ಅಜ್ಜಿಗುಂಡಿ ಜಲಧಾರೆ!

7

ಅಜ್ಜಿಗುಂಡಿ ಜಲಧಾರೆ!

Published:
Updated:

ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ಪರಿಸರದಲ್ಲಿ ಹೆಚ್ಚಿನ ಸಂಖ್ಯೆಯ ಜಲಪಾತಗಳಿವೆ. ಇವುಗಳ ಪೈಕಿ ಅಜ್ಜಿಗುಂಡಿ ಜಲಧಾರೆಯೂ ಒಂದು.

ಇದು ಯಲ್ಲಾಪುರ ತಾಲೂಕಿನಲ್ಲಿದೆ. ತಾಲೂಕು ಕೇಂದ್ರದಿಂದ ಇಡಗುಂಡಿ -ವಜ್ರಳ್ಳಿ ಮಾರ್ಗದಲ್ಲಿ ಹೋಗಬೇಕು. ಅಂದರೆ ಷಹರದಿಂದ ಸುಮಾರು ೨೦ ಕಿ. ಮೀ. ದೂರ ಕ್ರಮಿಸಿದಾಗ (ವಜ್ರಳ್ಳಿಯಿಂದ ಸ್ವಲ್ಪ ಹಿಂದೆಯೇ) ಬೀಗಾರ್ ಕತ್ರಿ ಸಿಗುತ್ತದೆ. ಅಲ್ಲಿಂದ ಬಲಭಾಗದ ಟಾರ್ ರಸ್ತೆಯಲ್ಲಿ ಸುಮಾರು ಒಂದು ಕಿ. ಮೀ. ಸಾಗಿದಾಗ ‘ಅಜ್ಜಿಗುಂಡಿ ಜಲಪಾತಕ್ಕೆ ಹೋಗುವ ಮಾರ್ಗ’ ಎಂದು ಸೂಚಿಸುವ ನಾಮಫಲಕವಿದೆ. ಅಲ್ಲಿಂದ ಎಡ ಭಾಗದ ಕಚ್ಚಾ ರಸ್ತೆಯ ಮೂಲಕ ಅನತಿ ದೂರ ಸಾಗಿ; ಪುನಃ ಬಲ ಭಾಗದ ರಸ್ತೆಯಲ್ಲಿ ಅರ್ಧ ಕಿ. ಮೀ. ಹೋಗಬೇಕು. ಈ ರಸ್ತೆಯು ಅಲ್ಲಿಯೇ ಕೊನೆಗೊಳ್ಳುತ್ತದೆ. ಅಲ್ಲೇ ಎರಡು ಮನೆಗಳು, ಸುತ್ತಮುತ್ತ ಸಮೃದ್ಧವಾದ ಅಡಿಕೆ, ತೆಂಗಿನ ತೋಟಗಳು ಕಾಣಸಿಗುತ್ತವೆ. ಇಲ್ಲಿಯವರೆಗೆ ದ್ವಿಚಕ್ರ ವಾಹನ ಅಥವಾ ದೊಡ್ಡ ವಾಹನವನ್ನು ತರಬಹುದು. ಅಲ್ಲಿಂದ ಎಡ ಭಾಗದ ಕಾಲು ದಾರಿಯಲ್ಲಿ , ಸುಮಾರು ಒಂದು ಪರ್ಲಾಂಗ ದೂರದವರೆಗೆ ಪಾದಯಾತ್ರೆ ಮಾಡುವುದು ಅನಿವಾರ್ಯ.

ಆ ಕಾಲ್ದಾರಿಯಲ್ಲಿ ಹೋಗುವಾಗ ಅಕ್ಕ ಪಕ್ಕದಲ್ಲಿ ತರತರದ ಬಣ್ಣದ ಗಿಡಗಳಿವೆ! ಸಾಲು ಸಾಲು ಅಡಿಕೆ ಮರಗಳನ್ನು ನೋಡುತ್ತಾ ಸಾಗುತ್ತಿದ್ದಂತೆಯೇ ಭೋರ್ಗರೆಯುವ ಜಲಪಾತದ ಸದ್ದು ಕೇಳಿಸುತ್ತದೆ. ಇಲ್ಲೇ ಹತ್ತಿರಲದಲ್ಲಿ ಜಲಧಾರೆ ಇರಬಹುದು ಎಂದು ಅನ್ನಿಸುವುದು ನಿಜ. ಆದರೆ ಜಲಪಾತವೇನೂ ಅಲ್ಲಿಂದ ನೋಡಲು ಸಿಗುವುದಿಲ್ಲ.

ಅಡಿಕೆ ತೋಟದ ಆ ಕಾಲು ದಾರಿಯಲ್ಲಿಯೇ ಸಾಗಿದಾಗ, ಕೃಷಿಕರೊಬ್ಬರಿಗೆ ಸೇರಿದ ಮನೆ ಎದುರಾಗುತ್ತದೆ. ಅವರ ಪುಟ್ಟ ಅಂಗಳವನ್ನು ದಾಟಿ, ಅನತಿ ದೂರ ಹೆಜ್ಜೆ ಹಾಕಿದರೆ ತಳಕೆಬೈಲ್ ಅಂಬಾಳ ಎಂಬ ಪುಟ್ಟ ಹಳ್ಳ ಸಿಗುತ್ತದೆ. ಈ ಹಳ್ಳವೇ ಜಲಧಾರೆಯಾಗಿ ಮೂರು ಹಂತದಲ್ಲಿ ಧುಮುಕುತ್ತವೆ. ಈ ಜಲಪಾತವನ್ನು ಅಲ್ಲಿನ ಅಡಿಕೆ ತೋಟ; ದಿಂಬದ ಮೇಲಿಂದ ನಿಂತು ವೀಕ್ಷಿಸಬಹುದು. ತುಸು ಪ್ರಯಾಸಪಟ್ಟು ಕೆಳಗಿಳಿದರೆ ಹಾಲ್ನೊರೆಯಾಗಿ, ವಿಶಾಲವಾಗಿ ಹರಡಿ ಭೋರ್ಗರೆಯುತ್ತಿರುವ ಈ ಜಲಧಾರೆಯ ವೈಭವ, ಸೊಬಗನ್ನು ಅತಿ ಸಮೀಪದಿಂದ ಆಸ್ವಾದಿಸಿ ಕಣ್ತುಂಬಿಕೊಳ್ಳಬಹುದು.

ಸುಮಾರು ೫೦ ಅಡಿ ಎತ್ತರದಿಂದ ಧುಮುಕುವ ಈ ಅಜ್ಜಿಗುಂಡಿ ಜಲಪಾತವು ನಿಸರ್ಗದ ಮಧ್ಯೆ ಅವಿತುಕೊಂಡಿದೆ. ಇಲ್ಲಿ ‘ಅಜ್ಜಿಗುಂಡಿ ಡಾಟ್ ಕಾಮ್‌’ ಎಂಬ ನಾಟಕ ಪ್ರದರ್ಶನಗೊಂಡು, ಲಿಮ್ಕಾ ದಾಖಲೆ ಆಗಿರುವುದು ಈ ಜಲಪಾತದ ಹೆಗ್ಗಳಿಕೆ. ಒಂದೆಡೆಗೆ ಅಡಿಕೆ ತೋಟದ ಸೊಬಗು, ಮತ್ತೊಂದೆಡೆ ಹಸಿರಿನಿಂದ ಕಂಗೊಳಿಸುವ ಪ್ರಕೃತಿಯ ಸೌಂದರ್ಯ ಇವೆರಡರ ಮಧ್ಯೆ ಶುಭ್ರವಾಗಿ ಹರಿಯುತ್ತಿದೆ ಜಲಧಾರೆ.

ಸುಧಾ: ಜೂನ್ 12, 2018ರ ಸಂಚಿಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !