ದೇವರ ಕೊಳದ ಬಳಿ ನಿಂತು...

7

ದೇವರ ಕೊಳದ ಬಳಿ ನಿಂತು...

Published:
Updated:
ದೇವರಿಯಾತಾಲ್‌ ಕೊಳದ ನೋಟ

‘ದೇವರಿಯಾತಾಲ್’

ವಾಹ್! ಹೆಸರೇ ಎಷ್ಟು ಚೆಂದವಾಗಿದೆ. ಸ್ಥಳ ಇನ್ನೆಷ್ಟು ಸುಂದರವಾಗಿರಬಹುದು ಎಂಬ ಕಲ್ಪನೆಯಲ್ಲಿಯೇ ಮುಂಜಾನೆ ಆರಂಭವಾಯಿತು ನಮ್ಮ ಪ್ರಯಾಣ.

ಹೃಷಿಕೇಶದಿಂದ ಸುಮಾರು 185 ಕಿ.ಮೀ. ದೂರದ ದಾರಿಯಲ್ಲಿ ದೇವಪ್ರಯಾಗ, ಶ್ರೀನಗರ, ರುದ್ರಪ್ರಯಾಗ, ಅಗಸ್ತ್ಯಮುನಿ ಮಾರ್ಗವಾಗಿ ಉಖೀಮಠಕ್ಕೆ ಬರಬೇಕು. ಮಾರ್ಗಮಧ್ಯೆ ಸಿಗುವ ಹೋಟಲ್, ದಾಬಾಗಳಲ್ಲೇ ಉಪಾಹಾರ ಮುಗಿಸಿಕೊಳ್ಳಬೇಕು. ಉದ್ದಕ್ಕೂ ಕಡಿದಾದ ಬೆಟ್ಟಗಳ ತಿರುವು ಮಾರ್ಗಗಳು. ಒಂದೆಡೆ ಎತ್ತರದ ಹಸಿರು ಹೊದ್ದ ಗಿರಿ ಶಿಖರಗಳು, ಮತ್ತೊಂದೆಡೆ ಆಳದ ಕಣಿವೆ. ಅಲ್ಲಿ ಹರಿವ ಗಂಗೆ ಪ್ರಯಾಣದುದ್ದಕ್ಕೂ ನಮ್ಮ ಜೊತೆಜೊತೆಯೇ ಹರಿದಳು.

ಅಂಥ ಎತ್ತರದ ಬೆಟ್ಟದಲ್ಲೂ ಜನವಸತಿಗಳು, ಕೃಷಿ ಭೂಮಿ, ವ್ಯಾಪಾರ ಕೇಂದ್ರಗಳು. ಇಂತಹ ಕಡೆ ಹೇಗೆ ಜೀವನ ಮಾಡುತ್ತಾರೋ ಎಂಬ ಅಚ್ಚರಿಯಲ್ಲಿಯೇ ದೇವಪ್ರಯಾಗ ತಲುಪಿದೆವು. ಅದು ಅಲಕಾನಂದ– ಭಾಗೀರಥಿ ನದಿಗಳ ಸಂಗಮ ಕ್ಷೇತ್ರ‌. ಎರಡೂ ನದಿಗಳ ಬಣ್ಣ ಬೇರೆ ಬೇರೆಯಾಗಿದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. 

ಅಲ್ಲಿಂದ ಮುಂದೆ ಪ್ರಯಾಣಿಸಿ ಮಧ್ಯಾಹ್ನದ ಹೊತ್ತಿಗೆ ಉಖೀಮಠ್ ತಲುಪಿದೆವು. ಇಲ್ಲಿರುವುದೇ ಓಂಕಾರೇಶ್ವರ ದೇವಾಲಯ. ಚಳಿಗಾಲದಲ್ಲಿ ಕೇದಾರನಾಥ ದೇವಾಲಯ ಮುಚ್ಚಿದ ಮೇಲೆ ಉತ್ಸವ ಡೋಲಿ, ಮಧ್ಯಮಹೇಶ್ವರ, ಇತರ ಪೂಜಾ ಉತ್ಸವ ಮೂರ್ತಿಗಳನ್ನು ಇಲ್ಲಿ ತಂದು ಚಳಿಗಾಲದ ಆರು ತಿಂಗಳು ಪೂಜಿಸಲಾಗುತ್ತದೆ. 

ದೇವಾಲಯ ಪ್ರಾಂಗಣದಲ್ಲಿಯೇ ಪ್ರಾಚೀನ ಉಖೀಮಠವೂ ಇದೆ. ಉಷಾಮಠವೆಂಬ ಮೂಲ ಹೆಸರು ಜನರ ಬಾಯಲ್ಲಿ ಉಖೀಮಠವಾಗಿದೆ. ಇಲ್ಲಿನ ಸ್ವಾಮಿಗಳು ಪ್ರಣವಾನಂದರು. ಇವರು ಮೂಲತಃ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ ಕಣಗುಪ್ಪೆ ಮಠದವರು, ಕನ್ನಡಿಗರು. ಅವರ ದರ್ಶನ ಮಾಡಿ ಕನ್ನಡದಲ್ಲೇ ಮಾತಾಡಿದೆವು. 

ಪುರಾಣ ಪ್ರಕಾರ ಬಾಣಾಸುರನ ಮಗಳು ಉಷಾ ಹಾಗೂ ಕೃಷ್ಣನ ಮೊಮ್ಮಗ ಅನಿರುದ್ಧನಿಗೂ ಇಲ್ಲೇ ವಿವಾಹವಾಯಿತೆಂಬ ಪ್ರತೀತಿ ಇದೆ. ಎಲ್ಲವನ್ನೂ ನೋಡಿಕೊಂಡು ಹೊರಬಂದಾಗ ಕಣ್ಸಿಳೆದದ್ದು ಮಠದ ನಾಮಫಲಕ. ಏಕೆಂದರೆ ಹಿಂದಿಯೊಂದಿಗೆ ಕನ್ನಡದಲ್ಲೂ ಫಲಕವಿದ್ದದ್ದು ಕಂಡು ಖಷಿಯಾಯಿತು.

ಅಲ್ಲಿಂದ ಹೊರಟು ದೇವರಿಯಾತಾಲ್ ಕಡೆಗೆ ಪ್ರಯಾಣ ಮುಂದುವರೆಸಿದೆವು. ಉಖೀಮಠ್‌ದಿಂದ ಅಲ್ಲಿಗೆ 14 ಕಿ.ಮೀ.ಗಳಷ್ಟು ದೂರ. ಕೇದಾರಕ್ಕೆ ಹೋಗುವ ದಾರಿಯಲ್ಲಿ ‘ಸಾರಿ’ ಎಂಬ ಹಳ್ಳಿ ಸಿಗುತ್ತದೆ. ಅಲ್ಲಿ ನಮ್ಮ ವಾಹನವನ್ನು ನಿಲ್ಲಿಸಿ ಅಲ್ಲಿಂದ ತಾಲ್ ಕಡೆಗೆ ಚಾರಣ ಕೈಗೊಳ್ಳಬೇಕು. ನೀರಿನ ಬಾಟಲ್ ಮಾತ್ರ ಹೆಗಲಿಗೇರಿಸಿ ಚಾರಣ ಶುರು ಮಾಡಿದೆವು. ಸುಮಾರು ಮೂರು ಕಿ.ಮೀ. ಏರುಹಾದಿಯಲ್ಲಿ ಹತ್ತುತ್ತಾ ಸಾಗಬೇಕು.

ಕಡಿದಾದ ದಾರಿ ಉರುಟಾದ ಕಲ್ಲುಗಳು, ಸ್ವಲ್ಪ ಎಚ್ಚರ ತಪ್ಪಿದರೆ ಜಾರುವ ಸಂಭವ. ಪ್ರಾರಂಭದಲ್ಲಿ ಸ್ವಲ್ಪ ದೂರಕ್ಕೇ ಏದುಸಿರು ಬಂದು ಗಂಟಲೊಣಗತೊಡಗಿತು. ನೀರು ಕುಡಿದು ದಣಿವಾರಿಸಿಕೊಂಡು ಮುಂದುವರಿದೆವು. ಸುಮಾರು ಎರಡೂವರೆ ಮೂರು ತಾಸಿನಲ್ಲಿ ಬೆಟ್ಟದ ಮೇಲ್ತುದಿ ತಲುಪಿದೆವು. ವಾವ್! ದೇವರಿಯಾತಾಲ್ ಅಂದರೆ ‘ದೇವರ ಕೊಳ’. ದೇವತೆಗಳೇ ನಭದಿಂದ ಭುವಿಗಿಳಿದು ಇಲ್ಲಿ ಬಂದು ವಿಹರಿಸುತ್ತಿದ್ದರೇನೋ ಎನ್ನುವಂತಿದೆ.

ಪ್ರಶಾಂತ ವಾತಾವರಣ, ತಿಳಿನೀರ ವಿಶಾಲ ಕೊಳ, ಹಕ್ಕಿಗಳ ಕಲರವ, ಸುತ್ತಲೂ ಹಸಿರ ಹೊದ್ದ ಭೂದೇವಿ, ತಿಳಿನೀಲ ಆಗಸದಲ್ಲಿ ತೇಲುವ ಬಿಳಿ ಮೋಡಗಳು, ದೂರದಲ್ಲಿ ಕಾಣುವ ಬೆಳ್ಳಿ ಬೆಟ್ಟ... ಎಲ್ಲವನ್ನೂ ನೋಡುತ್ತಾ ಹತ್ತಿ ಬಂದ ಆಯಾಸವೆಲ್ಲಾ ಮಾಯವಾಗಿ ನವಚೈತನ್ಯ ಬಂದಂತಾಗಿ ಹಸಿರು ಹಾಸಿನಲ್ಲಿ ಹಾಗೇ ಉರುಳಿಕೊಂಡೆವು. ನಂತರ ಕೊಳದ ಸುತ್ತಲೂ ಒಂದು ಸುತ್ತು ಸುತ್ತಿ ಬಂದು ಹತ್ತಿರದಲ್ಲಿದ್ದ ಅಂಗಡಿಯಲ್ಲಿ ಚಹಾ ಕುಡಿದೆವು.

ಆಗಲೇ ಸಂಜೆ 4.30 ಆಗುತ್ತಿತ್ತು, ತಣ್ಣಗೆ ಬೀಸುವ ಸುಳಿಗಾಳಿಗೆ ಮೈ ಸಣ್ಣಗೆ ನಡುಗುತ್ತಿತ್ತು. ಚಾರಣ ಬಂದ ಹಲವರು ರಾತ್ರಿ ಅಲ್ಲೇ ತಂಗಲು ಅರಣ್ಯ ಇಲಾಖೆಯವರು ನೀಡುವ ಟೆಂಟ್‌ಗಳಲ್ಲಿ ಬಿಡಾರ ಹೂಡಿದ್ದರು. ಹತ್ತಿ ಬರಲಾರದವರಿಗೆ ಅಲ್ಲಿ ಕುದುರೆ ವ್ಯವಸ್ಥೆ ಕೂಡ ಇತ್ತು. ಅಲ್ಲಿ ಹೋಗುವ ಪ್ರತಿಯೊಬ್ಬರೂ ಅರಣ್ಯ ಇಲಾಖೆಗೆ
₹ 50 ಪಾವತಿಸಬೇಕು. ಹಿರಿಯ ನಾಗರಿಕರಿಗೆ ವಿನಾಯಿತಿ ಇದೆ. ಒಂದು ರಾತ್ರಿ ತಂಗಲು ಟೆಂಟ್ ಒಂದಕ್ಕೆ ₹ 350, ಇಲಾಖೆಯವರೇ ಟೆಂಟ್ ಹಾಕಿಕೊಟ್ಟರೆ  ₹ 500  ಪಾವತಿಸಬೇಕು.

ಇದು ಸಮುದ್ರಮಟ್ಟದಿಂದ 7,999 ಅಡಿ ಎತ್ತರದಲ್ಲಿದೆ. ಆಕ್ಟೋಬರ್‌ನಿಂದ ಮಾರ್ಚ್ ಇಲ್ಲಿಗೆ ಬರುವುದಕ್ಕೆ ಸೂಕ್ತ ಕಾಲ. ಆ ಸಮಯದಲ್ಲಾದರೆ ಸುತ್ತಲೂ ಹಿಮಾಚ್ಛಾದಿತ ಬೆಟ್ಟವನ್ನೂ ನೋಡಬಹುದು. ಹುಣ್ಣಿಮೆಯಂದು ಇಲ್ಲಿ ಉಳಿದರೆ, ಪ್ರಶಾಂತ ಪ್ರಕೃತಿಯನ್ನು ತಿಂಗಳ ಬೆಳಕಿನಲ್ಲಿ ನೋಡುತ್ತಾ ಚಳಿಯ ಅನುಭವ ಪಡೆಯುವುದೇ ಮಜಾ. ಜೊತೆಗೆ ಬೆಚ್ಚಗಿನ ಬಟ್ಟೆ, ಟಾರ್ಚ್, ಮೊಬೈಲ್ ಪವರ್ ಬ್ಯಾಂಕ್ ಸಾಕಷ್ಟು ಆಹಾರ ಪಾನೀಯ ಒಯ್ಯುವುದು ಒಳಿತು.

ಉಮಾ ಮೋಹನಮುರಳಿ,
ಜೋಗಿ ಮಟ್ಟೀರಸ್ತೆ, 1ನೇ ತಿರುವು,
ಚಿತ್ರದುರ್ಗ. 9742888387.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !