ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವುದೇ ಉದ್ದೇಶ: ಐವನ್‌ ಡಿಸೋಜ

ಭಾನುವಾರ, ಏಪ್ರಿಲ್ 21, 2019
26 °C

ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವುದೇ ಉದ್ದೇಶ: ಐವನ್‌ ಡಿಸೋಜ

Published:
Updated:
Prajavani

ಚಾಮರಾಜನಗರ: ‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ  ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಪಕ್ಷಗಳು ರಾಜ್ಯದಲ್ಲಿ ಕನಿಷ್ಠ 22 ಸ್ಥಾನಗಳಲ್ಲಿ ಗೆಲವು ಸಾಧಿಸುವ ನಿರೀಕ್ಷೆ ಇದೆ’ ಎಂದು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ ಮುಖ್ಯ ಸಚೇತಕ ಐವನ್‌ ಡಿಸೋಜ ವಿಶ್ವಾಸ ವ್ಯಕ್ತಪಡಿಸಿದರು.

‘ಆರ್.ಧ್ರುವನಾರಾಯಣ ಅವರು ಜನರ ಮನಸ್ಸಿನಲ್ಲಿರುವ ಸಂಸದ. ಜನಪರ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ರಾಜ್ಯದ ನಂಬರ್‌ ಒನ್‌ ಉತ್ತಮ ಸಂಸದ ಎಂಬ ಹೆಗ್ಗಳಿಕೆಯೂ ಇದೆ. ಅವರಿಗೆ ಚುನಾವಣೆ ಗೆಲ್ಲುವುದು ಕಷ್ಟವಾಗುವುದಿಲ್ಲ. 2 ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಂವಿಧಾನ ಬದಲಾಯಿಸಲು ಮುಂದಾಗಿರುವ ಬಿಜೆಪಿ ಅಧಿಕಾರಕ್ಕೆ ಬರಬಾರದು ಎನ್ನುವುದೇ ಜನರ ಹಾಗೂ ಮೈತ್ರಿ ಸರ್ಕಾರದ ಉದ್ದೇಶ. ಸಂವಿಧಾನ ಪಾಲನೆ ಎಲ್ಲರ ಕರ್ತವ್ಯ.  ದೇಶದ ಸಂವಿಧಾನವನ್ನೇ ಬದಲಾಯಿಸುತ್ತೇನೆ ಎನ್ನುವವರನ್ನು ಬಿಜೆಪಿ ಸಚಿವ ಸಂಪುಟದಲ್ಲೇ ಉಳಿಸಿಕೊಂಡಿದ್ದು ದುರ್ದೈವ. ತಪ್ಪು ಮಾಡಿದ್ದೇವೆ ಎಂದು ಜನರಿಗೆ ಈಗ ಅರಿವಾಗಿದೆ. ಆದ್ದರಿಂದ ಈ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್‌ ಪರ ಮತ ಚಲಾಯಿಸಲಿದ್ದಾರೆ’ ಎಂದರು.

‘ಪ್ರಧಾನಿ ಮೋದಿ ಅವರಿಂದಲೇ ಸರ್ಜಿಕಲ್‌ ಸ್ಟ್ರೈಕ್‌ ಆಯಿತು ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ. ಕ್ಷೇತ್ರವಾರು ಅಭಿವೃದ್ಧಿ ಮಾಡಿದ್ದೇವೆ ಎನ್ನುವುದನ್ನು ಸ್ವತಃ ಅಭ್ಯರ್ಥಿಗಳೇ ಹೇಳುತ್ತಿಲ್ಲ. ಸೇನಾ ಕಾರ್ಯಾಚರಣೆಯನ್ನು ಅದು ಬಂಡವಾಳದ ದಾಳವಾಗಿ ಬಳಸುತ್ತಿದೆ’ ಎಂದು ಆರೋಪಿಸಿದರು.

ಅಂದು ಚಾಯ್‌ವಾಲಾ, ಇಂದು ಚೌಕೀದಾರ್: ‘ಐದು ವರ್ಷಗಳ ಹಿಂದೆ ಚಾಯ್‌ವಾಲಾ ಎಂಬ ವಿಷಯ ಮುಂದಿಟ್ಟು ಚುನಾವಣೆ ಎದುರಿಸಿದರು. ಚಾಯ್‌ ಪೇ ಚರ್ಚೆ ನಡೆಯಿತು. ಇಂದು ಚೌಕೀದಾರ್‌ ಹೆಸರಿನಲ್ಲಿ ನಡೆಯುತ್ತಿದೆ. ಪ್ರಧಾನಿ ಅವರೇ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಅಲ್ಪಸಂಖ್ಯಾತರು ಹೆಚ್ಚಿರುವುದರಿಂದ ರಾಹುಲ್‌ ಗಾಂಧಿ ಅವರು ಕೇರಳದ ವಯನಾಡ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿರುವುದಾಗಿ ಹೇಳುತ್ತಿರುವ ಮೋದಿ ಅವರಿಗೆ ಒಂದೇ ಸಮುದಾಯದವರ ಬಗ್ಗೆ ಮಾತನಾಡುವುದು ವರ್ಚಸ್ಸು ತರುವಂತಹ ಮಾತಲ್ಲ. ಪ್ರಧಾನಿ ಆದವರಿಗೆ ಎಲ್ಲರೂ ಒಂದೇ. ಅಲ್ಪಸಂಖ್ಯಾತರಿಗೆ ಏನೂ ಮಾಡಿಲ್ಲ ಎಂಬ ಕೊರಗು ಶುರುವಾಗಿದೆಯೇ’ ಎಂದು ಪ್ರಶ್ನಿಸಿದರು.

ಮುಖಂಡರಾದ ಸೈಯದ್‌ ರಫೀ, ರಾಜು, ಫಿಯೋಜ್‌, ಅರುಣ್‌ ಕುಮಾರ್‌ ಇದ್ದರು.

ಕಾಂಗ್ರೆಸ್‌ನಿಂದ ಕ್ರಾಂತಿಕಾರಕ ಬದಲಾವಣೆ

‘ಬಡಜನರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ಪಕ್ಷದ ಪ್ರಣಾಳಿಕೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಘೋಷಿಸಿರುವುದು ರಾಷ್ಟ್ರದ ಕ್ರಾಂತಿಕಾರಕ ಬದಲಾವಣೆಯಾಗಲಿದೆ. ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಈ ಯೋಜನೆ ಘೋಷಿಸಲಾಗಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಬಡವರಿಗೆ ವರ್ಷಕ್ಕೆ ₹ 72 ಸಾವಿರ ಮೊತ್ತವನ್ನು ತಿಂಗಳಿಗೆ ಕನಿಷ್ಠ ಆದಾಯ ಖಾತರಿ ರೂಪದಲ್ಲಿ ನೀಡಲಿದೆ’ ಎಂದು ಐವನ್‌ ಡಿಸೋಜ ಹೇಳಿದರು.

‘ದೇಶದಲ್ಲಿನ ಜನಸಂಖ್ಯೆಯಲ್ಲಿ ಶೇ 20ರಷ್ಟು ಬಡ ಕುಟುಂಬಗಳಿಗೆ ಈ ಯೋಜನೆ ಅನುಕೂಲವಾಗಲಿದೆ. ಮಾಸಿಕವಾಗಿ ₹ 6 ಸಾವಿರ ಹಣ ಕುಟುಂಬದ ಖಾತೆಗೆ ಜಮೆಯಾಗಲಿದೆ’ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !