ಶನಿವಾರ, ಸೆಪ್ಟೆಂಬರ್ 18, 2021
22 °C
ತೆರಿಗೆ ವಂಚನೆ ಆರೋಪ: ಆನ್‌ಲೈನ್ ನ್ಯೂಸ್‌ ಪೋರ್ಟಲ್‌ ಕಚೇರಿಗಳಲ್ಲಿ ತೆರಿಗೆ ಅಧಿಕಾರಿಗಳ ಪರಿಶೀಲನೆ

ನಾವು ಪ್ರಾಮಾಣಿಕವಾಗಿ ವ್ಯವಹರಿಸುತ್ತಿದ್ದೇವೆ: ‘ನ್ಯೂಸ್‌ಲಾಂಡ್ರಿ‘ ಸ್ಪಷ್ಟನೆ

ಪಿಟಿಐ Updated:

ಅಕ್ಷರ ಗಾತ್ರ : | |

Twitter

ನವದೆಹಲಿ(ಪಿಟಿಐ): ‘ನಾವು ಪ್ರಾಮಾಣಿಕವಾಗಿ ಮತ್ತು ಸಮಗ್ರತೆಯೊಂದಿಗೆ ವ್ಯವಹಾರ ನಡೆಸುತ್ತಿದ್ದೇವೆ. ನಮ್ಮ ಕಚೇರಿ ಪರಿಶೀಲನೆಗಾಗಿ ಬಂದ ಆದಾಯ ತೆರಿಗೆ ಅಧಿಕಾರಿಗಳಿಗೆ ಸಹಕಾರ ನೀಡುತ್ತೇವೆ‘ ಎಂದು ದಕ್ಷಿಣ ದೆಹಲಿಯಲ್ಲಿರುವ ಆನ್‌ಲೈನ್‌ ಸುದ್ದಿ ಪೋರ್ಟಲ್‌ ‘ನ್ಯೂಸ್‌ಲಾಂಡ್ರಿ‘ ಸಹ ಸಂಸ್ಥಾಪಕ ಅಭಿನಂದನ್‌ ಸೇಖ್ರಿ ಶನಿವಾರ ಟ್ವೀಟ್‌ ಮಾಡಿದ್ದಾರೆ.

ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಶುಕ್ರವಾರ ಮಧ್ಯಾಹ್ನ ದೆಹಲಿಯಲ್ಲಿರುವ ನ್ಯೂಸ್‌ಲಾಂಡ್ರಿ ಮತ್ತು ನ್ಯೂಸ್‌ ಕ್ಲಿಕ್ ಎಂಬ ಎರಡು ಆನ್‌ಲೈನ್ ಸುದ್ದಿ ಸಂಸ್ಥೆಗಳ ಕಚೇರಿಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ, ದಾಖಲೆಗಳ ಪರಿಶೀಲನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಸೇಖ್ರಿ ಅವರು ಟ್ವಿಟರ್‌ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. 

‘ನಾವು ಯಾವುದನ್ನೂ ಮುಚ್ಚಿಟ್ಟಿಲ್ಲ. ಎಲ್ಲ ವ್ಯವಹಾರಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದೇವೆ. ಯಾವುದೇ ರೀತಿಯ ಕಾನೂನು ಉಲ್ಲಂಘಿಸಿಲ್ಲ. ನಾವು ಪ್ರಾಮಾಣಿಕವಾಗಿ, ಸಮಗ್ರತೆಯಿಂದ ವ್ಯವಹಾರ ನಡೆಸುತ್ತಿದ್ದೇವೆ‘ ಎಂದು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

‘ತೆರಿಗೆ ಅಧಿಕಾರಿಗಳು ಭೇಟಿ ನೀಡಿದಾಗ, ನಮಗೆ ನಮ್ಮ ವಕೀಲರೊಂದಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಸೇಕ್ರಿ ದೂರಿದ್ದಾರೆ.

‘ಸುಮಾರು 6-7 ಜನರನ್ನು ಒಳಗೊಂಡ ತೆರಿಗೆ ಅಧಿಕಾರಿಗಳ ತಂಡವು ಶುಕ್ರವಾರ ಮಧ್ಯಾಹ್ನ 12.15ರಿಂದ ಕಚೇರಿಗೆ ಬಂದಿದ್ದರು. ಶನಿವಾರ ಮಧ್ಯಾಹ್ನ 12.40ರವರೆಗೆ ಕಚೇರಿ ಪರಿಶೀಲನೆ ಕೈಗೊಂಡಿದ್ದರು’ ಎಂದು ಸೇಖ್ರಿ ಹೇಳಿದ್ದಾರೆ.

‘ಐಟಿ ತಂಡ ನಮ್ಮ ಕಚೇರಿಯ ಆವರಣದಲ್ಲಿದ್ದ ಎಲ್ಲ ಕಂಪ್ಯೂಟರ್‌ ಉಪಕರಣಗಳನ್ನು ಶೋಧಿಸಿತು. ನನ್ನ ವೈಯಕ್ತಿಕ ಮೊಬೈಲ್, ಲ್ಯಾಪ್‌ಟಾಪ್‌ ಮತ್ತು ಕೆಲವೊಂದು ಕಚೇರಿಯ ಯಂತ್ರಗಳನ್ನು ಅವರ ಸುಪರ್ದಿಗೆ ತೆಗೆದುಕೊಂಡರು. ನಮ್ಮ ಕಂಪ್ಯೂಟರ್‌ನಲ್ಲಿದ್ದ ಎಲ್ಲ ಡೇಟಾವನ್ನು ಡೌನ್‌ಲೋಡ್ ಮಾಡಿಕೊಂಡರು‘ ಎಂದು ಸೇಖ್ರಿ ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಿದ್ದಾರೆ.

’ತೆರಿಗೆ ಅಧಿಕಾರಿಗಳು ಈ ವರ್ಷದಲ್ಲಿ ಎರಡನೇ ಬಾರಿಗೆ ನಮ್ಮ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಮೊದಲು ಜೂನ್ ತಿಂಗಳಲ್ಲಿ ಇದೇ ರೀತಿ ಶೋಧಕಾರ್ಯ ಕೈಗೊಂಡಿದ್ದರು. ಆಗ ನಮ್ಮ ಕಚೇರಿಯ ಎಲ್ಲ ಹಣಕಾಸಿನ ವ್ಯವಹಾರಗಳ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಲಾಗಿತ್ತು’ ಎಂದು ಸೇಕ್ರಿ ಹೇಳಿದ್ದಾರೆ.

‘ಕಾನೂನಿನ ಪ್ರಕಾರ ನಾವು ಎಲ್ಲ ರೀತಿಯಲ್ಲೂ ಸಹಕರಿಸುತ್ತೇವೆ. ನಾವು ಸಾರ್ವಜನಿಕ ಹಿತಾಸಕ್ತಿ ಪತ್ರಿಕೋದ್ಯಮವನ್ನು ನಡೆಸುತ್ತಿದ್ದೇವೆ. ಅದನ್ನು ಮುಂದುವರಿಸುತ್ತೇವೆ‘ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.