ಮಂಗಳವಾರ, ಮೇ 24, 2022
26 °C
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: ಸಮಾಜವಾದಿ ಪಕ್ಷದತ್ತ ಸರಿದ ಮೌರ್ಯ, ಚೌಹಾಣ್‌, ರಾಜ್‌ಭರ್‌

UP Elections: ಒಬಿಸಿ ನಾಯಕರ ನಿರ್ಗಮನ- ಬಿಜೆಪಿಗೆ ಕಳವಳ

ಸಂಜಯ ಪಾಂಡೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸಂಪುಟದಲ್ಲಿ ಸಚಿವರಾಗಿದ್ದ ಸ್ವಾಮಿ ಪ್ರಸಾದ್‌ ಮೌರ್ಯ ಮತ್ತು ದಾರಾ ಸಿಂಗ್‌ ಚೌಹಾಣ್‌ ಹಾಗೂ ಬಿಜೆಪಿಯ ಜತೆಗೆ ಮೈತ್ರಿ ಮಾಡಿಕೊಂಡಿದ್ದ ಸುಹೇಲ್‌ದೇವ್‌ ಭಾರತೀಯ ಸಮಾಜ ಪಕ್ಷದ (ಎಸ್‌ಬಿಎಸ್‌ಪಿ) ಮುಖ್ಯಸ್ಥ ಓಂ ಪ್ರಕಾಶ್‌ ರಾಜ್‌ಭರ್‌ ಅವರು ಈಗ ಸಮಾಜವಾದಿ ಪಕ್ಷದ (ಎಸ್‌ಪಿ) ಜತೆಗೆ ಇದ್ದಾರೆ. ಇವರೆಲ್ಲರೂ ಇತರ ಹಿಂದುಳಿದ ವರ್ಗಗಳ (ಒಬಿಸಿ) ನಾಯಕರಾಗಿದ್ದರೂ ಭಿನ್ನ ಸಮುದಾಯಗಳನ್ನು ಪ್ರತಿನಿಧಿಸುವವರು. ಪೂರ್ವಾಂಚಲದಲ್ಲಿ (ಉತ್ತರ ಪ್ರದೇಶದ ಪೂರ್ವ ಭಾಗ) ಒಬಿಸಿ ಮತಗಳೇ ನಿರ್ಣಾಯಕ. ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕಿದ್ದರೆ ಪೂರ್ವಾಂಚಲದಲ್ಲಿ ಗಣನೀಯ ಕ್ಷೇತ್ರಗಳನ್ನು ಗೆಲ್ಲಲೇಬೇಕು. 

ಈ ಕಾರಣಕ್ಕಾಗಿಯೇ ಬಿಜೆಪಿ ಪಾಳಯದಿಂದ ಇವರೆಲ್ಲರ ನಿರ್ಗಮನ ಬಿಜೆಪಿಯ ಕಳವಳಕ್ಕೆ ಕಾರಣವಾಗಿದೆ. 2017ರ ವಿಧಾನಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಈ ಪ್ರಮುಖ ನಾಯಕರು ಇಲ್ಲದಿರುವುದು ಈ ಭಾಗದಲ್ಲಿ ಬಿಜೆಪಿ ಗೆಲುವಿನ ಸಾಧ್ಯತೆಯನ್ನು ಕುಗ್ಗಿಸಿದೆ. 

2017ರ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದ 164 ಕ್ಷೇತ್ರಗಳ ಪೈಕಿ 115ರಲ್ಲಿ ಬಿಜೆಪಿ ಗೆದ್ದಿತ್ತು. ಅಪ್ನಾ ದಳ ಮತ್ತು ಎಸ್‌ಬಿಎಸ್‌ಪಿ ಜತೆಗಿನ ಮೈತ್ರಿ ಇದಕ್ಕೆ ಮುಖ್ಯ ಕಾರಣ. ಬಿಜೆಪಿಯ ಮಿತ್ರ ಪಕ್ಷಗಳು 16 ಕ್ಷೇತ್ರಗಳಲ್ಲಿ ಗೆದ್ದಿದ್ದವು. ಎಸ್‌ಪಿ 17 ಮತ್ತು ಬಿಎಸ್‌ಪಿ 14 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದವು. ಕಾಂಗ್ರೆಸ್‌ಗೆ ಎರಡು ಕ್ಷೇತ್ರಗಳು ಮಾತ್ರ ದಕ್ಕಿದ್ದವು. 

ಪೂರ್ವಾಂಚಲದ ಜಾತಿ ಲೆಕ್ಕಾಚಾರದತ್ತ ಕಣ್ಣಾಡಿಸಿದರೆ ರಾಜ್‌ಭರ್‌, ಮೌರ್ಯ ಮತ್ತು ಚೌಹಾಣ್‌ ಸಮುದಾಯಗಳು ಎಷ್ಟು ಮುಖ್ಯ ಎಂಬುದು ಅರ್ಥವಾಗುತ್ತದೆ. 

ಐದು ಬಾರಿ ಶಾಸಕರಾಗಿರುವ ಸ್ವಾಮಿ ಪ್ರಸಾದ್ ಮೌರ್ಯ ಅವರು ಒಬಿಸಿ ಸಮುದಾಯದ ಅತ್ಯಂತ ಪ‍್ರಭಾವಿ ನಾಯಕ ಎಂದು ಗುರುತಿಸಿಕೊಂಡವರು. ಪೂರ್ವಾಂಚಲದಲ್ಲಿ ಮಾತ್ರವಲ್ಲದೆ, ಕುಶಿನಗರ, ರಾಯಬರೇಲಿ, ಬದಾಯೂಂ ಮತ್ತು ಶಾಜಹಾನ್‌ಪುರ ಸೇರಿದಂತೆ ರಾಜ್ಯದ ಮಧ್ಯ ಭಾಗದಲ್ಲಿಯೂ ಅವರ ಪ್ರಭಾವ ಇದೆ. 

ಮೌರ್ಯ ಅವರಿಗೆ ಬಿಜೆಪಿಯಲ್ಲಿ ಎಷ್ಟು ಮಹತ್ವವಿತ್ತು ಎಂದರೆ, ಪ್ರಧಾನಿ ನರೇಂದ್ರ ಮೋದಿ ಅವರು ಕುಶಿನಗರ ವಿಮಾನ ನಿಲ್ದಾಣವನ್ನು ಕೆಲ ದಿನಗಳ ಹಿಂದೆ ಉದ್ಘಾಟನೆ ಮಾಡಿದ ಕಾರ್ಯಕ್ರಮದಲ್ಲಿ ಅವರಿಗೆ ವೇದಿಕೆಯಲ್ಲಿ ಸ್ಥಾನ ನೀಡಲಾಗಿತ್ತು. ಪೂರ್ವ ಮತ್ತು ಮಧ್ಯ ಭಾಗದ ಜಿಲ್ಲೆಗಳಲ್ಲಿ ಮೌರ್ಯ ಸಮುದಾಯದ ಜನಸಂಖ್ಯೆ ಗಣನೀಯವಾಗಿದೆ. 

ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ರಾಜ್‌ಭರ್‌ ಸಮುದಾಯದ ಪ್ರಮಾಣ ಶೇ ಮೂರರಿಂದ ನಾಲ್ಕು ಮಾತ್ರ. ಆದರೆ, ಗಾಜಿಪುರ, ಬಲಿಯಾ, ಮೌ, ವಾರಾಣಸಿ, ಚಂದೌಲಿ, ಆಜಂಗಡ, ಅಂಬೇಡ್ಕರ್‌ ನಗರ, ಬಹರೈಚ್‌ ಮತ್ತು ಮಹಾರಾಜ್‌ಗಂಜ್‌ ಜಿಲ್ಲೆಗಳಲ್ಲಿ ಈ ಸಮುದಾಯದ ಜನರು ಶೇ 17ರಷ್ಟಿದ್ದಾರೆ. ಈ ಸಮುದಾಯದ ಮತಗಳು ತಪ್ಪಿದರೆ, ಬಿಜೆಪಿಯ ಗೆಲುವಿನ ಮೇಲೆ ಅದು ಪರಿಣಾಮ ಬೀರಲಿದೆ. ಆಜಂಗಡ, ಮೌ, ಗಾಜಿಪುರ ಮತ್ತು ಬಲಿಯಾ ಜಿಲ್ಲೆಗಳಲ್ಲಿ ಚೌಹಾಣ್‌ ಸಮುದಾಯದ ಜನಸಂಖ್ಯೆ ಗಣನೀಯವಾಗಿದೆ. 12ಕ್ಕೂ ಹೆಚ್ಚು ಕ್ಷೇತ್ರಗಳ ಫಲಿತಾಂಶದ ಮೇಲೆ
ಪ್ರಭಾವ ಬೀರುವ ಸಾಮರ್ಥ್ಯ ಈ ಸಮುದಾಯಕ್ಕೆ ಇದೆ. 

ನಷ್ಟ ಸರಿದೂಗಿಸುವ ಯತ್ನ

ಸ್ವಾಮಿ ಪ್ರಸಾದ್‌ ಮೌರ್ಯ, ದಾರಾ ಸಿಂಗ್‌ ಚೌಹಾಣ್‌ ಮತ್ತು ಓಂ ಪ್ರಕಾಶ್ ರಾಜ್‌ಭರ್ ಅವರ ನಿರ್ಗಮನವು ಪಕ್ಷದ ಚುನಾವಣಾ ಅವಕಾಶಗಳ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂದು ಬಿಜೆಪಿಯ ಮುಖಂಡರು ಬಹಿರಂಗವಾಗಿ ಹೇಳುತ್ತಿದ್ದಾರೆ. ಆದರೆ, ಪಕ್ಷದ ಮೂಲಗಳು ಬೇರೆಯದೇ ಚಿತ್ರಣ ನೀಡುತ್ತವೆ. 2017ರ ಚುನಾವಣೆಯಲ್ಲಿ ಬಿಜೆಪಿಗೆ ಶೇ 40ರಷ್ಟು ಮತಗಳು ಸಿಕ್ಕಿದ್ದವು. ಎಸ್‌ಪಿಯ ಮತ ಪ್ರಮಾಣ ಶೇ 20ರಷ್ಟಿತ್ತು. ಪೂರ್ವಾಂಚಲದಲ್ಲಿ ಬಿಜೆಪಿಗೆ ಒಬಿಸಿಯ ಶೇ 44ರಷ್ಟು ಮತಗಳು ಸಿಕ್ಕಿದ್ದವು. ಒಬಿಸಿ ಮತಗಳಲ್ಲಿ ಗಣನೀಯವಾದ ಕುಸಿತವು ಬಿಜೆಪಿಯ ಸ್ಥಾನ ಗಳಿಕೆಯ ಮೇಲೆ ಪರಿಣಾಮ ಬೀರಲಿದೆ. 

ಒಬಿಸಿ ಮಿತ್ರ ಪಕ್ಷಗಳಾದ ನಿಶಾದ್‌ ಪಾರ್ಟಿ ಮತ್ತು ಅಪ್ನಾ ದಳಕ್ಕೆ ಹೆಚ್ಚು ಕ್ಷೇತ್ರಗಳನ್ನು ಬಿಜೆಪಿ ಬಿಟ್ಟುಕೊಟ್ಟಿದೆ. ಇದು ಕೂಡ ಬಿಜೆಪಿಯ ಕಳವಳಗಳಿಗೆ ಕನ್ನಡಿ ಹಿಡಿಯುತ್ತದೆ. ‘ನಿಶಾದ್‌ ಪಾರ್ಟಿ ಮತ್ತು ಅಪ್ನಾ ದಳದ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ನಷ್ಟವನ್ನು ಸರಿದೂಗಿಸುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ’ ಎಂದು ಲಖೌನದ ರಾಜಕೀಯ ವಿಶ್ಲೇಷಕರೊಬ್ಬರು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು