ರೈಲ್ ಮ್ಯೂಸಿಯಂ: ಚುಕುಬುಕು ಬಂಡಿಯ ಕಥೆ ಕೇಳೋಣ ಬನ್ನಿ

7

ರೈಲ್ ಮ್ಯೂಸಿಯಂ: ಚುಕುಬುಕು ಬಂಡಿಯ ಕಥೆ ಕೇಳೋಣ ಬನ್ನಿ

Published:
Updated:
Deccan Herald

ಭಾರತದ ನೆಲದಲ್ಲಿ ಮೊದಲು ರೈಲು ಓಡಿಸಿದ್ದು ಬ್ರಿಟಿಷರು. ಮೊದಲ ರೈಲು ಓಡಿದ್ದು ಏಪ್ರಿಲ್ 16, 1853ರಂದು, ಮುಂಬೈ– ಥಾಣೆ ನಡುವೆ. ಹೀಗೆ ದೇಶದಲ್ಲಿ ಆರಂಭವಾದ ಉಗಿಬಂಡಿಯ ಪಯಣ, ಕಾಲಚಕ್ರಗಳಲ್ಲಿ ಚಲಿಸುತ್ತಾ ಹಂತಹಂತವಾಗಿ ಬೆಳೆದು ಬುಲೆಟ್ ಟ್ರೈನ್ ರೂಪ ಪಡೆದುಕೊಂಡಿದೆ. ಇಂಥ 165 ವರ್ಷಗಳ ಸುಧೀರ್ಘ ಇತಿಹಾಸವಿರುವ ಭಾರತೀಯ ರೈಲ್ವೆಯ ಕಥೆಯನ್ನು ತಿಳಿಯುವ ಹಂಬಲ ನಿಮಗಿದ್ದರೆ ಪಾರಂಪರಿಕ ನಗರಿ ಮೈಸೂರಿಗೆ ಬರಬೇಕು. ಇಲ್ಲಿನ ರೈಲ್ವೆ ನಿಲ್ದಾಣ ಸಮೀಪದ ಸಿಎಫ್‌ಟಿಆರ್‌ಐ ಎದುರಿನ ಕೆಆರ್‌ಎಸ್ ರಸ್ತೆಯಲ್ಲಿರುವ ರೈಲ್ವೆ ಮ್ಯೂಸಿಯಂ ನೋಡಲೇ ಬೇಕು.

ಅಂದ ಹಾಗೆ ಇದು ದೇಶದ ಎರಡನೇ ರೈಲ್ವೆ ಮ್ಯೂಸಿಯಂ(ಮೊದಲನೆಯದು ದೆಹಲಿಯಲ್ಲಿದೆ). ದಕ್ಷಿಣ ವಿಭಾಗೀಯ ರೈಲ್ವೆ ಮ್ಯಾನೇಜರ್ ಆಗಿದ್ದ ಪಿ.ಎಂ.ಜೊಸೆಫ್ ಅವರ ನಿರಂತರ ಶ್ರಮದಿಂದ 1979 ರಲ್ಲಿ ಈ ಮ್ಯೂಸಿಯಂ ರೂಪುಗೊಂಡಿದೆ.

ಮ್ಯೂಸಿಯಂ ಸುತ್ತಾಡುತ್ತಾ..

ಮ್ಯೂಸಿಯಂ ಪ್ರವೇಶಿಸುತ್ತಿದ್ದ ಹಾಗೇ ರೈಲಿನ ಬಿಡಿಭಾಗಳಿಂದ ಮಾಡಿರುವ ಎರಡು ಸುಂದರ ಯಂತ್ರಮಾನವ ಕಲಾಕೃತಿಗಳು ದ್ವಾರಪಾಲಕರಂತೆ ನಿಮ್ಮನ್ನು ಸ್ವಾಗತಿಸುತ್ತವೆ. ಗಮ್ಮತ್ತಿನ ಸಂಗತಿಯೆಂದರೆ ಇಲ್ಲಿ ಟಿಕೆಟ್ ಪಡೆಯುವ ಕೌಂಟರ್ ಕೂಡಾ ಹಳೆಯ ರೈಲು ಎಂಜಿನ್ ಡಬ್ಬಿಯದು. ವಸ್ತುಸಂಗ್ರಹಾಲಯದ ವಿಶಾಲವಾದ ಬಯಲು ಆವರಣದಲ್ಲಿ ಶತಮಾನಕ್ಕೂ ಹಳೆಯದಾದ ನ್ಯಾರೋಗೇಜ್ ಮತ್ತು ಮೀಟರ್‌ಗೇಜ್‌ ರೈಲ್ವೆ ಎಂಜಿನ್‌ಗಳು, ಹಳೆಯ ಬೋಗಿಗಳು, ಕ್ರೇನ್‌ಗಳು, ವಿವಿಧ ಮಾದರಿ ಸಿಗ್ನಲ್‌ಗಳು, ಹಳಿಗಳು ಹೀಗೆ ರೈಲಿಗೆ ಸಂಬಂಧಿಸಿದ ಖಜಾನೆಯೇ ಇಲ್ಲಿದೆ. ಅವುಗಳೇ ತಮ್ಮ ಕಥೆಗಳನ್ನು ನಿರೂಪಿಸುವ ರೀತಿಯಲ್ಲಿ ಅವುಗಳ ಮುಂದೆ ಮಾಹಿತಿ ಫಲಕಗಳನ್ನು ಹಾಕಲಾಗಿದೆ.

ಗಮನಸೆಳೆಯುವ ‘ಗೇಜ್‌’

ಮ್ಯೂಸಿಯಂನಲ್ಲಿ 1963ರಲ್ಲಿ ನಿರ್ಮಾಣವಾದ YP2511 ಎಂಬ ಮೀಟರ್‌ಗೇಜ್ ಎಂಜಿನ್ ಗಮನಸೆಳೆಯುತ್ತದೆ. ಇದು 1993ರವರೆಗೂ ಕಾರ್ಯನಿರ್ವಹಿಸಿದೆ. ಇವತ್ತಿಗೂ ಸುಸ್ಥಿಯಲ್ಲಿದೆ. ಆಗ ಇದನ್ನು ₹57,791 ವೆಚ್ಚದಲ್ಲಿ ನಿರ್ಮಿಸಲಾಗಿತ್ತಂತೆ. ತೂಗು ಹಾಕಿರುವ ಫಲಕದಲ್ಲಿರುವ ಮಾಹಿತಿ ನೋಡಿ ಅಚ್ಚರಿ ಎನ್ನಿಸಿತು. ಅದರ ಪಕ್ಕದಲ್ಲಿ 1900ರಲ್ಲಿ ನಿರ್ಮಾಣವಾದ NWR119E ಹೆಸರಿನ ನ್ಯಾರೊ ಗೇಜ್ ಎಂಜಿನ್‌ ಇದ್ದು, ಇದಕ್ಕೆ ಇಂಧನವಾಗಿ ಕಲ್ಲಿದ್ದಲು ಬದಲು ಕಟ್ಟಿಗೆಯ ಉರುವಲುಗಳನ್ನು ಬಳಸುತ್ತಿದ್ದರಂತೆ.

ಮ್ಯೂಸಿಯಂನ ಪ್ರಮುಖ ಆಕರ್ಷಣೆಯೆಂ ದರೆ 1920ರಲ್ಲಿ ನಿರ್ಮಾಣವಾಗಿರುವ ಆಸ್ಟಿನ್ ರೈಲು ಕಾರ್. ಇದು ಮೊದಲು ಕಾರು ರೂಪದಲ್ಲಿದ್ದು ರಸ್ತೆ ಮೇಲೆ ಓಡಾಡುತ್ತಿತ್ತು. ರೈಲ್ವೆ ಅಧಿಕಾರಿಯೊಬ್ಬರು ಕಾರಿನ ಟೈರ್‌ಗಳನ್ನು ತೆಗೆದು ಅದನ್ನು ಹಳಿಗಳ ಮೇಲೆ ಓಡಾಡುವ ‘ರೈಲ್ ಕಾರ್’ ಆಗಿ ಪರಿವರ್ತಿಸಿದರಂತೆ. ಅದಕ್ಕೆ ಎರಡೂ ಹೆಸರನ್ನು ಈ ರೈಲಿಗೆ ಇಟ್ಟಿದ್ದಾರೆ.

ವಸ್ತುಸಂಗ್ರಹಾಲಯದ ಆವರಣದಲ್ಲಿರುವ 1885ರಲ್ಲಿ ನಿರ್ಮಾಣವಾದ ಕೈಚಾಲಿತ ಕ್ರೇನ್, 1934ರಲ್ಲಿ ತಯಾರಾದ ಹಬೆ ನೀರು ಪಂಪ್ ಪ್ರವಾಸಿಗರ ಗಮನ ಸೆಳೆಯುತ್ತವೆ. ಇಲ್ಲಿರುವ ಬ್ಯಾಟರಿ ಚಾಲಿತ ಮಿನಿರೈಲು ಮಕ್ಕಳ ಪ್ರಮುಖ ಆಕರ್ಷಣೆಯಾಗಿದೆ. ನಿರ್ಮಾಣಗೊಂಡು ಶತಮಾನ ಕಳೆದರೂ ಇನ್ನೂ ಸುಸ್ಥಿತಿಯಲ್ಲಿರುವ ರೈಲು ಎಂಜಿನ್‌ಗಳನ್ನು ನೋಡಿದಾಗ ಅಚ್ಚರಿಯೆನಿಸುತ್ತದೆ.

ಚಾಮುಂಡಿ ಗ್ಯಾಲರಿ

ವಸ್ತುಸಂಗ್ರಹಾಲಯದ ಆವರಣದಲ್ಲಿರುವ ಚಾಮುಂಡಿ ಗ್ಯಾಲರಿ ಇತಿಹಾಸಪ್ರಿಯರ ಆಕರ್ಷಣೆಯ ಕೇಂದ್ರಬಿಂದು. ಇಲ್ಲಿ ಉಗಿಬಂಡಿಯ ಆರಂಭದ ದಿನಗಳನ್ನು ಹಿಡಿದು, ಇಂದಿನ ಮೆಟ್ರೊ, ಬುಲೆಟ್ ಟ್ರೈನ್‌ವರೆಗೂ ವಿವಿಧ ಕಾಲಘಟ್ಟಗಳಲ್ಲಿ ಆದ ಬದಲಾವಣೆಗಳು ಮತ್ತು ಭವಿಷ್ಯದ ತಂತ್ರಜ್ಞಾನಗಳನ್ನು ವಿವರಿಸುವ ವರ್ಣಚಿತ್ರಗಳು, ಕಪ್ಪುಬಿಳುಪು ಚಿತ್ರಗಳು ಇವೆ. ಹಾಗೆಯೇ, ರೈಲ್ವೆ ಪತ್ರಿಕೆಗಳು, ಕಾಗದ ಪತ್ರಗಳು, ಪ್ರಶಸ್ತಿ ಪತ್ರಗಳು, ಅಂಚೆ ಚೀಟಿಗಳು, ನಾಣ್ಯಗಳು, ಟಿಕೆಟ್‌ಗಳು... ಹೀಗೆ ಇತಿಹಾಸವನ್ನು ನೆನಪಿಸುವ ವಸ್ತುಗಳ ಭಂಡಾರವೇ ಮ್ಯೂಸಿಯಂನಲ್ಲಿದೆ. ಇವುಗಳನ್ನು ನೋಡುತ್ತಾ ಸಾಗುತ್ತಿದ್ದರೆ ನಮಗೆ ಒಮ್ಮೆ ಕಾಲಯಂತ್ರದಲ್ಲಿ ಇತಿಹಾಸವನ್ನು ಸುತ್ತಿಬಂದಂತೆ ಎನ್ನಿಸುತ್ತದೆ.

ಶ್ರೀರಂಗ ಪೆವಿಲಿಯನ್

ಮ್ಯೂಸಿಯಂ ಆವರಣದಲ್ಲಿರುವ ‘ಶ್ರೀರಂಗ ಅಲಂಕಾರ ಮಂಟಪ’ ಪ್ರವಾಸಿಗರ ಆಕರ್ಷಣೆಗಳಲ್ಲಿ ಒಂದು. ಇಲ್ಲಿ 1899ರಲ್ಲಿ ನಿರ್ಮಾಣವಾದ ಮಹಾರಾಣಿ ಸಲೂನ್ ಎಂಬ ಆಕರ್ಷಕ ಐಷಾರಾಮಿ ರೈಲು ಇದೆ. ಅತ್ಯಂತ ವೈಭವಯುತವಾಗಿರುವ ಈ ರೈಲು ರಾಜಪರಿವಾರದವರಿಗೆ ಮಾತ್ರ ಮೀಸಲಾಗಿತ್ತು. ಇದನ್ನು ನೋಡಿದರೆ ಪುಟ್ಟ ಅರಮನೆ ನೋಡಿ
ದಂತೆ ಭಾಸವಾಗುತ್ತದೆ. ರೈಲಿನ ಬೋಗಿಗಳಲ್ಲೇ ಅಡುಗೆ ಮನೆ, ವಿಶ್ರಾಂತಿಕೋಣೆ, ಶೌಚಾಲಯ, ಸ್ನಾನದ ಮನೆ, ಸೇವಕರ ಮನೆ ಹೀಗೆ ಎಲ್ಲ ಸೌಲಭ್ಯಗಳು ಇರುವುದು ವಿಶೇಷ. ಆಗಿನ ಕಾಲದಲ್ಲಿ ಇದರ ವೆಚ್ಚ ₹29 ಸಾವಿರ ಎಂಬ ಮಾಹಿತಿ ಇಲ್ಲಿದೆ.

ಹಾಗೆಯೇ ಇದೇ ಪೆವಿಲಿಯನ್‌ನಲ್ಲಿ ಆಗಿನ ಕಾಲದ ವೈದ್ಯಕೀಯ ಉಪಕರಣಗಳು, ಅಲಂಕಾರಿಕ ವಸ್ತುಗಳು, ಕನ್ನಡಿಗಳು, ಟೆಲಿಫೋನ್, ಟೆಲಿಗ್ರಾಫ್, ಸಂಜ್ಞಾ ಸಲಕರಣೆಗಳು ಸೇರಿದಂತೆ ಹಳೆಯ ಕಾಲದಲ್ಲಿ ಉಪಯೋಗಿಸುತ್ತಿದ್ದ ರೈಲು ಸಾಮಗ್ರಿಗಳೂ ಇವೆ. ಶ್ರೀರಂಗಪಟ್ಟಣದ ರೈಲ್ವೆ ನಿಲ್ದಾಣದಿಂದ ಸ್ಥಳಾಂತರಿಸಿದ ಅಂದಚೆಂದದ ಕಂಬಗಳನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಸೋಮವಾರ ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಮ್ಯೂಸಿಯಂ ಪ್ರವಾಸಿಗರ ವೀಕ್ಷಣೆಗೆ ತೆರೆದಿರುತ್ತದೆ. ಹಿರಿಯರಿಗೆ ₹20 ಮತ್ತು ಮಕ್ಕಳಿಗೆ ₹10 ಪ್ರವೇಶ ಶುಲ್ಕವಿದೆ ಎಂದು ಮ್ಯೂಸಿಯಂ ಉಸ್ತುವಾರಿ ನೈರುತ್ಯ ರೈಲ್ವೆ ಇಲಾಖೆ ಆಶಿಶ್ ಗುಂಡಾಲ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !