‘ಕರಾಳ ದಿನಗಳನ್ನು ಕೊನೆಗೊಳಿಸಿದ ಜನಹೋರಾಟ’

ಬೆಂಗಳೂರು: ‘ಸಾಮಾನ್ಯ ಜನರ ಹೋರಾಟಕ್ಕೆ ಕೆಳಹಂತದ ನ್ಯಾಯಾಲಯಗಳು ಕೊಟ್ಟ ಪೂರಕ ತೀರ್ಪುಗಳಿಂದಾಗಿ ದೇಶ ತುರ್ತುಪರಿಸ್ಥಿತಿಯ ಕರಾಳ ದಿನಗಳಿಂದ ಹೊರಬರುವಂತಾಯಿತು’ ಎಂದು ಆರ್ಎಸ್ಎಸ್ನ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್ ಹೇಳಿದರು.
ನಗರದಲ್ಲಿ ಕಾ.ಶ್ರೀ.ನಾಗರಾಜ್ ಅವರ ‘ಛೆ ಇಂದಿರಾ ಸರ್ವಾಧಿಕಾರ (1975–1977)’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ತುರ್ತುಪರಿಸ್ಥಿತಿಯ ದಿನಗಳನ್ನು ಮೆಲುಕು ಹಾಕಿದರು.
‘ಆ 21 ತಿಂಗಳು ದೇಶದ ಇತಿಹಾಸದಲ್ಲಿ ಕರಾಳ ದಿನಗಳು. ಆಗ ಪತ್ರಿಕೆಗಳೂ ಮೌನವಾಗಿದ್ದವು. ಬುದ್ಧಿಜೀವಿಗಳೂ ಸೊಲ್ಲೆತ್ತಲಿಲ್ಲ. ಆದರೆ, ಜನಸಾಮಾನ್ಯನ ಹೋರಾಟ ಬಲವಾಗಿತ್ತು. ಕರಾಳ ದಿನಗಳನ್ನು ಕೊನೆಗಾಣಿಸುವಲ್ಲಿ ಸಂಘದ ಪಾತ್ರ ಹಿರಿದು’ ಎಂದು ಸ್ಮರಿಸಿದರು.
ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್, ‘ತುರ್ತು ಪರಿಸ್ಥಿತಿಯಲ್ಲಿ ಯಾರೋ ಹೋರಾಡಿದರು, ಇನ್ಯಾರೋ ಲಾಭ ಪಡೆದರು. ಲಾಲೂ ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಇವರೆಲ್ಲಾ ಜೆ.ಪಿ. ಚಳವಳಿಯ ಉತ್ಪನ್ನಗಳು. ಆದರೆ, ಅವರ ಇಂದಿನ ಪರಿಸ್ಥಿತಿಯನ್ನೂ ಅವಲೋಕಿಸಬೇಕು’ ಎಂದರು.
‘ಆಗಿನಂತಹದ್ದೇ ಪರಿಸ್ಥಿತಿ ಇಂದು ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ನಿರ್ಮಾಣವಾಗಿದೆ. ಇಂದಿರಾಗಾಂಧಿ ಒಂದು ರೀತಿ ಮುಗ್ದರೇ ಆಗಿದ್ದರು. ಆದರೆ, ಸುತ್ತಮುತ್ತ ಇದ್ದವರು ಅವರ ಹಾದಿತಪ್ಪಿಸಿದರು. ಇಂದಿನವರೂ ತಮ್ಮ ಸುತ್ತಮುತ್ತಲು ಇರುವವರು ಕಿವಿ ಊದುವ ಸಂದರ್ಭದಲ್ಲಿ ಎಚ್ಚರ ವಹಿಸದಿದ್ದರೆ ಅದೇ ರೀತಿಯ ಸನ್ನಿವೇಶ ಸೃಷ್ಟಿಯಾಗುವ ಅಪಾಯವಿದೆ’ ಎಂದು ಸೂಕ್ಷ್ಮವಾಗಿ ಹೇಳಿದರು.
ಕೃತಿಯ ಹೆಸರು: ಛೆ ಇಂದಿರಾ ಸರ್ವಾಧಿಕಾರ (1975–1977)
ಲೇಖಕರು: ಕಾ.ಶ್ರೀ.ನಾಗರಾಜ
ಪುಟಗಳು: 108
ಪ್ರಕಾಶಕರು: ಮನೀಶ್ ಕುಲಕರ್ಣಿ
ಬೆಲೆ: 90
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.