ಯೋಗಿ ಆದಿತ್ಯನಾಥ ನೇತೃತ್ವದ ಸಚಿವ ಸಂಪುಟದ ನಾಲ್ವರು ಸಚಿವರು ಕಣದಲ್ಲಿದ್ದಾರೆ. ಎಸ್‌ಪಿಯ ಮುಖಂಡ ಆಜಂ ಖಾನ್‌ ಅವರ ಭವಿಷ್ಯವೂ ಎರಡನೇ ಹಂತದಲ್ಲಿ ನಿರ್ಧಾರ ಆಗಲಿದೆ. ಭೂಕಬಳಿಕೆ ಮತ್ತು ಇತರ ಆರೋಪಗಳಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಆಜಂ ಖಾನ್‌ ಅವರು ರಾಂಪುರದಿಂದ ಸ್ಪರ್ಧಿಸಿದ್ದಾರೆ.

ಕೇಂದ್ರವು ಜಾರಿಗೆ ತಂದಿದ್ದ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಪ್ರತಿಭಟನೆಗೆ ಈ ಭಾಗದಲ್ಲಿ ಭಾರಿ ಬೆಂಬಲ ವ್ಯಕ್ತವಾಗಿತ್ತು. ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಹಲವೆಡೆ ಪ್ರತಿಭಟನೆಗಳೂ ನಡೆದಿವೆ. ‘ಈ ಬಾರಿ ಯಾವುದೇ ಅಲೆ ಕಾಣಿಸುತ್ತಿಲ್ಲ. ರೈತರ ಆಕ್ರೋಶ ಮತ್ತು ಇತರ ಕಾರಣಗಳಿಂದಾಗಿ ಬಿಜೆಪಿಗೆ ಈ ಬಾರಿ ಕಷ್ಟವಾಗಬಹುದು. ಮುಸ್ಲಿಂ ಮತಗಳು ವಿಭಜನೆ ಆಗದೇ ಇದ್ದರೆ ಎಸ್‌ಪಿಗೆ ಅನುಕೂಲ ಆಗಬಹುದು’ ಎಂದು ಬಿಜ್ನೋರ್‌ನ ಪತ್ರಕರ್ತರೊಬ್ಬರು ವಿಶ್ಲೇಷಿಸಿದ್ದಾರೆ.

ಕಾಣಿಸದ ಕೋಮು ಧ್ರುವೀಕರಣ

ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ಜಿಲ್ಲೆಗಳು 2013ರಲ್ಲಿ ಕೋಮು ಗಲಭೆ ನಡೆದ ಮುಜಫ್ಫರ್‌ನಗರದ ಸಮೀಪದಲ್ಲಿವೆ. ಗಲಭೆಯಲ್ಲಿ 63 ಮಂದಿ ಹತ್ಯೆಯಾಗಿದ್ದರು ಮತ್ತು ಸಾವಿರಾರು ಮಂದಿ ನಿರಾಶ್ರಿತರಾಗಿದ್ದರು. ಈ ಗಲಭೆಯು ಕೋಮು ನೆಲೆಯಲ್ಲಿ ತೀವ್ರ ಧ್ರುವೀಕರಣಕ್ಕೆ ಕಾರಣವಾಗಿತ್ತು. ಪರಿಣಾಮವಾಗಿ ರಾಜ್ಯದ ಪಶ್ಚಿಮ ಭಾಗದಲ್ಲಿ ಬಿಜೆಪಿಗೆ ಭಾರಿ ಗೆಲುವು ದಕ್ಕಿತ್ತು.

ಈ ಬಾರಿ ಅಂತಹ ಧ್ರುವೀಕರಣ ಕಾಣಿಸುತ್ತಿಲ್ಲ. ಹಾಗಾಗಿಯೇ, 2017ರಲ್ಲಿ ಗೆದ್ದ ಕ್ಷೇತ್ರಗಳನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ದೊಡ್ಡ ಸವಾಲಾಗಿದೆ. ಬಿಜೆಪಿಯ ಧ್ರುವೀಕರಣ ಯತ್ನ ಎದ್ದು ಕಾಣುತ್ತಿದೆ. ಬಿಜೆಪಿಯ ಪ್ರಮುಖ ಪ್ರಚಾರಕ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮ್ಮ ಪ್ರಚಾರ ರ‍್ಯಾಲಿಗಳಲ್ಲಿ ಮುಜಫ್ಫರ್‌ನಗರ ಕೋಮು ಗಲಭೆಯನ್ನು ಪದೇ ಪದೇ ಉಲ್ಲೇಖಿಸಿದ್ದಾರೆ. ಅಧಿಕಾರಕ್ಕೆ ಬಂದರೆ, ರಾಜ್ಯವನ್ನು ಗಲಭೆ ಮುಕ್ತ ಮಾಡುವುದಾಗಿ ಬಿಜೆಪಿ ಭರವಸೆ ಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT