ಸೋಮವಾರ, ಮಾರ್ಚ್ 1, 2021
19 °C

‘ದೀದಿ–ದಾದಾ’ ನಡುವೆ ನಂದಿಗ್ರಾಮ ವಿಭಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಂದಿಗ್ರಾಮ (ಪಶ್ಚಿಮ ಬಂಗಾಳ): ನಂದಿಗ್ರಾಮದ ತೆಂಗುವಾ ಬಜಾರ್‌ ಬೀದಿಯ ಎರಡೂ ಬದಿಗಳಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಒಂದು ಕಾಲದಲ್ಲಿ ಅವರ ನಿಷ್ಠ ಮತ್ತು ಈಗಿನ ಪ್ರತಿಸ್ಪರ್ಧಿ ಸುವೇಂದು ಅಧಿಕಾರಿ ಅವರ ಬೃಹತ್‌ ಕಟೌಟ್‌ಗಳು ಮುಖಾಮುಖಿಯಾಗಿ ನಿಂತಿವೆ. ಇದು ಇಲ್ಲಿನ ರಾಜಕೀಯ ಸನ್ನಿವೇಶವನ್ನು ಸಮರ್ಥವಾಗಿ ಬಿಂಬಿಸುವ ರೂಪಕ. ಇಲ್ಲಿಂದಲೂ ವಿಧಾನಸಭೆಗೆ ಸ್ಪರ್ಧಿಸುವುದಾಗಿ ಮಮತಾ ಅವರು ಘೋಷಿಸಿದ ಬಳಿಕ ಈ ನಂದಿಗ್ರಾಮವು ರಾಷ್ಟ್ರದ ಗಮನ ಸೆಳೆದಿದೆ.

14 ವರ್ಷಗಳ ಹಿಂದೆ, ಶಕ್ತಿಶಾಲಿಯಾಗಿದ್ದ ಎಡ ರಂಗದ ಬೇರುಗಳನ್ನೇ ಈ ಅಗೋಚರ ಗ್ರಾಮ ಸಡಿಲಗೊಳಿಸಿತ್ತು. ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆಯಾಗಿ ಪರಿವರ್ತನೆ ಆಗಿತ್ತು. ದೀದಿ (ಮಮತಾ) ಮತ್ತು ದಾದಾ (ಸುವೇಂದು) ಈ ಭಾಗದ ಜನರ ನೆಚ್ಚಿನ ನಾಯಕರಾಗಿದ್ದರು. ಭೂಸ್ವಾಧೀನದ ವಿರುದ್ಧ ನಡೆದ ಚಳವಳಿಯಲ್ಲಿ ಮಮತಾ ಅವರಿಗೆ ಸುವೇಂದು ನಂಬುಗೆಯ ದಂಡನಾಯಕ ಆಗಿದ್ದರು. ಈಗ, ಈ ಪ್ರದೇಶವು ಈ ಇಬ್ಬರ ನಡುವಣ ಜಿದ್ದಾಜಿದ್ದಿಗೂ ಸಾಕ್ಷಿಯಾಗಬೇಕಾಗಿದೆ. 

ಸುವೇಂದು ಅವರು ಟಿಎಂಸಿ ತೊರೆದು ಈಗ ಬಿಜೆಪಿ ಸೇರಿದ್ದಾರೆ. ನಂದಿಗ್ರಾಮದಿಂದ ಸುವೇಂದು ಅಧಿಕಾರಿ ಅವರನ್ನು ಕಣಕ್ಕೆ ಇಳಿಸಬೇಕೇ ಎಂಬ ಬಗ್ಗೆ ಬಿಜೆಪಿ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಆದರೆ, ಮಮತಾ ಅವರು ಇಲ್ಲಿಂದ ಕಣಕ್ಕಿಳಿಯುವ ನಿರ್ಧಾರ ಪ್ರಕಟಿಸಿದ ಬಳಿಕ ಸುವೇಂದು ಅವರೂ ಇಲ್ಲಿಂದ ಸ್ಪರ್ಧಿಸುವ ಉತ್ಸಾಹ ತೋರಿದ್ದಾರೆ. ಬಿಜೆಪಿ ಸೇರುವವರೆಗೆ ಅವರು ವಿಧಾನಸಭೆಯಲ್ಲಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 

ಪಶ್ಚಿಮ ಬಂಗಾಳದ ರಾಜಕೀಯ ಬದಲಾವಣೆಯನ್ನು ತೊಟ್ಟಿಲಲ್ಲಿಟ್ಟು ಲಾಲಿ ಹಾಡಿದ್ದ ಹಲವು ಸ್ಥಳೀಯರು ಈಗ ಮೂಲೆಗುಂಪಾಗಿದ್ದಾರೆ. ಕೆಲ ತಿಂಗಳ ಹಿಂದಿನವರೆಗೆ ಇನ್ನೊಂದು ಬದಲಾವಣೆ ಬೇಕು ಎಂಬ ಭಾವವೂ ಅವರಲ್ಲಿ ಇತ್ತು. 

ಆದರೆ, ಈ ಭಾಗದ ಪ್ರಭಾವಿ ನಾಯಕ ಸುವೇಂದು ವಿರುದ್ಧ ಮಮತಾ ಸ್ಪರ್ಧಿಸಲಿದ್ದಾರೆ ಎಂಬ ಘೋಷಣೆಯು ಪೂರ್ವ ಮೇದಿನಿಪುರ ಜಿಲ್ಲೆ ಮತ್ತು ವಿಶೇಷವಾಗಿ ನಂದಿಗ್ರಾಮವನ್ನು ತುದಿಗಾಲಲ್ಲಿ ನಿಲ್ಲಿಸಿದೆ. 

‘ನಂದಿಗ್ರಾಮದ ಜನರಿಗೆ ಟಿಎಂಸಿಯ ಬಗ್ಗೆ ಅಂತಹ ಒಲವೇನೂ ಇಲ್ಲ. ನಂದಿಗ್ರಾಮಕ್ಕೆ ಮಮತಾ ಅವರು ಇತ್ತೀಚೆಗೆ ಭೇಟಿ ನೀಡಲೇ ಇಲ್ಲ ಎಂಬ ಬೇಸರ ಜನರಲ್ಲಿದೆ. ಮಮತಾ ಬಿಟ್ಟು ಬೇರೆ ಯಾರಾದರೂ ಅಲ್ಲಿ ಅಭ್ಯರ್ಥಿ ಆಗುತ್ತಿದ್ದರೆ, ಅವರು ಖಂಡಿತವಾಗಿ ಸೋಲುತ್ತಿದ್ದರು’ ಎಂದು ಸ್ಥಳೀಯರು ಹೇಳುತ್ತಾರೆ. 

ಒಂದು ವರ್ಗದ ಜನರಲ್ಲಿ ಮಮತಾ ಬಗ್ಗೆ ಮೃದು ಧೋರಣೆಯೂ ಇದೆ. ‘ಚಳವಳಿಯ ಕಷ್ಟದ ಕಾಲವನ್ನು ನಾವು ಮರೆಯಲಾಗದು, ಆ ದಿನಗಳಲ್ಲಿ ಮಮತಾ ಮತ್ತು ಸುವೇಂದು ಅವರಷ್ಟೇ ನಮ್ಮ ರಕ್ಷಣೆಗೆ ಇದ್ದರು’ ಎಂದು ಅಂದಿನ ಚಳವಳಿಯ ಭಾಗವಾಗಿದ್ದ ಅನಿಸುರ್‌ ಮಂಡಲ್‌ ಹೇಳುತ್ತಾರೆ. ಬಿಜೆಪಿ ಮುಖಂಡ ಸಾಬುಜ್‌ ಪ್ರಧಾನ್‌ ಅವರೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ತಳಮಟ್ಟದಲ್ಲಿ ಸಾಮಾಜಿಕ–ರಾಜಕೀಯ ಸಮೀಕರಣಗಳನ್ನು ಬದಲಿಸುವ ಶಕ್ತಿ ಮಮತಾ ಅವರ ಘೋಷಣೆಗೆ ಇದೆ ಎಂದೂ ಅವರು ಹೇಳುತ್ತಾರೆ.

------

ಭ್ರಮ ನಿರಸನ

‘ಭೂಸ್ವಾಧೀನ ವಿರೋಧಿ ಚಳವಳಿಯಿಂದ ನಮಗೆ ಸಿಕ್ಕಿದ್ದೇನು? ರಾಜಕೀಯದ ಆಟದಲ್ಲಿ ನಮ್ಮನ್ನು ದಾಳಗಳಾಗಿ ಬಳಸಲಾಯಿತು. ಕೆಲವು ಜನರು ದೊಡ್ಡ ಮೊತ್ತದ ಹಣ ಸಂಪಾದಿಸಿದ್ದಾರೆ. ನಾವು ಇನ್ನೂ ಬಡತನದಲ್ಲಿಯೇ ಇದ್ದೇವೆ. ಇಲ್ಲಿ ಕೈಗಾರಿಕೆಯಾದರೂ ಇದ್ದಿದ್ದರೆ ನಮಗೆ ಉದ್ಯೋಗ ಸಿಗುತ್ತಿತ್ತು. ಈಗ ನಮಗೆ ಏನೂ ಇಲ್ಲ. ನಮ್ಮ ಮಕ್ಕಳು ಬೇರೆ ರಾಜ್ಯಗಳಿಗೆ ಹೋಗಿ ಕೆಲಸ ಮಾಡುವಂತಾಗಿದೆ’ ಎನ್ನುತ್ತಾರೆ ರೈತ ಗೋಕುಲ್‌ ಜನಾ. ನಂದಿಗ್ರಾಮ ಹೋರಾಟದಲ್ಲಿ ಇವರು ಸಕ್ರಿಯ ಪಾತ್ರ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು