ಚನ್ನಸಂದ್ರದಲ್ಲಿ ಬಿಸಿ ನೀರಿನ ಈಜುಕೊಳ

7

ಚನ್ನಸಂದ್ರದಲ್ಲಿ ಬಿಸಿ ನೀರಿನ ಈಜುಕೊಳ

Published:
Updated:
Prajavani

ಚಳಿಗಾಲದಲ್ಲಿ ಬಿಸಿ ನೀರಿನ ಕೊಳದಲ್ಲಿ ಈಜಿದರೆ ಹೇಗಿರುತ್ತೆ! ಸಾಧ್ಯವಾ ಎಂದು ಕೇಳದಿರಿ. ರಾಜರಾಜೇಶ್ವರಿ ನಗರದ ಬಳಿ ಚನ್ನಸಂದ್ರದಲ್ಲಿ ಬಿಸಿ ನೀರಿನ ಈಜುಕೊಳವಿದೆ. ಇದೀಗ ಈ ಭಾಗದ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ನಸುಕಿನ ಚಳಿಯಲ್ಲಿಯೂ ಜನ ಈಜಾಡಲು ಮತ್ತು ಈಜು ಕಲಿಯಲು ಧಾವಿಸುತ್ತಿದ್ದಾರೆ. ಇನ್ನೇನು ಚಳಿಗಾಲ ಮುಗೀತಾ ಬರ್ತಿದೆ. ಒಮ್ಮೆ ನೀವೂ ಟ್ರೈ ಮಾಡಬಹುದು.

ಇದು ಒಳಾಂಗಣ ಈಜುಕೊಳವೂ ಆಗಿರುವುದರಿಂದ ಮಕ್ಕಳು ಹಾಗೂ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಈಜು ಕಲಿಯಲು ಮತ್ತು ಈಜಿನ ದಾಹ ತೀರಿಸಿಕೊಳ್ಳಲು ಬರುತ್ತಿದ್ದಾರೆ. ರಾಜರಾಜೇಶ್ವರಿ ನಗರ, ಚನ್ನಸಂದ್ರ, ಉತ್ತರಹಳ್ಳಿ ಸುತ್ತಮುತ್ತಲು ಅಪಾರ್ಟ್‌ಮೆಂಟ್‌ಗಳೇ ಹೆಚ್ಚಿವೆ. ಇಲ್ಲಿನ ಹಲವು ಅಪಾರ್ಟ್‌ಮೆಂಟ್‌ಗಳಲ್ಲಿ ಈಜುಕೊಳಗಳೂ ಇವೆ. ಅಲ್ಲದೆ ಈ ಭಾಗದಲ್ಲಿನ ಹಲವು ಕ್ಲಬ್‌ಗಳಲ್ಲಿಯೂ ಈಜುಕೊಳಗಳಿವೆ. ಆದರೆ ನವೆಂಬರ್‌ನಿಂದ ಫೆಬ್ರುವರಿವರೆಗಿನ ಚಳಿಗಾಲದಲ್ಲಿ ವಾತಾವರಣದ ಜತೆಗೆ ನೀರು ಕೂಡ ತಂಪಾಗಿರುವುದರಿಂದ ಹೆಚ್ಚಿನ ಜನರು ಈಜಾಡಲು ಬಯಸುವುದಿಲ್ಲ. ಇದೀಗ ಈ ಭಾಗದಲ್ಲಿ ಬಿಸಿ ನೀರಿನ ಈಜುಕೊಳ ಬಂದಿರುವುದು ಈಜು ಪ್ರಿಯರ ಉತ್ಸಾಹ ಹೆಚ್ಚಿಸಿದೆ.

ಬೆಂಗಳೂರಿನಲ್ಲಿ ನೂರಾರು ಈಜುಕೊಳಗಳಿವೆ. ಆದರೆ ಬಿಸಿ ನೀರಿನ ಈಜುಕೊಳವಿರಲಿಲ್ಲ. ಆ ಕೊರತೆಯನ್ನು ನೀಗಿಸುವ ಸಲುವಾಗಿಯೇ
ಎಂ.ಎನ್‌.ಸಿ. ಸ್ವಿಮಿಂಗ್‌ ಅಕಾಡೆಮಿ ಚನ್ನಸಂದ್ರದಲ್ಲಿ ಇದನ್ನು ಆರಂಭಿಸಿದೆ. ವರ್ಷದ ಹಿಂದೆಯೇ ಇಲ್ಲಿ ಒಳಾಂಗಣ ಈಜುಕೊಳ ಆರಂಭಿಸಿದ ಅಕಾಡೆಮಿಯು ಎರಡು ತಿಂಗಳ ಹಿಂದೆಯಷ್ಟೆ ಅದನ್ನು ಬಿಸಿನೀರಿನ ಈಜುಕೊಳವಾಗಿ ಪರಿವರ್ತಿಸಿದೆ.

‘ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿದ್ದೇವೆ. ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಮತ್ತು ಸುರಕ್ಷೆಗೆ ಒತ್ತು ನೀಡಿದ್ದೇವೆ. ಇದು ಒಳಾಂಗಣವಾಗಿರುವುದರಿಂದ ಬಿಸಿಲಿನ ತಾಪವಾಗಲಿ, ಮಳೆ, ಚಳಿ, ದೂಳಿನ ಸಮಸ್ಯೆಯೂ ಇಲ್ಲ. ನೀರಿನ ತಾಪಮಾನವನ್ನು ಚಳಿಗಾಲದಲ್ಲಿ 33 ಡಿಗ್ರಿ ಸೆಲ್ಸಿಯಸ್‌ ಇಡಲಾಗಿದೆ. ಬೇಸಿಗೆಯಲ್ಲಿ ಅದನ್ನು 20 ಡಿಗ್ರಿ ಸೆಲ್ಸಿಯಸ್‌ಗೆ ಇಳಿಸಲಾಗುವುದು’ ಎನ್ನುತ್ತಾರೆ ಎಂ.ಎನ್‌.ಸಿ. ಸ್ವಿಮಿಂಗ್‌ ಅಕಾಡೆಮಿಯ ಮಾಲೀಕ ಲೋಕೇಶ್‌.

‘ಕೊಳದ ನೀರು ತಣ್ಣಗಾಗುತ್ತಿದ್ದಂತೆ ಎರಡು ಗೀಜರ್ ಮಾದರಿಯ ಯಂತ್ರಗಳಿಂದ ಬಿಸಿ ನೀರು ಪೂರೈಕೆಯಾಗುವಂತೆ ಮಾಡಲಾಗಿದೆ. ಜತೆಗೆ ಕೊಳದ ನೀರನ್ನು ಶುದ್ಧೀಕರಿಸಲು ಎರಡು ಘಟಕಗಳನ್ನು ಅಳವಡಿಸಿದ್ದು, ಶುದ್ಧ ನೀರು ಕೊಳಕ್ಕೆ ಬರುವಂತೆ ವ್ಯವಸ್ಥೆ ಮಾಡಲಾಗಿದೆ’ ಎನ್ನುತ್ತಾರೆ ಅವರು.

‘ಕೊಳದ ನೀರನ್ನು ಶುದ್ಧೀಕರಿಸಲು ಕ್ಲೋರಿನ್‌, ಬ್ಲೀಚಿಂಗ್‌ ಸೇರಿದಂತೆ ಇತರ ಯಾವುದೇ ರಾಸಾಯನಿಕಗಳನ್ನು ಬಳಸುವುದಿಲ್ಲ. ಬದಲಿಗೆ ಸುಧಾರಿತ ಓಜೋನ್‌ ತಂತ್ರಜ್ಞಾನ ಬಳಸಿ ನೀರನ್ನು ಶುದ್ಧೀಕರಿಸಲಾಗುತ್ತಿದೆ. ಇದು ಪರಿಸರ ಸ್ನೇಹಿ ಕ್ರಮ. ಇದರಿಂದ ಕೊಳದಲ್ಲಿ ಈಜುವವರ ಚರ್ಮ ಕಪ್ಪಾಗುವುದಾಗಲಿ, ಕಾಂತಿ ಕುಂದುವುದಾಗಲಿ ಆಗುವುದಿಲ್ಲ’ ಎಂದು ಅವರು ಮಾಹಿತಿ ನೀಡುತ್ತಾರೆ.

ಬೆಳಿಗ್ಗೆ 5ರಿಂದ ರಾತ್ರಿ 10 ಗಂಟೆಯವರೆಗೆ ಈ ಈಜುಕೊಳ ತೆರೆದಿರುತ್ತದೆ. ಮಾಹಿತಿಗೆ 87222 85511/ 94828 84555.

**

ಬಿಸಿ ನೀರಿನ ಈಜುಕೊಳ ಸೌಲಭ್ಯಗಳು ಬೆಂಗಳೂರಿನಲ್ಲಿ ಶ್ರೀಮಂತರಿಗೂ ಸಿಗುವುದು ಕಷ್ಟ. ನಗರದ ಸಾಮಾನ್ಯ ಜನರಿಗೆ ಈ ಸೌಲಭ್ಯ ಸಿಗುವಂತಾಗಲಿ ಎಂಬ ಉದ್ದೇಶದಿಂದ ಚನ್ನಸಂದ್ರದಲ್ಲಿ ಇದನ್ನು ಆರಂಭಿಸಿದ್ದೇವೆ. ನಗರದ ಚನ್ನಮ್ಮನಕೆರೆ ಪ್ರದೇಶ, ಎಲೆಕ್ಟ್ರಾನಿಕ್‌ ಸಿಟಿಯಲ್ಲೂ ಇಂಥ ಈಜುಕೊಳ ತೆರೆಯಲು ಉದ್ದೇಶಿಸಲಾಗಿದೆ
- ಲೋಕೇಶ್, ಎಂಎನ್‌ಸಿ ಸ್ವಿಮ್ಮಿಂಗ್ ಆಕಾಡೆಮಿ ಮಾಲೀಕ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !