ಶನಿವಾರ, ಡಿಸೆಂಬರ್ 7, 2019
21 °C

ದೇಶದ ಕೊನೇ ಹಳ್ಳಿ

Published:
Updated:
Deccan Herald

ಚಾರ್ ಧಾಮ್ ಯಾತ್ರೆಯ ಪ್ರಮುಖ ಸ್ಥಳಗಳು ಯಮುನೋತ್ರಿ, ಗಂಗೋತ್ರಿ, ಕೇದಾರನಾಥ, ಬದರಿನಾಥ. ಮೂರು ಧಾಮಗಳ ದರ್ಶನ ಮಾಡಿ, ಕೊನೆಯ ತಾಣ ಬದರಿನಾಥಕ್ಕೆ ಹೋಗುವ ಮುನ್ನ, ಅಲ್ಲಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಮಾಣಾ ಹಳ್ಳಿಗೆ ಭೇಟಿ ನೀಡಿದೆವು. ಅದು ನಮ್ಮ ದೇಶದ ಕೊನೆಯ ಹಳ್ಳಿ.

ಮಾಣಾ ಸುತ್ತಲಿನ ಅನೇಕ ತಾಣಗಳು ಮಹಾಭಾರತದ ಕಥೆಯನ್ನು ಹೇಳುತ್ತವೆ. ಇದು ಉತ್ತರಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿದೆ. ನಾವು ಆ ಹಳ್ಳಿಗೆ ಹೋಗುವ ಮುನ್ನ ಒಬ್ಬ ಗೈಡ್ ಸಹಾಯ ಪಡೆದವು. ಅವರ ಜೊತೆ ಕಡಿದಾದ ರಸ್ತೆಯಲ್ಲಿ ಮೇಲೆ ಏರುತ್ತಾ ಸಾಗಿದೆವು.

ಮೊದಲ ಕಥೆ ಶುರುವಾಗಿದ್ದು, ಈ ರಸ್ತೆಯಲ್ಲಿ. ಪಾಂಡವರು ಕೊನೆಯ ಹಂತದಲ್ಲಿ ಸ್ವರ್ಗಾರೋಹಣ ಮಾಡುವ ಯತ್ನದಲ್ಲಿ ಈ ಮಾರ್ಗವಾದಲ್ಲೇ ಹೋಗುತ್ತಾರೆ. ಯಾವುದೋ ಸಮಯದಲ್ಲಿ ತಾವು ಮಾಡಿದ ಪಾಪದ ಸಲುವಾಗಿ ತಮ್ಮ ಪ್ರಾಣವನ್ನು ಈ ಹಾದಿಯಲ್ಲೇ ಕಳೆದುಕೊಳ್ಳುತ್ತಾರೆ. ಕೇವಲ ಧರ್ಮರಾಯ ಮತ್ತು ಅವನ ನಾಯಿ ಮಾತ್ರ ಸ್ವರ್ಗಕ್ಕೆ ಹೋದರು ಎಂಬ ವಿಷಯವನ್ನು ಗೈಡ್ ತನ್ನದೇ ಧಾಟಿಯಲ್ಲಿ ವಿವರಿಸುತ್ತಾ ಸಾಗಿದ.

ಅಲ್ಲಿನ ಪ್ರಮುಖ ತಾಣವಾದ ವ್ಯಾಸ ಗುಹೆ ಮತ್ತು ಗಣೇಶ ಗುಹೆಗಳನ್ನು ನೋಡಿದೆವು. ಇಲ್ಲಿ ಮಹರ್ಷಿ ವೇದವ್ಯಾಸರು ಗಣೇಶನ ಕೈಯಲ್ಲಿ ಮಹಾಭಾರತ ಬರೆಸಿದ ಪುಣ್ಯಸ್ಥಳಗಳಂತೆ. ಇವೆರಡರ ಅಂತರ ಸುಮಾರು ಐವತ್ತು ಮೀಟರ್‌ಗಳು. ಪಕ್ಕದಲ್ಲಿ ಹರಿಯುವ ಸರಸ್ವತಿ ನದಿಯ ರಭಸದ ಶಬ್ದದಿಂದ ಗಣೇಶನಿಗೆ ಬರೆಯಲು ಕಷ್ಟವಾಗುತಿತ್ತಂತೆ. ಆಗ ವ್ಯಾಸರು ಸರಸ್ವತಿಗೆ ವೇಗ ಕಮ್ಮಿಮಾಡಿಕೊ ಎಂದರೂ ಲೆಕ್ಕಿಸದಿದ್ದಾಗ ವ್ಯಾಸರು ಕೋಪಗೊಂಡು ಸರಸ್ವತಿಗೆ ‘ನೀನು ಇನ್ನು ಮುಂದೆ ಗುಪ್ತಗಾಮಿನಿಯಾಗಿ ಮೌನದಿಂದಿರು’ ಎಂದು ಶಾಪವಿತ್ತರೆಂಬ ಕಥೆ ಆ ಭಾಗದಲ್ಲಿದೆ.

‘ಭೀಮ್ ಪುಲ್’ ಎಂಬ ಜಾಗವು ಭೀಮನು ಒಂದು ದೊಡ್ಡ ಬಂಡೆಯನ್ನು ಎರಡು ಕಂದಕದ ನಡುವೆ ಸೇತುವೆಯಂತೆ ಹಾಕಿ ದ್ರೌಪದಿಗೆ ದಾಟಲು ಅನುಕೂಲ ಮಾಡಿಕೊಟ್ಟನೆಂದು ಸ್ಥಳೀಯ ಜನರು ಹೇಳುತ್ತಾರೆ. ಒಂದು ಬಂಡೆಯ ಮೇಲೆ ಎರಡು ಬೃಹತ್ತಾದ ಪಾದದ ಗುರುತನ್ನು ಭೀಮಪಾದವೆಂದು ನಮ್ಮ ಜತೆಗಿದ್ದ ಗೈಡ್ ಹೇಳಿದ.‌

ಆ ಹಳ್ಳಿಯ ನಂತರದ ಕಣಿವೆಯನ್ನು ದಾಟಿದರೆ ಚೀನಾ ದೇಶದ ಸರಹದ್ದು ಪ್ರಾರಂಭವಾಗುತ್ತದೆ. ಸುಮಾರು ಇಪ್ಪತ್ನಾಲ್ಕು ಕಿ.ಮೀ ದೂರದಲ್ಲಿ ಆ ದೇಶದ ಗಡಿ ಪ್ರಾರಂಭವಾಗುತ್ತದೆ. ಇದೆಲ್ಲಾ ನೋಡಿ ವಾಪಸಾಗುವ ಸಮಯದಲ್ಲಿ ತುಂತುರು ಮಳೆ ಪ್ರಾರಂಭವಾಯಿತು. ಅಲ್ಲೇ ಪಕ್ಕದಲ್ಲಿದ್ದ ಅಂಗಡಿಯೊಂದರ ಮೇಲೆ ‘ಈ ದೇಶದ ಕೊನೆಯ ಚಹಾ ಅಂಗಡಿ’ ಎಂದು ಕನ್ನಡದಲ್ಲಿದ್ದ ಫಲಕ ನೋಡಿ ಪುಳಕಿತರಾದೆವು. ಆ ಚುಮು ಚುಮು ಚಳಿಗೆ ಆತನು ನೀಡಿದ ಚಹಾವು ಅಮೃತ ಸಮಾನವಾಗಿತ್ತು.

ಚಿತ್ರ: ಲೇಖಕರದು

ಪ್ರತಿಕ್ರಿಯಿಸಿ (+)